ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿಯಿಂದ ಆರ್‌ಎಸ್‌ಎಸ್‌ ರಕ್ಷಣೆ: ಸಚಿವ ಪ್ರಿಯಾಂಕ್‌ ಖರ್ಗೆ

ಬಿಜೆಪಿ ನಾಯಕರ ಮಕ್ಕಳು ಆರ್‌ಎಸ್‌ಎಸ್‌ ಶಾಖೆಗೆ ಹೋಗುತ್ತಿಲ್ಲ, ಏಕೆಂದರೆ ಸಂಘದ ಸಂಪರ್ಕಕ್ಕೆ ಬಂದರೆ ತಮ್ಮ ಮಕ್ಕಳ ಭವಿಷ್ಯಕ್ಕೆ ಬೆಂಕಿ ಬೀಳುತ್ತದೆ ಎಂಬುದು ಬಿಜೆಪಿಯವರಿಗೂ ಗೊತ್ತಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.;

Update: 2025-07-02 08:48 GMT

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ

ಕುರ್ಚಿಯ ಅಧಿಕಾರ ಹಾಗೂ ರಾಜಕೀಯ ಭವಿಷ್ಯಕ್ಕಾಗಿ ಆರ್‌ಎಸ್‌ಎಸ್‌ ರಕ್ಷಣೆಗೆ ನಿಲ್ಲುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಏಕೆಂದರೆ ಅವರ ಜುಟ್ಟು ನಾಗಪುರದ ಹಿಡಿತದಲ್ಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ.

ಆರ್‌ಎಸ್‌ಎಸ್‌ ನಿಷೇಧದ ಬಗ್ಗೆ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗೆ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಇದು ಗಂಟಲು ಮೇಲಿನ ಪ್ರೀತಿಯೇ ಹೊರತು ಹೃದಯದಾಳದ್ದಲ್ಲ. ಆರ್‌ಎಸ್‌ಎಸ್ ಬಗ್ಗೆ ನಿಜವಾದ ಅಭಿಮಾನವಿದ್ದರೆ ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಶಾಖೆಗೆ ಕಳುಹಿಸುತ್ತಿದ್ದರು ಎಂದಿದ್ದಾರೆ.

ಯಾವೊಬ್ಬ ಬಿಜೆಪಿ ನಾಯಕರ ಮಕ್ಕಳು ಕೂಡ ಶಾಖೆಗೆ ಹೋಗಿ ಆರ್‌ಎಸ್‌ಎಸ್ ಚಡ್ಡಿ ಹಾಕಿಕೊಂಡು ಕೋಲಾಟ ಆಡುವುದಿಲ್ಲ. ಆರ್‌ಎಸ್‌ಎಸ್ ಸಂಪರ್ಕಕ್ಕೆ ಬಂದರೆ ತಮ್ಮ ಮಕ್ಕಳ ಭವಿಷ್ಯಕ್ಕೆ ಬೆಂಕಿ ಬೀಳಲಿದೆ ಎಂಬುದು ಬಿಜೆಪಿಗರಿಗೂ ಗೊತ್ತಿದೆ. ಒಂದು ವೇಳೆ ಪ್ರಧಾನಿ ಮೋದಿ ಅವರು ʼಸೆಲ್ಫಿ ವಿತ್ ಶಾಖೆʼ ಎಂದು ಕರೆ ನೀಡಿದರೆ, ಬಿಜೆಪಿಗರ ಬಂಡವಾಳ ಆರ್‌ಎಸ್‌ಎಸ್‌ಗೂ ತಿಳಿಯಲಿದೆ ಎಂದು ತಿಳಿಸಿದ್ದಾರೆ. 

ಸಂವಿಧಾನಕ್ಕೆ ಎಲ್ಲರೂ ಹೆದರಲೇಬೇಕು

ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರ್‌ಎಸ್‌ಎಸ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ನಿಷೇಧ ಹೇರಿದ್ದ ಐತಿಹಾಸಿಕ ಸತ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಶಾಸಕ ಸುನಿಲ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರು ಅರಿತುಕೊಂಡರೆ ಒಳಿತು. ದಂಡು, ದಾಳಿಗೆ ಹೆದರದಿದ್ದರೂ ದೇಶದ ಸಂವಿಧಾನಕ್ಕೆ ಹೆದರಲೇಬೇಕು. ದೇಶದ ಸಮಗ್ರತೆಗೆ ಧಕ್ಕೆ ತರುವ, ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನಕ್ಕೆ ಬೆದರಿಕೆಯೊಡ್ಡುವ ಆರ್‌ಎಸ್‌ಎಸ್ ಎಂಬ ಕ್ಯಾನ್ಸರ್‌ಗೆ ಸಂವಿಧಾನದಲ್ಲಿ ಚಿಕಿತ್ಸೆ ಇದೆ ಎಂಬುದನ್ನು ಬಿಜೆಪಿಗರು ಮರೆಯಬಾರದು ಎಂದು ಹೇಳಿದ್ದಾರೆ. 

ಶತಮಾನದಲ್ಲಿ ಆರ್‌ಎಸ್‌ಎಸ್‌ ಸಾಧನೆ ಏನು?

ಶತಮಾನೋತ್ಸವ ಆಚರಿಸಿಕೊಳ್ಳಲು ಸಿದ್ಧವಾಗಿರುವ ಆರ್‌ಎಸ್‌ಎಸ್ ಕಳೆದ ನೂರು ವರ್ಷಗಳಲ್ಲಿ ದೇಶಕ್ಕಾಗಿ ಮಾಡಿದ ಕೇವಲ 10 ಸಾಧನೆಗಳನ್ನು ಪಟ್ಟಿ ಮಾಡಲಿ. ದೇಶದ ಆರ್ಥಿಕತೆಗೆ ನೀಡಿದ ಕೊಡುಗೆ, ಸಮಾಜ ಸುಧಾರಣೆಗೆ ಮಾಡಿದ ಕೆಲಸ, ಅಸಮಾನತೆ ಮತ್ತು ಶೋಷಣೆಗಳ ನಿರ್ಮೂಲನೆಗೆ ಮಾಡಿದ ಕಾರ್ಯಗಳು, ಬಡವರ ಕಲ್ಯಾಣಕ್ಕೆ ಹಮ್ಮಿಕೊಂಡ ಕಾರ್ಯಕ್ರಮಗಳು ಮತ್ತು ದೇಶದ ಏಕತೆಗೆ ದುಡಿದಿದ್ದೇನು ಎಂಬುದನ್ನು ಪಟ್ಟಿ ಮಾಡಿ ಕೊಡುವುದೇ ಎಂದು ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್‌ ಚಡ್ಡಿ ಧರಿಸಿದ ತಕ್ಷಣ ದೇಶಭಕ್ತರಾಗಲ್ಲ

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳವಳಿಯಿಂದ ಆರ್‌ಎಸ್‌ಎಸ್ ದೂರ ಉಳಿದಿದ್ದೇಕೆ, ಬ್ರಿಟಿಷರ ಪರ ಇದ್ದಿದ್ದೇಕೆ, ಸಂವಿಧಾನದ ಕರಡು ಪ್ರತಿ ಸುಟ್ಟಿದ್ದೇಕೆ, ರಾಷ್ಟ್ರಧ್ವಜವನ್ನು ವಿರೋಧಿಸಿದ್ದೇಕೆ, ದಶಕಗಳ ಕಾಲ ತಿರಂಗವನ್ನು ಹಾರಿಸದಿದ್ದಿದ್ದೇಕೆ ಮತ್ತು ದೇಶವು ಮೂರು ಯುದ್ಧಗಳನ್ನು ಎದುರಿಸಿದಾಗ ನಿಮ್ಮ ಬಲಿಷ್ಠ ಸಂಘಟನೆ ಎಲ್ಲಿ ಹೋಗಿತ್ತು ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ದೊಗಲೆ ಚಡ್ಡಿ, ತುಂಡು ಕೋಲು ಹಿಡಿದ ಮಾತ್ರಕ್ಕೆ ಯಾರೂ ಸಂವಿಧಾನವನ್ನು ಎದುರಿಸುವಷ್ಟು ಶಕ್ತಿವಂತರಾಗುವುದಿಲ್ಲ. ಜತೆಗೆ ದೇಶಭಕ್ತರೂ ಎನಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

Tags:    

Similar News