ಧರ್ಮಸ್ಥಳ ಪ್ರಕರಣ| ಸದನದಲ್ಲಿ ಸಿಎಂ ವಿರುದ್ಧ ಕೊಲೆ ಆರೋಪ ಕೋಲಾಹಲ; ಬಿಜೆಪಿ ಹೇಳುವುದೇನು, ತಿಮರೋಡಿ ಹೇಳಿದ್ದೇನು?

ಸಿಎಂ ಸಿದ್ದರಾಮಯ್ಯ ವಿರುದ್ಧವೂ ಕೊಲೆ ಆರೋಪ ಕೇಳಿಬಂದಿದೆ. ಇದು ಅತ್ಯಂತ ಗಂಭೀರವಾದ ಆರೋಪ. ಆದಾಗ್ಯೂ, ಸರ್ಕಾರ ಸುಮ್ಮನೆ ಕುಳಿತಿರುವುದು ನೋಡಿದರೆ ಕಣ್ಣು, ಕಿವಿ ಇದ್ದಂತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಕಿಡಿಕಾರಿದರು.;

Update: 2025-08-18 09:05 GMT

ಧರ್ಮಸ್ಥಳದಲ್ಲಿ ಸೌಜನ್ಯ ಪರ ಹೋರಾಟಗಾರರೊಬ್ಬರು ಮುಖ್ಯಮಂತ್ರಿ 24 ಕೊಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ತನಿಖೆಗೂ ಎಸ್‌ಐಟಿ ರಚಿಸಬೇಕು ಎಂದು ಪ್ರತಿಪಕ್ಷದ ಸದಸ್ಯರು ಸದನದಲ್ಲಿ ಆಗ್ರಹಿಸಿದರು.

ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ವಿಷಯ ಪ್ರಸ್ತಾಪಿಸಿ, ಒಬ್ಬ ವ್ಯಕ್ತಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಕೊಲೆ ಆರೋಪ ಮಾಡಿದ್ದಾನೆ. ಇದು ಅತ್ಯಂತ ಗಂಭೀರವಾದ ಆರೋಪ. ಸರ್ಕಾರ ಸುಮ್ಮನೆ ಕುಳಿತಿರುವುದು ನೋಡಿದರೆ ಕಣ್ಣು, ಕಿವಿ ಇದ್ದಂತಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತೀರಾ ಅಥವಾ ಮತ್ತೆ ಎಸ್‌ಐಟಿ ರಚಿಸುತ್ತೀರಾ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಬಿಜೆಪಿ ಶಾಸಕ ಸುನಿಲ್ ಕುಮಾರ್ ದನಿಗೂಡಿಸಿ, "ಇಷ್ಟೊಂದು ಗಂಭೀರ ಆರೋಪ ಕೇಳಿ ಬಂದರೂ ಸರ್ಕಾರ ಮೌನವಾಗಿದೆ. ಉತ್ತರ ಕೊಡುತ್ತಿಲ್ಲ ಏಕೆ ಎಂದು ವಾಗ್ದಾಳಿ ನಡೆಸಿದರು. ಇದಕ್ಕೆ ಗೃಹ ಸಚಿವ ಡಾ.ಪರಮೇಶ್ವರ್ ಪ್ರತಿಕ್ರಿಯಿಸಿ, “ಸರ್ಕಾರ ಸುಮ್ಮನೆ ಕುಳಿತಿಲ್ಲ, ಆರೋಪಗಳಿಗೆ ಸೂಕ್ತ ಉತ್ತರ ನೀಡಲಿದೆ” ಎಂದು ಹೇಳಿದರು.

ಈ ವೇಳೆ ಶಾಸಕ ಸುರೇಶ್‌ ಕುಮಾರ್‌ ಸೇರಿದಂತೆ ಹಲವು ಬಿಜೆಪಿ ಶಾಸಕರು ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ಡಿ.ಕೆ.ಶಿವಕುಮಾರ್ ಮಧ್ಯಪ್ರವೇಶಿಸಿ, “ಸಿಎಂ ವಿರುದ್ಧ ಆರೋಪ ಮಾಡಿರುವ ವಿಡಿಯೊ ನೋಡಿದ್ದೇನೆ, ಕೇಳಿದ್ದೇನೆ. ಸಿಎಂ ಮೇಲೆ ಕೊಲೆ ಆರೋಪ ಮಾಡಿದ್ದಾರೆ ಎನ್ನುವ ನಂಬರಿನ ವಿವರ ನನ್ನ ಮೊಬೈಲ್‌ನಲ್ಲಿ ಇದೆ. ಆ ವ್ಯಕ್ತಿ ಕೇವಲ ಸಿಎಂ ಬಗ್ಗೆ ಹೇಳಿಲ್ಲ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಗ್ಗೆಯೂ ಆರೋಪ ಮಾಡಿದ್ದಾನೆ. ಆದರೆ, ಸದನದಲ್ಲಿ ಅಂತಹವರ ಹೆಸರು ಪ್ರಸ್ತಾಪಿಸಿ ನಾಯಕನಂತೆ ವಿಜೃಂಬಿಸಬೇಡಿ ಎಂದು ಕೋರಿದರು. 

ಶಿವಲಿಂಗೇಗೌಡ ಅವರು ಕೆಲ ಹೆಸರುಗಳನ್ನು ಪ್ರಸ್ತಾಪಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭದಲ್ಲಿ ಈ ಹೇಳಿಕೆ ಗಮನಿಸಿರಲಿಲ್ಲ. ಬಳಿಕ ವಿಷಯವನ್ನು ಅವರಿಗೆ ತೋರಿಸಿ ತಿಳಿಸಲಾಯಿತು. ನಂತರ ಅವರು ಗೃಹ ಸಚಿವರಿಗೆ ಅಗತ್ಯ ಸೂಚನೆ ನೀಡಿದರು. ಈ ಬಗ್ಗೆ ಗೃಹ ಸಚಿವರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ವಕೀಲ ಜಗದೀಶ್ ವಿರುದ್ಧ ವಿಶ್ವನಾಥ್‌ ಕಿಡಿ

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, “ವಕೀಲ ಜಗದೀಶ್ ಎಂಬುವರು ನನ್ನನ್ನು ಅಯೋಗ್ಯನೆಂದು ಹೇಳಿದ್ದಾರೆ. ಸದನದಲ್ಲಿ ಮಾತನಾಡುವುದು ನನ್ನ ಹಕ್ಕು. ನಾನು ಇಲ್ಲಿ ಮಾತನಾಡಿದ್ದಕ್ಕೆ ತಿರುಗೇಟು ಎಂಬಂತೆ ವಕೀಲ ಜಗದೀಶ್‌ ಎಂಬಾತ, ನಾನು ಧರ್ಮಸ್ಥಳ ವಿರೇಂದ್ರ ಹೆಗಡೆ ಹತ್ತಿರ ನೂರು ಕೋಟಿ ಇಟ್ಟಿದ್ದೇನೆಂದು ಸುಳ್ಳು ಆರೋಪ ಮಾಡಿದ್ದಾರೆ. ನಿನ್ನೆ ಅಳ್ಳಾಲಸಂದ್ರದ ರಸ್ತೆಯಲ್ಲಿ ನಿಂತು ಈ ಜಾಗ ಧರ್ಮಸ್ಥಳದ ಜಾಗ ಎಂದು ಹೇಳಿದ್ದಾನೆ. ಇದು ನನ್ನ ಘನತೆಗೆ ಧಕ್ಕೆ ತಂದಿದೆ. ವಕೀಲ ಜಗದೀಶ್‌ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ಸಿದ್ಧನಿದ್ದೇನೆ ಎಂದು ದಾಖಲೆಗಳನ್ನು ಸ್ಪೀಕರ್‌ಗೆ ನೀಡಿದರು. 

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಪ್ರತಿಕ್ರಿಯಿಸಿ, “ಇದು ಸದನಕ್ಕೆ ಆಗಿರುವ ಅಗೌರವ. ನೀವು ನೋಟಿಸ್ ನೀಡಿ, ನಾವು ಅದನ್ನು ಪರಿಗಣಿಸುತ್ತೇವೆ” ಎಂದು ಹೇಳಿದರು.


ಮಹೇಶ್‌ ತಿಮರೋಡಿ ಹೇಳಿದ್ದೇನು?

ಬಿಜೆಪಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲು ಬಿ.ಎಲ್‌.ಸಂತೋಷ್‌ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಆದರೆ, ಅವರಿಂದ ರಾಜ್ಯದಲ್ಲಿ ಬಿಜೆಪಿ ಸಾಯುತ್ತಿದೆ. ಅಧಿಕಾರದಲ್ಲಿದ್ದ ಬಿಜೆಪಿ ಇಂದು ಎಲ್ಲಿಗೆ ಬಂದು ನಿಂತಿದೆ ಎಂದರೆ ಅದು ಬಿ.ಎಲ್‌. ಸಂತೋಷ್‌ ಅವರೇ ಕಾರಣ ಎಂದು ಮಹೇಶ್‌ಶೆಟ್ಟಿ ತಿಮರೋಡಿ ಇತ್ತೀಚೆಗೆ ಆರೋಪಿಸಿದ್ದರು. ಇಂದು ವಿರೇಂದ್ರ ಹೆಗಡೆ ರಾಜ್ಯಸಭೆ ಸದಸ್ಯರಾಗಲು ಕಾರಣ ನಿರ್ಮಲ್‌ ಕುಮಾರ್‌ ಸುರಾನಾ ಹಾಗೂ ಬಿ.ಎಲ್‌. ಸಂತೋಷ್‌. ಸೌಜನ್ಯ ಕೊಲೆ ಪ್ರಕರಣ ಮುಚ್ಚಿಹಾಕಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.

2023ರ ಚುನಾವಣೆ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮ್ಮರೋಡಿ, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರು ಸಿಎಂ 24ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇಂತಹ ಆರೋಪ ಹೊತ್ತಿರುವ  ಸಿಎಂ ಕೂಡಲೇ  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಹೇಶ್‌ ತಿಮರೋಡಿ ಒತ್ತಾಯಿಸಿದ್ದ ವಿಡಿಯೊವನ್ನು ಗಿರೀಶ್‌ ಮಟ್ಟಣ್ಣವರ್‌ ತಮ್ಮ ಇನ್‌ಸ್ಟಾಗ್ರಾಂನ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

Tags:    

Similar News