ಮಂಡ್ಯ ಸಾಹಿತ್ಯ ಸಮ್ಮೇಳನ | ಆಹಾರ ಸಮಾನತೆಯ ಹಕ್ಕು: ಬಾಡೂಟಕ್ಕೆ ಕಲ್ಲು ಹಾಕಿತೆ ಕೊರಬಾಡು ಸಿಕ್ಕು?

ಕೇವಲ ಮೇಲ್ಜಾತಿಯವರ ಕೋಳಿ, ಕುರಿ ಊಟವನ್ನು ಮಾತ್ರ ನೀಡುವುದು ಕೂಡ ಆಹಾರ ಅಸಮಾನತೆಯೇ. ಹಾಗಾಗಿ ಬಾಡೂಟ ನೀಡುವುದೇ ಆದರೆ ಕೊರಬಾಡು(ಒಣಗಿಸಿದ ದನ-ಎಮ್ಮೆ ಮಾಂಸ) ಕೂಡ ನೀಡಬೇಕು ಎಂಬ ಹಕ್ಕೊತ್ತಾಯವೂ ಕೇಳಿಬಂದಿತ್ತು;

Update: 2024-12-18 12:31 GMT

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಒಂದೇ ದಿನ ಬಾಕಿ. ಸಿಹಿ ಸಕ್ಕರೆಯ ನಾಡಿನ ನುಡಿಹಬ್ಬಕ್ಕೆ ಬಾಡೂಟದ ಬೇಡಿಕೆ ಭರ್ಜರಿ ಘರಾಮಘರಂ ಚರ್ಚೆಗೆ ನಾಂದಿ ಹಾಡಿದೆ.

ಸಮ್ಮೇಳನದ ಭೋಜನದಲ್ಲಿ ಸಸ್ಯಾಹಾರದಂತೆ ಬಾಡೂಟ(ಮಾಂಸಾಹಾರ) ವನ್ನೂ ಉಣಬಡಿಸಿ ಎಂಬ ಕೂಗು ಈಗಲೂ ಮುಂದುವರಿದಿದೆ. ಮಂಡ್ಯದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಬುಧವಾರ ಕೂಡ ಪತ್ರಿಕಾಗೋಷ್ಠಿ ನಡೆಸಿ ಸಮ್ಮೇಳನದ ಭೋಜನದಲ್ಲಿ ಬಾಡೂಟವನ್ನೂ ಬಡಿಸಬೇಕು ಎಂದು ಒತ್ತಾಯಿಸಿದೆ. ಒಂದು ವೇಳೆ ಪರಿಷತ್ತು ಮತ್ತು ಸರ್ಕಾರ ಬಾಡೂಟವನ್ನು ನೀಡದೇ ಹೋದರೆ ಆಹಾರದ ಸಮಾನತೆಗಾಗಿನ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿರುವ ಒಕ್ಕೂಟ, ʼಮನೆಗೊಂದು ಕೋಳಿ, ಊರಿಗೊಂದು ಕುರಿʼ ಸಂಗ್ರಹ ಅಭಿಯಾನ ನಡೆಸಿ ತಾವೇ ಬಾಡೂಟ ಬಡಿಸುವುದಾಗಿಯೂ ಘೋಷಿಸಿದೆ.

ಬಾಡೂಟದ ಬೇಡಿಕೆ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಪ್ರಗತಿಪರ ಸಂಘಟನೆಯ ಒಕ್ಕೂಟದ ಪ್ರತಿನಿಧಿಗಳೊಂದಿಗೆ ನಡೆದ ಸಭೆ ಒಮ್ಮತಕ್ಕೆ ಬರಲು ವಿಫಲವಾಗಿತ್ತು. ಆ ಹಿನ್ನೆಲೆಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ಬಾಡೂಟದ ಬೇಡಿಕೆ ಇಟ್ಟ ಹೋರಾಟಗಾರರನ್ನು ಸಮಾಧಾನಪಡಿಸುವ ದಾಟಿಯಲ್ಲಿ ಸರ್ಕಾರ ಏನೋ ಒಂದು ಮಾಡುತ್ತೆ, ತಾಳ್ಮೆಯಿಂದ ಇರಿ, ಇದನ್ನೇ ದೊಡ್ಡ ವಿಷಯ ಮಾಡುವುದು ಬೇಡ. ಇದು ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಸಮ್ಮೇಳನ, ಮಂಡ್ಯದ ಪ್ರತಿಷ್ಠೆಯ ಪ್ರಶ್ನೆ. ಬಾಡೂಟದ ಬೇಡಿಕೆ ಮುಂದಿಟ್ಟು ಜಿಲ್ಲೆಯ ಪ್ರತಿಷ್ಠೆಗೆ ಕುಂದು ತರುವಂತಹ ಬೆಳವಣಿಗೆಗೆ ಅವಕಾಶ ನೀಡುವುದು ಬೇಡ ಎಂದು ಹೇಳಿದ್ದರು.

ಖಚಿತ ನಿಲುವು ತೋರದೆ ಜಾರಿಕೊಂಡ ಸಚಿವರು

ಸಚಿವರ ಈ ಹೇಳಿಕೆ, ಹೋರಾಟಗಾರರಲ್ಲಿ ಸರ್ಕಾರ ಬಾಡೂಟದ ವಿಷಯದಲ್ಲಿ ಖಚಿತ ನಿಲುವು ತಳೆದಿಲ್ಲ ಎಂಬ ಆತಂಕ ಮೂಡಿಸಿತ್ತು. ಅದರ ಬೆನ್ನಲ್ಲೇ ಇದೀಗ ಒಕ್ಕೂಟ, ಮನೆಗೊಂದು ಕೋಳಿ, ಊರಿಗೊಂದು ಕುರಿ ಸಂಗ್ರಹ ಅಭಿಯಾನ ಘೋಷಿಸಿದೆ. ಆ ಮೂಲಕ ಸರ್ಕಾರ ಬಾಡೂಟ ಕೊಡದೇ ಇದ್ದರೂ ಸಂಘಟನೆಗಳು ಮತ್ತು ಮಂಡ್ಯದ ಜನರ ಬೆಂಬಲದೊಂದಿಗೆ ತಾವೇ ಬಾಡೂಟ ಹಾಕಿಸುವ ತೀರ್ಮಾನಕ್ಕೆ ಒಕ್ಕೂಟ ಬಂದಿದೆ.

ಅಂದರೆ; ಸರ್ಕಾರ ಸಾಹಿತ್ಯ ಪರಿಷತ್ ಮೂಲಕ ಮಂಡ್ಯ ಸಮ್ಮೇಳನದಲ್ಲಿ ಬಾಡೂಟ ಹಾಕಿಸುವ ಸಾಧ್ಯತೆಗಳು ಕ್ಷೀಣಿಸಿವೆ.

ಉಸ್ತುವಾರಿ ಸಚಿವರು ಸೇರಿದಂತೆ ಸರ್ಕಾರ ಮತ್ತು ಪರಿಷತ್ ಬಾಡೂಟ ಬೇಡಿಕೆಯನ್ನು ತಿರಸ್ಕರಿಸಲು ನೀಡುತ್ತಿರುವ ಕಾರಣ ಹಿಂದಿನ 86 ಸಮ್ಮೇಳನಗಳಲ್ಲಿ ಮಾಂಸಹಾರ ನೀಡಿಲ್ಲ. ಈಗ ಸಂಪ್ರದಾಯ ಮುರಿಯಲಾಗದು ಎಂಬುದು. ಜೊತೆಗೆ ಮಾಂಸಹಾರ ನೀಡಿದರೆ ಊಟದ ಸಮಯದಲ್ಲಿ ಅದನ್ನು ನಿರ್ವಹಿಸುವುದು ಕಷ್ಟಸಾಧ್ಯ ಎಂಬುದು.

ಈ ಬಗ್ಗೆ ʼದ ಫೆಡರಲ್ ಕರ್ನಾಟಕʼಕ್ಕೆ ಪ್ರತಿಕ್ರಿಯೆ ನೀಡಿದ ಮಂಡ್ಯದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಟಿ ಎಲ್ ಕೃಷ್ಣೇಗೌಡ, “ಉಸ್ತುವಾರಿ ಸಚಿವರು ಸಭೆಯ ಬಳಿಕ ನಮ್ಮೊಂದಿಗೆ ಮಾತನಾಡುವಾಗ ಯಾವುದೇ ಸ್ಪಷ್ಟ ಮಾತುಗಳನ್ನು ಆಡಲಿಲ್ಲ, ನೋಡೋಣ, ಮಾಡೋಣ ಎನ್ನುವ ಮಾತನಾಡಿದರು. ಹಾಗಾಗಿ ನಾವು ಮಂಡ್ಯದ ಜನರ ಸಹಕಾರದಲ್ಲಿ ಬಾಡೂಟದ ವ್ಯವಸ್ಥೆ ಮಾಡಲು ಮುಂದಾಗಿದ್ದೇವೆ. ಸಾಂಕೇತಿಕವಾಗಿಯಾದರೂ ನಾವು ಸಮ್ಮೇಳನದ ಭೋಜನಶಾಲೆಯಲ್ಲಿ ಮಾಂಸಹಾರ ಮಾಡಿಯೇ ತೀರುತ್ತೇವೆ. ಇದು ಕೇವಲ ಮಾಂಸಾಹಾರ ಅಥವಾ ಬಾಡೂಟದ ಪ್ರಶ್ನೆಯಲ್ಲ. ಮಾಂಸಹಾರವನ್ನು ನಿಷೇಧಿಸುವ ಸಂವಿಧಾನ ವಿರೋಧಿ, ಮನುಷ್ಯ ವಿರೋಧಿ ಧೋರಣೆಯನ್ನು ಖಂಡಿಸುವ ಮೂಲಕ ಅಂತಹ ಮನಸ್ಥಿತಿಗಳನ್ನು ತಿದ್ದುವ ಯತ್ನ” ಎಂದು ಹೇಳಿದರು.

ಆ ಮೂಲಕ ಸಮ್ಮೇಳನದಲ್ಲಿ ಬಾಡೂಟ ಬಡಿಸುವ ತಮ್ಮ ಒತ್ತಾಯ ಮತ್ತು ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಅವರು ಹೇಳಿದರು.

ಕೋರಬಾಡಿನ ಬೇಡಿಕೆಯೇ ಮುಳುವಾಯಿತೆ?

ಆದರೆ, ಮೂಲಗಳ ಪ್ರಕಾರ ರಾಜ್ಯ ಸರ್ಕಾರ ಒಂದು ಹಂತದಲ್ಲಿ ಬಾಡೂಟ ನೀಡುವ ಸಾಧಕ ಬಾಧಕಗಳನ್ನು ಗಂಭೀರವಾಗಿ ಚರ್ಚಿಸಿದೆ. ಅದರಲ್ಲೂ ಮುಖ್ಯಮಂತ್ರಿಗಳ ಹಂತದಲ್ಲೂ ಆ ವಿಷಯ ಚರ್ಚೆಗೆ ಬಂದಿತ್ತು ಎನ್ನಲಾಗಿದೆ.

ಆದರೆ, ಮುಖ್ಯಮಂತ್ರಿಗಳ ಹಂತದಲ್ಲಿ ವಿಷಯ ಚರ್ಚೆಯಾಗುವ ವೇಳೆಗೆ ಬಾಡೂಟದ ಬೇಡಿಕೆಯ ಪ್ರಗತಿಪರರ ನಡುವೆಯೇ ಭಿನ್ನ ಬೇಡಿಕೆಯ ದನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೊಳಗಿದ್ದವು. ಅದರಲ್ಲೂ ವಿಶೇಷವಾಗಿ ಬಾಡೂಟವೆಂದರೆ ಕೇವಲ ಕೋಳಿ, ಕುರಿ ಮಾತ್ರವೇ? ಎಂಬ ಪ್ರಶ್ನೆ ಕೆಲವು ಪ್ರಗತಿಪರ ವಲಯದಲ್ಲಿ ಎದ್ದಿತ್ತು. ಆ ವಲಯ, ಕೋಳಿ, ಕುರಿ ಎಂಬುದು ಮೇಲ್ಜಾತಿ ಶೂದ್ರರ ಆಹಾರ. ಬಾಡೂಟ ನೀಡುವುದೇ ಆದರೆ, ಸರ್ಕಾರ ಕೇವಲ ಮೇಲ್ಜಾತಿಯವರ ಆಹಾರವನ್ನು ಮಾತ್ರವೇ ನೀಡುವುದು ಕೂಡ ಆಹಾರ ಅಸಮಾನತೆಯೇ ಅಲ್ಲವೇ? ಅದೂ ಕೂಡ ಆಹಾರ ಮಡಿವಂತಿಕೆಯೇ ಅಲ್ಲವೆ? ಆಗಲೂ ಸಂವಿಧಾನದ ಆಹಾರದ ಹಕ್ಕಿನ, ಆಯ್ಕೆಯ ಹಕ್ಕಿನ ಉಲ್ಲಂಘನೆಯಾಗದೇ ಇರುವುದೇ? ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದ್ದರು.

ಆ ಪ್ರಶ್ನೆಯೊಂದಿಗೆ ತಳ ಸಮುದಾಯಗಳ ಬಾಡೂಟವಾದ ಕೊರಬಾಡನ್ನು ಕೂಡ ಸಮ್ಮೇಳನದಲ್ಲಿ ನೀಡಬೇಕು ಎಂದು ಹಕ್ಕು ಮಂಡಿಸಿದ್ದರು. ದನ ಅಥವಾ ಎಮ್ಮೆಯಂತಹ ದೊಡ್ಡ ಪ್ರಾಣಿಗಳ ಮಾಂಸವನ್ನು ಉಪ್ಪು ಹಾಕಿ ಬಿಸಿಲಿನಲ್ಲಿ ಒಣಗಿಸಿಟ್ಟು ಬೇಕಾದ ಬೇಯಿಸಿ ಮಾಡುವ ಬಾಡೂಟಕ್ಕೆ ಕೊರಬಾಡು ಎಂದು ಹಳೇ ಮೈಸೂರು ಭಾಗದಲ್ಲಿ ಕರೆಯಲಾಗುತ್ತದೆ. ಮುಖ್ಯವಾಗಿ ತಳ ಸಮುದಾಯಗಳ ಪ್ರಿಯ ಆಹಾರವಾದ ಅದನ್ನು ಕೂಡ ಸಮ್ಮೇಳನದಲ್ಲಿ ನೀಡಬೇಕು ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಮೊಳಗಿತ್ತು.

ಬಾಡೂಟ ಬೇಡಿಕೆಯ ಈ ಭಿನ್ನ ಕವಲಿನ ದನಿಯ ಮಾಹಿತಿ ಪಡೆದ ಮುಖ್ಯಮಂತ್ರಿಗಳ ಕಚೇರಿಗೆ, ಇದು ಈಡೇರಿಸಲಾಗದ ಬೇಡಿಕೆ. ಏಕೆಂದರೆ, ಈ ಬೇಡಿಕೆಗಳಿಗೆ ಕೊನೆ ಎಂಬುದಿರಲಾರದು. ಕುರಿ- ಕೋಳಿ ಬಾಡೂಟದ ಬಳಿಕ ಈಗ ಕೊರಬಾಡು ಬಾಡೂಟದ ಬೇಡಿಕೆ ಎದ್ದಿದೆ, ಮುಂದೆ ಬೇರೆ ಬೇರೆ ಮಾಂಸಾಹಾರಗಳ ವೆರೈಟಿಗಳ ಬೇಡಿಕೆಯೂ ಬರಬಹುದು, ಜೊತೆಗೆ ಹಲಾಲ್ ಕಟ್ ಬಾಡೂಟದ ಬೇಡಿಕೆಯೂ ಈ ಪ್ರಗತಿಪರ ವಲಯದಿಂದ ಕೇಳಿಬರಬಹುದು. ಆಗ ಸರ್ಕಾರ ಅಗಣಿ ತೆಗೆಯಲು ಹೋಗಿ ಮನೆಯನ್ನೇ ಮೈಮೇಲೆ ಕೆಡವಿಕೊಂಡ ದುಸ್ಸಾಹಸಕ್ಕೆ ಕೈಹಾಕಿದಂತಾಗಲಿದೆ ಎಂಬ ಆತಂಕ ಎದುರಾಗಿದೆ.

ಆ ಹಿನ್ನೆಲೆಯಲ್ಲಿ ಬಾಡೂಟದ ವಿಷಯದಲ್ಲಿ ದುಸ್ಸಾಹಸಕ್ಕೆ ಕೈಹಾಕದೆ ಕೈ ತೊಳೆದುಕೊಂಡಿದೆ ಎನ್ನಲಾಗಿದೆ.

ಬಾಡೂಟದ ಬೇಡಿಕೆ ಹುಟ್ಟಿದ್ದು ಯಾಕೆ?

ಅಷ್ಟಕ್ಕೂ ಈ ಬಾಡೂಟ ಬೇಡಿಕೆ ಮಂಡ್ಯದ ಸಮ್ಮೇಳನದಲ್ಲೇ ಯಾಕೆ ಮುನ್ನೆಲೆಗೆ ಬಂದಿತು ಎಂಬುದನ್ನು ಕೆದಕಿದರೆ, ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ಸೇರಿದಂತೆ ವಿವಿಧ ಮಳಿಗೆಗಳ ಹರಾಜು ವೇಳೆ ಪರಿಷತ್ ವಿಧಿಸಿದ ಷರತ್ತು ಈ ಇಡೀ ವಿವಾದಕ್ಕೆ ಕಾರಣ ಎಂಬುದು ಗೊತ್ತಾಗುತ್ತದೆ.

ಮದ್ಯ, ಧೂಮಪಾನದಂತಹ ಅನಾರೋಗ್ಯಕರ, ಸಾರ್ವಜನಿಕವಾಗಿ ಬಳಸಲು ನಿಷೇಧವಿರುವ ಕಾನೂನುಬಾಹಿರ ಸರಕುಗಳ ಜೊತೆಗೆ ಮಾಂಸಾಹಾರವನ್ನೂ ಸೇರಿಸಿ ಮಳಿಗೆಗಳಲ್ಲಿ ಬಳಸಕೂಡದು ಎಂದು ಕನ್ನಡ ಸಾಹಿತ್ಯ ಪರಿಷತ್ ವಿಧಿಸಿದ ಷರತ್ತು, ಬಾಡೂಟದ ನೆಲ ಮಂಡ್ಯದಲ್ಲಿ ಸಹಜವಾಗೇ ಆಕ್ರೋಶಕ್ಕೆ ಕಾರಣವಾಯಿತು.

ಇದೀಗ ಆ ನಿಷೇಧ, ಬಾಡೂಟದೊಂದಿಗೆ ಆಹಾರ ಸಮಾನತೆ ವರ್ಸಸ್ ಆಹಾರ ತಾರತಮ್ಯ, ಸನಾತನವಾದ ವರ್ಸಸ್ ಸಂವಿಧಾನಿಕ ಹಕ್ಕು, ಬಾಡೂಟ ವರ್ಸಸ್‌ ಕೊರಬಾಡೂಟ ಎಂಬ ಗಂಭೀರ ಬಿಕ್ಕಟ್ಟುಗಳನ್ನು ಸರ್ಕಾರದ ಮುಂದೆ ತಂದುನಿಲ್ಲಿಸಿದೆ.

ಒಂದು ಹಂತದಲ್ಲಿ ಸರ್ಕಾರ ಬಾಡೂಟ ಕೊಡಲು ಮನಸ್ಸು ಮಾಡಿದರೂ, ಪ್ರಗತಿಪರರ ಒಳಗೇ ಇರುವ ಭಿನ್ನ ದನಿಯ ಹಕ್ಕೊತ್ತಾಯಗಳು ಎದೆಗುಂದಿಸಿದೆ.

Tags:    

Similar News