Mysore MUDA Scam| ಲೋಕಾಯುಕ್ತ ಪೊಲೀಸರಿಂದ ನಿಖರ ತನಿಖೆ ಅನುಮಾನ: ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗ್ಡೆ

ವಿಚಾರಣೆ ನಡೆಸುವ ಲೋಕಾಯುಕ್ತ ಅಧಿಕಾರಿಗಳು ಮುಖ್ಯಮಂತ್ರಿ ಅಧೀನದಲ್ಲಿರುವ ಕಾರಣ ತನಿಖೆಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಲಿದೆ. ಹಾಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜಸ್ಟಿಸ್‌ ಸಂತೋಷ್‌ ಹೆಗ್ಡೆ ʼದ ಫೆಡರಲ್‌ ಕರ್ನಾಟಕʼಕ್ಕೆ ವಿವರಿಸಿದ್ದಾರೆ.

Update: 2024-09-25 13:57 GMT

ಮೂಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ನೈತಿಕತೆ ಆಧಾರದ ಮೇಲೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಒತ್ತಾಯಿಸಿದರು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಸಿದ್ದರಾಮಯ್ಯ ವಿರುದ್ಧ ಸಿಆರ್‌ಪಿಸಿ 156  (3)  ಪ್ರಕರಣ ದಾಖಲಿಸಿ, ಪ್ರಾಥಮಿಕ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ವಿಚಾರಣೆ ನಡೆಸುವ ಲೋಕಾಯುಕ್ತ ಅಧಿಕಾರಿಗಳು ಮುಖ್ಯಮಂತ್ರಿ ಅಧೀನದಲ್ಲಿರುವ ಕಾರಣ ತನಿಖೆಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಲಿದೆ. ಹಾಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ಮೈಸೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ ಮೂರು ತಿಂಗಳಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ನ್ಯಾಯಾಲಯ ಹೇಳಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಿದ್ದರಾಮಯ್ಯ ಅವರು ಕೂಡ ಸಹಕಾರ ನೀಡಬೇಕು. ಈ ಹಿಂದೆ ರೈಲು ಅಪಘಾತವಾದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದರು.

ಬಳ್ಳಾರಿ ಗಣಿ ಹಗರಣದ ಕುರಿತು ತನಿಖೆ ನಡೆದಾಗ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಆಗಿತ್ತು. ಪ್ರಕರಣ ಖುಲಾಸೆಯಾದ ಬಳಿಕ ಮುಖ್ಯಮಂತ್ರಿಯಾದರು. ಸಾರ್ವಜನಿಕರಿಗೆ ಯಾವುದೇ ಮೋಸ ಮಾಡಿಲ್ಲ ಎಂದಾದರೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದು ಒಳಿತು ಎಂದರು.

ಸಿದ್ಧರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 17ಎ ಅಡಿ ಪ್ರಕರಣ ದಾಖಲಾಗಿರುವ ಕಾರಣ ಅದೊಂದು ಗಂಭೀರ ಆರೋಪವಾಗಿದೆ. ತನಿಖೆ ಮುಗಿದು, ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ, ವಾದ-ಪ್ರತಿವಾದ ನಡೆಯಲಿದೆ. ಆ ಬಳಿಕವಷ್ಟೇ ಆರೋಪ ಸಾಬೀತಾಗಲಿದೆ ಎಂದು ಹೇಳಿದರು.

ಇನ್ನೂ ಹೈಕೋರ್ಟ್ ಏಕಸದಸ್ಯ ಪೀಠ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ೧೭ಎ ಅಡಿ ತನಿಖೆ ನಡೆಸಬಹುದು ಎಂದು ಹೇಳಿದೆ. ಯಾವುದೇ ಸರ್ಕಾರಿ ನೌಕರನ ವಿರುದ್ಧ ಇಂತಹ ಆರೋಪ ಕೇಳಿಬಂದರೆ ಕ್ರಿಮಿನಲ್ ಪ್ರಕರಣದ ತನಿಖೆಗೆ ಅನುಮತಿ ಪಡೆಯಬೇಕಾಗುತ್ತದೆ. ಅದೇ ರೀತಿ ಮುಖ್ಯಮಂತ್ರಿಗಳ ವಿರುದ್ಧವೂ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಪ್ರಾಸಿಕ್ಯೂಷನ್ಗೆ ಸರ್ಕಾರದ ಪೂರ್ವಾನುಮತಿ ಪಡೆಯಬೇಕಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2018ರ ಹಿಂದೆ ನಡೆದ ಘಟನೆಗಳಿಗೆ ರಾಜ್ಯಪಾಲರೇ ಅನುಮತಿ ನೀಡಬೇಕು. 2018ರ ನಂತರ ನಡೆದ ಘಟನೆಗಳಿಗೆ ತಿದ್ದುಪಡಿ ಕಾಯ್ದೆಯಂತೆ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯಬೇಕು ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಮೂಡಾ ಹಗರಣ ಕುರಿತು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌. ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗ ರಚಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ ಸಂತೋಷ್‌ ಹೆಗ್ಡೆ ಅವರು, ಕಾನೂನಿನಲ್ಲಿ ಒಂದು ಸಂಸ್ಥೆ ಮಾತ್ರ ತನಿಖೆ ನಡೆಸಬಹುದು. ಆದರೆ, ಇಲ್ಲಿ ನ್ಯಾಯಾಲಯವು ಲೋಕಾಯುಕ್ತ ಸಂಸ್ಥೆಯ ತನಿಖೆಗೆ ಆದೇಶಿಸಿದ ನಂತರ ಆ ಸಂಸ್ಥೆಯು ಸಿಆರ್‌ಪಿಸಿ ಅಡಿಯಲ್ಲಿ ತನಿಖೆ ನಡೆಸಬಹುದು.

ತನಿಖಾ ಆಯೋಗದ ಕಾಯ್ದೆ ಅನ್ವಯ ನೇಮಕಗೊಂಡ ಸಂಸ್ಥೆಯು ನ್ಯಾಯಾಲಯದ ಆದೇಶದ ಮೇರೆಗೆ ಸಿಆರ್ ಪಿಸಿ ಅಡಿಯಲ್ಲಿ ತನಿಖೆ ನಡೆಸಬಹುದು. ನ್ಯಾಯಾಂಗ ತನಿಖೆಗೂ, ಪೊಲೀಸ್‌ ತನಿಖೆಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಹೇಳಿದರು.

Tags:    

Similar News