ಸಂಡೂರು ಉಪ ಚುನಾವಣೆ| ಕಾಂಗ್ರೆಸ್‌ನ ಅನ್ನಪೂರ್ಣ ಗೆಲುವು, ರೆಡ್ಡಿ ಪಡೆಗೆ ಸೋಲು

Update: 2024-11-23 06:58 GMT

ರಾಜ್ಯ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಪೈಕಿ ಸಂಡೂರು ಕ್ಷೇತ್ರದ ಮತ ಎಣಿಕೆ ಬಹುತೇಕ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಇ ಅನ್ನಪೂರ್ಣ ಅವರು ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಬಂಗಾರು ಹನುಮಂತ ವಿರುದ್ಧ ಭರ್ಜರಿ ಜಯ ದಾಖಲಿಸಿರುವ ಅನ್ನಪೂರ್ನ ಅವರ ಗೆಲುವನ್ನು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸುವುದು ಮಾತ್ರ ಬಾಕಿ ಇದೆ.

ಗಣಿ ರೆಡ್ಡಿಗಳು ಮತ್ತು ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ನಡುವೆ ಭಾರೀ ಪ್ರತಿಷ್ಠೆಯ ಹಣಾಹಣಿಗೆ ಸಾಕ್ಷಿಯಾಗಿದ್ದ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದ ಅನ್ನಪೂರ್ಣ ಅವರು ಜಯ ದಾಖಲಿಸಿದ್ದಾರೆ.

ಅನ್ನಪೂರ್ಣ ಅವರ ಪತಿ, ಸಂಸದ ಇ ತುಕಾರಾಂ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಲೋಕಸಭಾ ಚುನಾವಣೆಯ ಕಣಕ್ಕಿಳಿದು ಜಯ ಗಳಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಾಗಿತ್ತು. ಕಾಂಗ್ರೆಸ್ ಪಕ್ಷ ತುಕಾರಾಂ ಅವರು ಕ್ಷೇತ್ರದಲ್ಲಿ ಹೊಂದಿರುವ ಪ್ರಭಾವ ಮತ್ತು ಜನಪ್ರಿಯತೆಯನ್ನೇ ನೆಚ್ಚಿ ಅವರ ಪತ್ನಿ ಅನ್ನಪೂರ್ಣ ಅವರಿಗೇ ಟಿಕೆಟ್ ನೀಡಿ ಕಣಕ್ಕಿಳಿಸಿತ್ತು.

ಮತ್ತೊಂದು ಕಡೆ ಕೋರ್ಟು ಕೇಸುಗಳ ಕಾರಣಕ್ಕೆ ಕಳೆದ ಒಂದು ದಶಕದಿಂದ ಬಳ್ಳಾರಿ ತಮ್ಮ ಭದ್ರಕೋಟೆಯ ಮೇಲಿನ ಹಿಡಿತ ಕಳೆದುಕೊಂಡಿದ್ದ ಗಣಿ ರೆಡ್ಡಿ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಕ್ಷೇತ್ರವನ್ನು ಮತ್ತೆ ತಮ್ಮ ವಶಕ್ಕೆ ಪಡೆಯುವ ಅವಕಾಶವಾಗಿ ಈ ಉಪ ಚುನಾವಣೆ ಎದುರಾಗಿತ್ತು. ಆ ಹಿನ್ನೆಲೆಯಲ್ಲಿಯೇ ಅವರು ತಮ್ಮ ಕಟ್ಟಾ ಶಿಷ್ಯ ಬಂಗಾರು ಹನುಮಂತ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಿ ಅವರ ಪರ ಭಾರೀ ಪ್ರಚಾರ ಕೈಗೊಂಡಿದ್ದರು. ಅವರೊಂದಿಗೆ ಸತತ ಚುನಾವಣಾ ಸೋಲುಗಳಿಂದ ಕಂಗೆಟ್ಟಿರುವ ಮಾಜಿ ಸಚಿವ ಶ್ರೀರಾಮುಲು ಕೂಡ ಪಕ್ಷ ಮತ್ತು ರಾಜಕಾರಣದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಈ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿದ್ದರು.

ಆದರೆ, ಅಂತಿಮವಾಗಿ ಸಂಡೂರಿನ ಮತದಾರ ಅನ್ನಪೂರ್ಣ ಅವರಿಗೆ ಮಣೆ ಹಾಕುವ ಮೂಲಕ ಅತ್ತ ರೆಡ್ಡಿ ರಾಜಕಾರಣ ಮತ್ತು ಬಿಜೆಪಿಯ ತಂತ್ರಗಾರಿಕೆಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಮತ್ತೊಂದು ಕಡೆ ಸಚಿವ ಸಂತೋಷ್ ಲಾಡ್ ಈ ಗೆಲುವಿನ ಮೂಲಕ ಮತ್ತೊಮ್ಮೆ ತಮ್ಮ ನಾಯಕತ್ವವನ್ನು ಸಾಬೀತು ಮಾಡಿದಂತಾಗಿದೆ.

Tags:    

Similar News