Sandalwood Success | ಹದಿನೆಂಟು ವರ್ಷದ ಬಳಿಕ ಮತ್ತೆ ಭರವಸೆಯ ಚಕ್ರ ತಿರುಗಿಸಿದ ಆಪತ್ಬಾಂಧವರು!

ಮುಳುಗಿಯೇ ಹೋಯಿತು ಎಂಬಂತಹ ಸ್ಥಿತಿಯಲ್ಲಿದ್ದ ಕನ್ನಡ ಚಿತ್ರರಂಗದ ಪಾಲಿಗೆ ದುನಿಯಾ ವಿಜಯ್ ಮತ್ತು ಗಣೇಶ್ ಆಪತ್ಬಾಂಧವರಂತೆ ಭರವಸೆಯಾಗಿ ನಿಂತಿದ್ದಾರೆ. ಆದರೆ, ಹೀಗೆ ಈ ಇಬ್ಬರು ಗೆಳೆಯರು ಚಂದನವನಕ್ಕೆ ಆಪತ್ಬಾಂಧವರಾಗಿರುವುದು ಇದೇ ಮೊದಲಲ್ಲ!

Update: 2024-08-23 02:00 GMT

ಕಳೆದ ಎಂಟು ತಿಂಗಳಿನಿಂದ ಒಂದೇ ಒಂದು ಹಿಟ್ ಚಿತ್ರವಿಲ್ಲದೆ, ಸ್ಟಾರ್ ನಟರ ಸಿನಿಮಾಗಳೇ ಬಿಡುಗಡೆಯಾಗದೆ ತಲ್ಲಣಿಸಿಹೋಗಿದ್ದ 'ಚಂದನ ವನ'ದಲ್ಲಿ ಈಗ ಭರವಸೆಯ ತಂಗಾಳಿ ಬೀಸತೊಡಗಿದೆ. ಅದಕ್ಕೆ ಕಾರಣ ʼದುನಿಯಾʼ ವಿಜಿ ಮತ್ತು ʼಮುಂಗಾರು ಮಳೆʼ ಗಣೇಶ್.

ಮುಳುಗಿಯೇ ಹೋಯಿತು ಎಂಬಂತಹ ಸ್ಥಿತಿಯಲ್ಲಿದ್ದ ಕನ್ನಡ ಚಿತ್ರರಂಗದ ಪಾಲಿಗೆ ದುನಿಯಾ ವಿಜಯ್ ಮತ್ತು ಗಣೇಶ್ ಅವರು ಆಪತ್ಬಾಂಧವರಂತೆ ಭರವಸೆಯಾಗಿ ನಿಂತಿದ್ದಾರೆ. ವಿಜಯ್ ಅಭಿನಯದ ʼಭೀಮಾʼ ಮತ್ತು ಗಣೇಶ್ ನಟನೆಯ ʼಕೃಷ್ಣಂ ಪ್ರಣಯ ಸಖಿʼ ಚಿತ್ರಗಳು ಸ್ಯಾಂಡಲ್‌ವುಡ್‌ ಹಪಾಹಪಿಸುತ್ತಿದ್ದ ʼಒಂದೇ ಒಂದು ಹಿಟ್ʼ ನಿರೀಕ್ಷೆಯನ್ನು ನಿಜ ಮಾಡಿವೆ. ಎರಡೂ ಸಿನಿಮಾಗಳು ಬಿಡುಗಡೆಯಾಗಿ ವಾರ ಕಳೆದರೂ ಬಾಕ್ಸ್ ಆಫೀಸಿನಲ್ಲಿ ಇನ್ನೂ ಹವಾ ತಗ್ಗದಂತೆ ಮುನ್ನುಗ್ಗುತ್ತಿವೆ.

ಕಳೆದ ಆರೆಂಟು ತಿಂಗಳಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾದರೂ, ಹೊಸ ಪ್ರಯೋಗದ, ಹೊಸ ನಿರೂಪಣೆಯ, ಹೊಸ ಕಥೆಯ, ಹೊಸ ಹೀರೋ- ಹೀರೋಯಿನ್‌ಗಳ ಹತ್ತಾರು ಸಿನಿಮಾಗಳು ತೆರೆ ಕಂಡರೂ ವೀಕ್ಷಕ ಮಹಾಪ್ರಭು ಸಿನಿಮಾ ಮಂದಿರಗಳಿಂದ ವಿಮುಖವಾಗಿದ್ದ. ಹಾಗಾಗಿ ಸಿನಿಮಾ ಉದ್ಯಮವೇ ನೆಲಕಚ್ಚಿತ್ತು. ಕನ್ನಡ ಸಿನಿ ಉದ್ಯಮದ ಈ ಪತನ ಯಾವ ಮಟ್ಟಿಗೆ ಉದ್ಯಮದವರನ್ನು ಕಂಗೆಡಿಸಿತ್ತು ಎಂಬುದಕ್ಕೆ ಮೊನ್ನೆ ಮೊನ್ನೆ ಉದ್ಯಮದ ಮಂದಿ ನಡೆಸಿದ ನಾಗಪೂಜೆ, ಹೋಮ-ಹವನಗಳೇ ಸಾಕ್ಷಿ.

ಅಲ್ಲದೆ, ಈ ಅವಧಿಯಲ್ಲಿ ಒಂದು ಅಂದಾಜಿನ ಪ್ರಕಾರ ರಾಜ್ಯಾದ್ಯಂತ 35-40 ಸಿನಿಮಾ ಥಿಯೇಟರುಗಳೇ ಮುಚ್ಚಿಹೋದವು. ನಿರ್ದೇಶಕರು, ನಿರ್ಮಾಪಕರು ದುಡಿಮೆ ಇಲ್ಲದೆ, ಕೆಲಸವಿಲ್ಲದೆ ಕಂಗೆಟ್ಟು ಚಿತ್ರರಂಗವನ್ನೇ ತೊರೆದ ಉದಾಹರಣೆಗಳೂ ಇವೆ. ಸಿನಿಮಾದ ಮೇಲಿನ ಪ್ರೀತಿ ಮತ್ತು ಭರವಸೆಯಿಂದ ಸಿನಿಮಾ ನಿರ್ಮಾಣಕ್ಕೆ, ನಿರ್ದೇಶನಕ್ಕೆ ಬಂದ ಹೊಸ ಯುವಕರು, ಕಷ್ಟಪಟ್ಟು, ಇಷ್ಟಪಟ್ಟು ಮಾಡಿದ ಸಿನಿಮಾಗಳನ್ನು ಜನ ನೋಡದೇ ನೆಲಕಚ್ಚಿದ ಆಘಾತದಲ್ಲಿ ಉದ್ಯಮವನ್ನೇ ತೊರೆದು ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ ನಿದರ್ಶನಗಳೂ ಇವೆ.

ಹೀಗೆ ನೆಲಕಚ್ಚಿದ್ದ ಉದ್ಯಮಕ್ಕೆ ಶ್ರಾವಣದ ಮೊದಲ ವಾರವೇ ಹೊಸ ಭರವಸೆಯ ಮಳೆ ತಂದಿದ್ದು ದುನಿಯಾ ವಿಜಯ್ ನಿರ್ದೇಶನ ಮತ್ತು ನಟನೆಯ ʼಭೀಮಾʼ ಸಿನಿಮಾ. ಆಗಸ್ಟ್ ಮೊದಲ ವಾರ ಬಿಡುಗಡೆಯಾದ ʼಭೀಮಾʼ ಮೊದಲ ದಿನದಿಂದಲೇ ಚಿತ್ರಮಂದಿರಗಳ ಮುಂದೆ ʼಹೌಸ್‌ಫುಲ್‌ʼ ಬೋರ್ಡ್ ನೇತು ಹಾಕಿಸಿತು. ಅದಾದ ಒಂದೇ ವಾರದಲ್ಲಿ ಬಿಡುಗಡೆಯಾದ ಗಣೇಶ್ ನಟನೆಯ, ಶ್ರೀನಿವಾಸರಾಜು ನಿರ್ದೇಶನದ ʼಕೃಷ್ಣಂ ಪ್ರಣಯ ಸಖಿʼ ಸಿನಿಮಾ ವರ್ಷಗಳ ಬಳಿಕ ಸಿನಿಮಾ ಮಂದಿರಗಳ ಎದುರು ʼಬ್ಲಾಕ್ ಟಿಕೆಟ್ʼ ಮಾರುವ ದೃಶ್ಯಗಳನ್ನು ಮರು ಸೃಷ್ಟಿಸಿತು. ಅಷ್ಟರಮಟ್ಟಿಗೆ ಈ ಎರಡೂ ಸಿನಿಮಾಗಳು ಕನ್ನಡ ಸಿನಿ ಉದ್ಯಮದ ಪಾಲಿಗೆ ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿಯ ಆಸರೆ ಎಂಬಂತೆ ಮರು ಜೀವ ನೀಡಿವೆ.

 

ಇದು ಚರಿತ್ರೆಯ ರಿ-ರಿಲೀಸ್

ಹೌದು, ಕನ್ನಡ ಸಿನಿಮಾ ರಂಗದಲ್ಲಿ ಅಬ್ಬರಿಸಿ ಬೊಬ್ಬಿರಿಯುವ ಮಟ್ಟಿನ ದೊಡ್ಡ ಫ್ಯಾನ್ ಫಾಲೋಯಿಂಗ್, ಅಥವಾ ದೊಡ್ಡ ಸ್ಟಾರ್ ಗಿರಿ ಹೊಂದದೇ ಇದ್ದರೂ ಗಣೇಶ್ ಮತ್ತು ದುನಿಯಾ ವಿಜಿ ತಮ್ಮದೇ ಆದ ಅಭಿಮಾನಿ ಬಳಗವನ್ನೂ, ತಮ್ಮದೇ ಆದ ಸ್ಟಾರ್ ಇಮೇಜನ್ನೂ ಹೊಂದಿದ್ದಾರೆ. ವಿಜಿ ಅವರಿಗೆ ಗ್ರಾಮೀಣ ಭಾಗದ, ತಳ ಸಮುದಾಯಗಳ ವಲಯದಲ್ಲಿ ದೊಡ್ಡ ಅಭಿಮಾನಿ ಬಳಗವಿದ್ದರೆ, ಗಣೇಶ್ ಅವರಿಗೆ ಮಧ್ಯಮ ವರ್ಗದ ಅರೆಪಟ್ಟಣ, ನಗರವಾಸಿ ಹುಡುಗರ ಅಭಿಮಾನಿ ಪಡೆ ಇದೆ. ಅಲ್ಲದೆ, ಅವರಿಗೆ ಹುಡುಗಿಯರ ಅಭಿಮಾನಿ ಪಡೆ ಕೂಡ ದೊಡ್ಡದಿದೆ.

ಅಷ್ಟಾಗಿಯೂ ಅವರನ್ನು ಕನ್ನಡ ಸಿನಿಮಾ ರಂಗ ಟಾಪ್ ಸ್ಟಾರ್ ನಟರೆಂದು ಪರಿಗಣಿಸಿದ್ದು, ಸಮ್ಮಾನಿಸಿದ್ದು ವಿರಳವೇ. ವಿಪರ್ಯಾಸವೆಂದರೆ; ಈ ಇಬ್ಬರು ನಟರೇ ಕನ್ನಡ ಸಿನಿಮಾದ ಸಂಕಷ್ಟದ ಹೊತ್ತಲ್ಲಿ ಆಪತ್ಬಾಂಧವರಾಗಿ ಒದಗಿ ಬಂದಿದ್ದಾರೆ.

ಆದರೆ, ಹೀಗೆ ಈ ಇಬ್ಬರು ಗೆಳೆಯರು, ಭರವಸೆ ಕಳೆದುಕೊಂಡು ಮಂಕಾದ ಹೊತ್ತಿನಲ್ಲಿ ಸಿನಿಮಾ ರಂಗಕ್ಕೆ ಹೊಸ ಜೀವಂತಿಕೆ ತುಂಬುತ್ತಿರುವುದು ಇದೇ ಮೊದಲಲ್ಲ. 2006ರ ಡಿಸೆಂಬರ್ 29ರಂದು ʼಮುಂಗಾರು ಮಳೆʼ ಮತ್ತು ಬಳಿಕ 2007ರ ಫೆಬ್ರವರಿ 23ರಂದು ʼದುನಿಯಾʼ ಬಿಡುಗಡೆಯಾದಾಗ ಕೂಡ ಕನ್ನಡ ಸಿನಿಮಾ ರಂಗ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿತ್ತು. ಸುದೀಪ್ ಅವರ ʼಮೈ ಆಟೋಗ್ರಾಫ್ʼ, ಪ್ರೇಮ್ ಅವರ ʼಜೊತೆಜೊತೆಯಲಿʼ, ಪುನೀತ್ ಅವರ ʼಅಜಯ್ʼ ಸೇರಿದಂತೆ ಒಂದೆರಡು ಸಿನಿಮಾಗಳನ್ನು ಹೊರತುಪಡಿಸಿ ಉಳಿದಂತೆ ಶಿವರಾಜ್‌ಕುಮಾರ್, ರವಿಚಂದ್ರನ್, ವಿಷ್ಣುವರ್ಧನ್, ಅಂಬರೀಶ್, ದರ್ಶನ್ ಸೇರಿದಂತೆ ಆ ವರ್ಷ ಬಿಡುಗಡೆಯಾದ ಸ್ಟಾರ್ ನಟರ ಚಿತ್ರಗಳೂ ಸಾಲುಸಾಲಾಗಿ ತೋಪಾಗಿದ್ದವು.

ಅಂತಹ ಹೊತ್ತಲ್ಲಿ ಬಂದ ಯೋಗರಾಜ್ ಭಟ್ಟರ ʼಮುಂಗಾರು ಮಳೆʼ ಮತ್ತು ಸೂರಿ ಅವರ ʼದುನಿಯಾʼ ಸಿನಿಮಾಗಳೆರಡೂ ಭಿನ್ನ ಕಥೆ, ನಿರೂಪಣೆ ಮತ್ತು ಹೊಸಬರ ನಟನೆಯ ಮೂಲಕ ಕನ್ನಡ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದಿದ್ದವು. ಎರಡೂ ಸಿನಿಮಾಗಳ ದಶಕಗಳ ಕಾಲ ಕನ್ನಡ ಚಿತ್ರರಂಗ ಕಂಡಿರದ ದೊಡ್ಡ ಯಶಸ್ಸನ್ನು ಕಂಡಿದ್ದವು. ʼಮುಂಗಾರು ಮಳೆʼ ಸಿನಿಮಾ ಗಣೇಶ್ ಅವರಿಗೆ ಮತ್ತು ʼದುನಿಯಾʼ ಸಿನಿಮಾ ವಿಜಯ್ ಅವರನ್ನು ಚಿತ್ರರಂಗದ ಹೊಸ ತಾರೆಗಳನ್ನಾಗಿ ಮಾಡಿದ್ದವು.

ಇದೀಗ ಮತ್ತೆ ಕಾಲಚಕ್ರ ತಿರುಗಿ ಬಂದಿದೆ. ಅದೇ ಇಬ್ಬರು ಗೆಳೆಯರ ಸಿನಿಮಾಗಳು ಅದೇ ರೀತಿಯಲ್ಲಿ ಹೊಸ ಕಥೆ, ಹೊಸ ನಿರೂಪಣೆ ಮತ್ತು ಹೊಸತನದ ಮೇಕಿಂಗ್ ಮೂಲಕ, ಚಿತ್ರಮಂದಿರಗಳಿಗೆ ಬೆನ್ನು ಹಾಕಿದ್ದ ಪ್ರೇಕ್ಷಕರನ್ನು ಮತ್ತೆ ಕರೆತಂದಿವೆ. ಭರವಸೆಯ ಚಕ್ರವನ್ನು ಮತೆ ಹೊರಳಿಸಿವೆ.

ಸಿನಿಮಾ ವಿಮರ್ಶಕ, ಪತ್ರಕರ್ತ ವಿಜಯ್ ಭರಮಸಾಗರ ಈ ಇಬ್ಬರು ನಟರ ಈ ಕಾಕತಾಳೀಯ ಯಶಸ್ಸು ಮತ್ತು ಸಿನಿಮಾ ರಂಗದ ಭರವಸೆಯ ಕುರಿತು ದ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡುತ್ತಾ, “2006 ಒಂದರ್ಥದಲ್ಲಿ ಕನ್ನಡ ಸಿನಿಮಾ ರಂಗದ ಪರ್ವ ಕಾಲ. ಮುಂಗಾರು ಮಳೆ ಮತ್ತು ದುನಿಯಾ ಸಿನಿಮಾಗಳ ಮೂಲಕ ಸಿನಿಮಾದ ನಿರೂಪಣೆ ಮತ್ತು ಕಂಟೆಂಟ್ ನ ವಾಡಿಕೆಯನ್ನು ಬದಲಿಸಿದ ವರ್ಷ ಅದು. ಅದೇ ಕಾರಣಕ್ಕೆ ಸಿನಿಮಾದಿಂದ ವಿಮುಖರಾಗಿದ್ದ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆ ತಂದ ಹೆಗ್ಗಳಿಕೆ ಕೂಡ ಆ ಎರಡೂ ಸಿನಿಮಾಗಳಿಗೆ, ಆ ಮೂಲಕ ಆ ಸಿನಿಮಾಗಳ ನಿರ್ದೇಶಕರು ಮತ್ತು ನಟರಿಗೆ ಸಲ್ಲುತ್ತದೆ” ಎಂದರು.

ಹಾಗೇ, “18 ವರ್ಷಗಳ ಬಳಿಕ ಇದೀಗ ಕನ್ನಡ ಸಿನಿಮಾ ರಂಗ ಸಂಕಷ್ಟದ ಸುಳಿಗೆ ಸಿಲುಕಿ ಮುಳುಗುವ ಹಡಗಿನಂತಾಗಿರುವಾಗ ಮತ್ತೆ ಆ ಇಬ್ಬರು ನಟರ ಸಿನಿಮಾಗಳೇ ಹೊಸ ಭರವಸೆ ಮೂಡಿಸಿವೆ. ಸುದೀಪ್, ದರ್ಶನ್, ಶಿವಣ್ಣ ಅವರಂಥ ಸ್ಟಾರ್ ನಟರ ಸಿನಿಮಾಗಳೇ ಸೋಲುವ ವಾತಾವರಣದಲ್ಲಿ, ಸಿನಿಮಾಗಳಿಗೆ ಹಾಕಿದ ಕಾಸು ವಾಪಸ್ ಬರಲಾರದ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ ಇರುವಾಗ ಗಣೇಶ್ ಮತ್ತು ದುನಿಯಾ ವಿಜಯ್ ಸಿನಿಮಾಗಳೇ ಮತ್ತೆ ಸೊರಗಿದ ಸಿನಿ ರಂಗಕ್ಕೆ ಜೀವ ತಂದಿವೆ. ಎರಡೂ ಸಿನಿಮಾಗಳು ಗೆದ್ದಿರುವುದು ಗಟ್ಟಿ ಕಥೆ, ನಿರೂಪಣೆಯಿಂದಾಗಿಯೇ. ಅಂದೂ ಮುಂಗಾರು ಮಳೆ ಮತ್ತು ದುನಿಯಾ ಗೆದ್ದಿದ್ದು ಕೂಡ ಅದೇ ಕಾರಣಕ್ಕೆ. ಸಾಮಾಜಿಕ ಕಾಳಜಿಯ ಕಥೆಯೊಂದಿಗೆ ಮಾಸ್ ಪೇಕ್ಷಕರನ್ನು ʼಭೀಮಾʼ ಚಿತ್ರಮಂದಿರಗಳಿಗೆ ಸೆಳೆದಿದ್ದರೆ, ನವಿರಾದ ಪ್ರೇಮಕಥೆಯೊಂದಿಗೆ ʼಕೃಷ್ಣಂ ಪ್ರಣಯ ಸಖಿʼ ಫ್ಯಾಮಿಲಿ ವೀಕ್ಷಕರನ್ನು ಮತ್ತೆ ಥಿಯೇಟರಿಗೆ ಕರೆತಂದಿದೆ” ಎಂದು ವಿಜಯ್ ಭರಮಸಾಗರ ವಿಶ್ಲೇಷಿಸಿದರು.

ಹಾಗೇ, "ಮುಚ್ಚಿಹೋಗಿದ್ದ ರಾಜ್ಯದ 26 ಚಿತ್ರಮಂದಿರಗಳು ಭೀಮಾ ಸಿನಿಮಾದಿಂದಾಗಿ ಮತ್ತೆ ಶೋ ಪ್ರದರ್ಶಿಸುತ್ತಿವೆ ಎಂಬುದೇ ಆ ಚಿತ್ರದ ದೊಡ್ಡ ಯಶಸ್ಸಿಗೆ ನಿದರ್ಶನ" ಎಂದೂ ವಿಜಯ್‌ ಮಾತು ಸೇರಿಸಿದರು.

18 ವರ್ಷಗಳ ಹಿಂದೆ ಸ್ಲಂ ಬದುಕಿನ ಅನಿಶ್ಷಿತತೆ ಮತ್ತು ಅಹಾಯಕತೆಯನ್ನೇ ತೆರೆಯ ಮೇಲೆ ತಂದು ಗೆದ್ದಿದ್ದ ʼದುನಿಯಾʼ ಸಿನಿಮಾ ವಿಜಯ್ ಅವರಿಗೆ ʼದುನಿಯಾ ವಿಜಿʼ ಎಂಬ ಟ್ಯಾಗ್ ಲೈನ್ ಕೊಡುವ ಮಟ್ಟಿಗೆ ಐಡೆಂಟಿಟಿ ಕೊಟ್ಟಿತ್ತು. ಈಗ ಸ್ವತಃ ವಿಜಯ್ ಅವರೇ ಕಥೆ, ಚಿತ್ರಕರ್ಥೆ ಬರೆದು ನಿರ್ದೇಶಿಸಿ, ನಟಿಸಿರುವ ʼಭೀಮಾʼ ಅದೇ ಸ್ಲಂನ ಬದುಕಿನ ಮತ್ತೊಂದು ದುರಂತವನ್ನು ಮತ್ತು ಅದಕ್ಕೆ ಚಿಕಿತ್ಸೆಯನ್ನೂ ತೆರೆಯ ಮೇಲೆ ತಂದಿದೆ.

ಹಾಗೇ ಆಗ, ಒಂದು ಕೌಟುಂಬಿಕ ಕಥೆಯ ನಡುವೆ ನವಿರು ಪ್ರೇಮವನ್ನು ಹೆಣೆದು ʼಮಾತು ಮತ್ತು ನಿರೂಪಣೆʼಯ ಮೂಲಕವೇ ಗೆದ್ದು ಗಣೇಶ್ ಅವರಿಗೆ ಸ್ಟಾರ್ ಗಿರಿ ತಂದುಕೊಟ್ಟಿದ್ದ ʼಮುಂಗಾರು ಮಳೆʼಯಂತೆಯೇ ಇದೀಗ ʼಕೃಷ್ಣ ಪ್ರಣಯ ಸಖಿʼ ಕೂಡ ನವಿರು ಪ್ರೇಮ ಕಥೆಯನ್ನು ಕೌಟುಂಬಿಕ ಫೇಮಿನೊಳಗೆ ಹೆಣೆದು ಗೆದ್ದಿದೆ. ಕಥೆ, ನಿರೂಪಣೆಯ ವಿಷಯದಲ್ಲೂ ಇಬ್ಬರೂ ನಟರ ಸಿನಿಮಾಗಳು ಹದಿನೆಂಟು ವರ್ಷದ ಬಳಿಕ ಅದೇ ಸಾಮ್ಯತೆ ಹೊಂದಿವೆ ಎಂಬುದು ಮತ್ತೊಂದು ವಿಶೇಷ.

Tags:    

Similar News