ಸಾಹಿತ್ಯ ಸಮ್ಮೇಳನ ವಿವಾದ: ಕನ್ನಡದ ಅಸ್ಮಿತೆ ಉಳಿಸುವ ನುಡಿ ತೇರಾಗಲಿ; ಸವಿನುಡಿಯಲ್ಲೇ ಆಯೋಜಕರ ಕಿವಿಹಿಂಡಿದ್ದ ಎಸ್‌ಎಂಕೆ
ಕನ್ನಡ ಸಾಹಿತ್ಯದ ಕ್ಷೇತ್ರದ ಸಾಧನೆ, ವೇದನೆಗಳ ಕುರಿತ ರಚನಾತ್ಮಕ ಚರ್ಚೆಯ ವೇದಿಕೆಯಾದ ಸಾಹಿತ್ಯ ಸಮ್ಮೇಳನಕ್ಕೆ ವಿವಾದಗಳು ಅಂಟಿಕೊಂಡಿರುವಾಗಲೇ ಮಾಜಿ ಸಿಎಂ ಎಸ್ .ಎಂ. ಕೃಷ್ಣ ಅವರು ನಿಧನಕ್ಕೂ ವಾರದ ಹಿಂದೆ ಸಮ್ಮೇಳನಕ್ಕೆ ಶುಭ ಕೋರಿ ಪತ್ರ ಬರೆದಿದ್ದಾರೆ.;
ಸಕ್ಕರೆ ನಗರಿ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಗರಿಗೆದರಿದೆ. ಆದರೆ, ಈ ನುಡಿಜಾತ್ರೆಯ ಸಂಭ್ರಮ ಸಾಹಿತ್ಯ ಹೊರತಾದ ಅನ್ಯ ವಿಚಾರಗಳ ಚರ್ಚೆಗೆ ವೇದಿಕೆಯಾಗಿದೆ.
ಕಸಾಪ ಅಧ್ಯಕ್ಷರ ಏಕಪಕ್ಷೀಯ ನಿರ್ಣಯ, ಸಮ್ಮೇಳನಗಳಿಗೆ ಸಾಹಿತ್ಯೇತರರ ಆಯ್ಕೆ, ಮಾಂಸಾಹಾರದ ಬೇಡಿಕೆ ವಿಚಾರಗಳು ನುಡಿಜಾತ್ರೆಯ ಆಶಯಗಳನ್ನು ಅಣಕಿಸುವಂತಿವೆ. ಕನ್ನಡ ಸಾಹಿತ್ಯದ ಕ್ಷೇತ್ರದ ಸಾಧನೆ, ವೇದನೆಗಳ ಕುರಿತ ರಚನಾತ್ಮಕ ಚರ್ಚೆಗೆ ವೇದಿಕೆಯಾಗಿರುವ ಸಾಹಿತ್ಯ ಸಮ್ಮೇಳನ ವಿವಾದಗಳಿಂದ ಗೊಂದಲದ ಗೂಡಾಗಿದೆ.
ಸಾಹಿತ್ಯ ಕ್ಷೇತ್ರದ ಪೋಷಕರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯಲ್ಲಿ ಐದು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದ ಮಾಜಿ ಸಿಎಂ ದಿವಂಗತ ಎಸ್.ಎಂ. ಕೃಷ್ಣ ಅವರು ಅಗಲಿಕೆಗೂ ಮುನ್ನ ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಶುಭ ಕೋರಿ ಪತ್ರ ಬರೆದಿದ್ದಾರೆ.
ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಮೂರನೇಯದ್ದಾಗಿದೆ. ಈ ಹಿಂದೆ 1971ರಲ್ಲಿ ಜಯದೇವಿ ತಾಯಿ ಲಿಗಾಡೆ ಅಧ್ಯಕ್ಷತೆಯಲ್ಲಿ ಮೊದಲ ಸಮ್ಮೇಳನ ನಡೆದಿತ್ತು. 1994 ರಲ್ಲಿ ಚದುರಂಗ ಅಧ್ಯಕ್ಷತೆಯಲ್ಲಿ ಎರಡನೇ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿತ್ತು. ಈಗ ಜಾನಪದ ವಿದ್ವಾಂಸರಾದ ಗೋ.ರು.ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಮೂರನೇ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಸಜ್ಜಾಗಿದೆ.
ಎಸ್‌ಎಂಕೆ ಅವಧಿಯ ಸಮ್ಮೇಳನಗಳು
ಎಸ್.ಎಂ. ಕೃಷ್ಣ ಅವರು 1999 ರಿಂದ 2004 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಿಭಾಯಿಸಿದ್ದರು. ಇವರ ಅವಧಿಯಲ್ಲಿ ಐದು ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿವೆ.
1999 ರಲ್ಲಿ ಎಸ್.ಎಲ್.ಭೈರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕನಕಪುರ ಸಾಹಿತ್ಯ ಸಮ್ಮೇಳನ, 2000ರಲ್ಲಿ ಶಾಂತಾದೇವಿ ಮಾಳವಾಡ ಅಧ್ಯಕ್ಷತೆಯಲ್ಲಿ ನಡೆದ ಬಾಗಲಕೋಟೆ ಸಮ್ಮೇಳನ, 2002 ರಲ್ಲಿ ಯು.ಆರ್. ಅನಂತಮೂರ್ತಿ ಅಧ್ಯಕ್ಷತೆಯ ತುಮಕೂರು ಸಾಹಿತ್ಯ ಸಮ್ಮೇಳನ, 2003 ಮಾರ್ಚ್ ತಿಂಗಳಲ್ಲಿ ನಡೆದ ಪಾಟೀಲ ಪುಟ್ಟಪ್ಪ ಅಧ್ಯಕ್ಷತೆಯ ಬೆಳಗಾವಿ ಸಾಹಿತ್ಯ ಸಮ್ಮೇಳನ ಹಾಗೂ 2003 ಡಿಸೆಂಬರ್ನಲ್ಲಿ ನಡೆದ ಕಮಲಾ ಹಂಪನಾ ಅಧ್ಯಕ್ಷತೆಯ ಮೂಡಬಿದರೆ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ, ಕನ್ನಡ ನಾಡು-ನುಡಿ ಕುರಿತು ಚರ್ಚೆಗಳಿಗೆ ವೇದಿಕೆಯಾಗಿತ್ತು.
ಎಸ್ಎಂಕೆ ಬರೆದ ಪತ್ರದಲ್ಲೇನಿದೆ?
ಮಂಡ್ಯ ಜಿಲ್ಲೆಯವರೇ ಆದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ನಿಧನಕ್ಕೂ ವಾರದ ಹಿಂದೆ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಶುಭ ಹಾರೈಸಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಸಾಹಿತ್ಯ ಸಮ್ಮೇಳನಗಳು ಜನಜಾತ್ರೆಯಂತಾಗದೇ ಕನ್ನಡದ ಅಸ್ತಿತ್ವ, ಅಸ್ಮಿತೆ ಸಾರುವ ಹಬ್ಬವಾಗಬೇಕು ಎಂದು ಹೇಳುವ ಮೂಲಕ ಕನ್ನಡದ ಬಗೆಗಿನ ತಮ್ಮ ಕಳಕಳಿಯನ್ನು ತೋರ್ಪಡಿಸಿದ್ದಾರೆ.
ತಂತ್ರಜ್ಞಾನದೊಂದಿಗೆ ಕನ್ನಡದ ಆವಿಷ್ಕಾರಗಳು ಪರಿಷ್ಕೃತಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಬಳಕೆಗೆ ವೇದಿಕೆ ಒದಗಿಸಿವೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ವಾಂಸರ ಲೇಖನಗಳು, ಪುಸ್ತಕಗಳು ಹಾಗೂ ಬರವಣಿಗೆಗಳು ಹೊರಬಂದು ಓದುಗರಿಗೆ ಸವಿಯೂಟ ಉಣಬಡಿಸಿವೆ ಎಂದು ಹೇಳಿದ್ದಾರೆ.
ಎಸ್.ಎಂ. ಕೃಷ್ಣ ಅವರ ಪತ್ರದ ಸಾರಾಂಶ ಇಂತಿದೆ.
ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನ ಶುಭಾಶಯಗಳು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿಯ ಫಲವಾಗಿ ರೂಪುಗೊಂಡ ಮಂಡ್ಯ ಜಿಲ್ಲೆ ನಾಡಿನಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಭಾಷಿಕರಿರುವ ಜಿಲ್ಲೆ. ಇಂತಹ ಐತಿಹ್ಯವುಳ್ಳ ನಮ್ಮ ಮಂಡ್ಯ ಜಿಲ್ಲೆಯಲ್ಲಿ 3ನೇ ಬಾರಿಗೆ ಆಯೋಜನೆಗೊಂಡಿರುವ ಕನ್ನಡದ ಸಿರಿಹಬ್ಬವು ಯಶಸ್ವಿಯಾಗಿ ಜರುಗಲೆಂದು ಶುಭ ಹಾರೈಸುತ್ತೇನೆ ಎಂದು ಬರೆದಿದ್ದಾರೆ.
ಮೈಸೂರಿನ ಮಹಾರಾಜರಾಗಿದ್ದ ಜನಾನುರಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ರವರು ಕನ್ನಡದ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ ಪ್ರತಿಷ್ಠಾಪಿಸಿದರು. ಅಂದಿನಿಂದ ಕನ್ನಡದ ನುಡಿಹಬ್ಬ ಆಳುವ ಸರ್ಕಾರಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗುತ್ತಾ ಬಂದಿದೆ. ಕನ್ನಡ ಸಾರಸ್ವತಾ ಲೋಕದ ಹಲವು ಹಿರಿಯ ಸಾಹಿತಿಗಳು ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡದ ತೇರನ್ನು ಎಳೆಯುವುದರ ಜೊತೆಗೆ ಕನ್ನಡ ಭಾಷೆಯನ್ನು ಪ್ರಚುರ ಪಡಿಸುತ್ತಾ ಕನ್ನಡದ ಉಳಿವಿಗಾಗಿ ಶ್ರಮಿಸಿದ್ದಾರೆ. ಇಂತಹವರಿಗೆ ಸರ್ಕಾರಗಳು ಕೂಡ ಒತ್ತಾಸೆಯಾಗಿ ನಿಂತಿವೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸುವಲ್ಲಿ ಹಲವು ಮಹನೀಯರು ಶ್ರಮಿಸಿದ್ದು ಅದರ ಫಲವಾಗಿ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಡಾ.ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಅದಕ್ಕೆ ಅಧಿಕೃತ ಮುದ್ರೆಯನ್ನು ಒತ್ತುವುದರ ಮೂಲಕ ಕನ್ನಡಕ್ಕೆ ಅಧಿಕೃತ ಶಾಸ್ತ್ರೀಯ ಸ್ಥಾನಮಾನ ಕಲ್ಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ.
ಮಂಡ್ಯ ಆತಿಥ್ಯಕ್ಕೆ ಹೆಸರಾದ ಜಿಲ್ಲೆ ಕನ್ನಡ ಭಾಷೆಯನ್ನು ಗೌರವಿಸುವಲ್ಲಿ ಜಿಲ್ಲೆಯ ಜನ ಸಿದ್ಧಹಸ್ತರು. ಈ ಹಿಂದೆ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಕನ್ನಡದ ಹಬ್ಬವನ್ನು ತಮ್ಮ ಮನೆಯ ಹಬ್ಬವಾಗಿ ಆಚರಿಸಿದ ಕೀರ್ತಿ ಮಂಡ್ಯ ಜಿಲ್ಲೆಯ ಜನರಿಗೆ ಸಲ್ಲುತ್ತದೆ. ಈ ಹಿಂದಿನ ಎರಡು ಸಮ್ಮೇಳನಗಳಲ್ಲಿ ಭಾಗವಹಿಸಿದ್ದ ನಾನು ಸದರಿ ಸಮ್ಮೇಳನಗಳಲ್ಲಿ ಭಾಗವಹಿಸಿದ್ದ ಜನರ ಉತ್ಸುಕತೆ ಕಂಡು ಅತ್ಯಂತ ಪುಳಕಿತನಾಗಿದ್ದೆ. ಬಾರಿಗೆ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಮಹಿಳಾ ಸಾಹಿತಿಗಳಾಗಿದ್ದ ಜಯದೇವಿ ತಾಯಿ ಲಿಗಾಡೆಯವರು ಪ್ರಥಮ ಮಹಿಳಾ ಸಮ್ಮೇಳನಾಧ್ಯಕ್ಷರಾಗಿದ್ದು ಅಂದಿನ ಸಾಹಿತ್ಯ ಸಮ್ಮೇಳನ ಐತಿಹಾಸಿಕ ದಾಖಲೆಯಾಗಿದೆ.
ಅದೇ ರೀತಿ 1994 ರಲ್ಲಿ ನಾನು ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾಗ ಜಿ. ಮಾದೇಗೌಡರವರ ನೇತೃತ್ವದಲ್ಲಿ ನಡೆದ ಸಮ್ಮೇಳನ ಅವಿಸ್ಮರಣೀಯ. ಮಾದೇಗೌಡರು ಎಲ್ಲರನ್ನೂ ಒಗ್ಗೂಡಿಸಿ ಎಲ್ಲರ ಸಹಕಾರದಿಂದ ಸಮ್ಮೇಳನ ಆಯೋಜಿಸಿದ್ದು ನನ್ನ ಸ್ಮೃತಿಪಟಲದಲ್ಲಿದೆ. ಬಾಲಗಂಗಾಧರನಾಥ ಮಹಾಸ್ವಾಮಿಗಳ ಶ್ರೀರಕ್ಷೆಯಲ್ಲಿ ಅಂದು ನಡೆದ ಸಮ್ಮೇಳನದ ರೀತಿಯಲ್ಲೇ ಪ್ರಸ್ತುತ ಆಯೋಜನೆಗೊಂಡಿರುವ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ, 1994ರ ಸಾಹಿತ್ಯ ಸಮ್ಮೇಳನದ ಅವಧಿಯಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ನನ್ನ ಸನ್ನಿತ್ರರೂ, ಹಿರಿಯ ಸಾಹಿತಿಗಳೂ, ಶರಣರಾದ ಗೋ. ರು. ಚನ್ನಬಸಪ್ಪನವರು ಪ್ರಸ್ತುತ ಸಮ್ಮೇಳನಾಧ್ಯಕ್ಷರಾಗಿ ನೇಮಕಗೊಂಡಿರುವುದು ಸಂತಸ ತಂದಿದ್ದು ಅವರಿಗೆ ನನ್ನ ಶುಭ ಹಾರೈಕೆ ಎಂದು ಉಲ್ಲೇಖಿಸಿದ್ದಾರೆ.
ಸಾಹಿತ್ಯಕ್ಕೆ ಮಂಡ್ಯದ ಕೊಡುಗೆ ಸ್ಮರಣೆ
ನಾಡಿನ ಶ್ರೀಮಂತ ಸಾಹಿತ್ಯ ಪರಂಪರೆಗೆ ಮಂಡ್ಯ ಜಿಲ್ಲೆ ಕೊಡುಗೆ ಅಪಾರ, ಪ್ರಾತಃಸ್ಮರಣೀಯರಾದ ಪಿಟೀಲು ಚೌಡಯ್ಯ, ಬಿ.ಎಂ. ಶ್ರೀಕಂಠಯ್ಯ, ಪು.ತಿ.ನರಸಿಂಹಾಚಾರ್, ಕೆ.ಎಸ್. ನರಸಿಂಹಸ್ವಾಮಿ, ಜಾನಪದ ತಜ್ಞ ಡಾ.ಎಚ್. ಎಲ್. ನಾಗೇಗೌಡ, ಖ್ಯಾತ ನಟ ಅಂಬರೀಶ್, ಇವರೆಲ್ಲರೂ ಮಂಡ್ಯ ಜಿಲ್ಲೆಯ ಕೀರ್ತಿ ಬೆಳಗಿಸಿ ಅಜರಾಮರರಾದ ಮಹನೀಯರು ಇವರುಗಳನ್ನು ಪ್ರಸ್ತುತ ಸಮ್ಮೇಳನದಲ್ಲಿ ನೆನೆಯುವುದು ಅವಶ್ಯವಾಗಿದೆ. ಸರ್ವರಿಗೂ ಆದರ್ಶನೀಯರಾದ ಜಗದ ಕವಿ ಶ್ರೀ ಕುವೆಂಪುರವರ ಸರ್ವಜನಾಂಗದ ಶಾಂತಿಯ ತೋಟದ ಸ್ತುತಿಯನ್ನು ನೆನೆಯುತ್ತಾ ಸಾಹಿತ್ಯ ಸಮ್ಮೇಳನಕ್ಕೆ ಶುಭವಾಗಲಿ, ಈ ಸಂದರ್ಭದಲ್ಲಿ ಹೊರತರುತ್ತಿರುವ ನೆನಪಿನ ಸಂಪುಟಕ್ಕೆ ನನ್ನ ಶುಭಕಾಮನೆಗಳು ಎಂದು ಬರೆದಿದ್ದಾರೆ.