ಮುಸ್ಲಿಮರ ಮತದಾನದ ಹಕ್ಕು ರದ್ದತಿ ಹೇಳಿಕೆ | ಒಕ್ಕಲಿಗ ಸ್ವಾಮೀಜಿ ಹೇಳಿಕೆಗೆ ವ್ಯಾಪಕ ಆಕ್ರೋಶ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರ ವಿವಾದಿತ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ತಮ್ಮ ಹೇಳಿಕೆಗೆ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.;
ಮುಸ್ಲಿಮರಿಗೆ ಮತದಾನ ಹಕ್ಕು ರದ್ದುಗೊಳಿಸಬೇಕೆಂಬ ಚಂದ್ರಶೇಖರನಾಥ ಶ್ರೀಗಳ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. ನ.26 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಭಾರತೀಯ ಕಿಸಾನ್ ಸಂಘದ ಸಮಾವೇಶದಲ್ಲಿ ಸ್ವಾಮೀಜಿ ಈ ವಿವಾದಿತ ಹೇಳಿಕೆ ನೀಡಿದ್ದರು.
ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಚಂದ್ರಶೇಖರನಾಥ ಸ್ವಾಮೀಜಿ ಅವರ ವಿವಾದಿತ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಚ್.ಸಿ. ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸ್ವಾಮೀಜಿ ತಮ್ಮ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ವಿವಾದಾತ್ಮಕ ಹೇಳಿಕೆ ಏನು?
ಭಾರತೀಯ ಮುಸ್ಲಿಮರಿಗೆ ಮತದಾನದ ಹಕ್ಕು ರದ್ದು ಮಾಡಬೇಕು. ಪಾಕಿಸ್ತಾನದಲ್ಲಿ ಬೇರೆಯವರಿಗೆ ಮತದಾನ ಹಕ್ಕಿಲ್ಲ. ಅದೇ ರೀತಿ ಭಾರತದಲ್ಲಿ ಮಾಡಿದರೆ ಅವರ ಪಾಡಿಗೆ ಅವರು ಇರುತ್ತಾರೆ. ಆಗ ಎಲ್ಲರೂ ನೆಮ್ಮದಿಯಾಗಿರಲು ಸಾಧ್ಯ ಎಂದು ಹೇಳಿದ್ದರು.
ಸಚಿವ ಮಹದೇವಪ್ಪ ಆಕ್ರೋಶ
ಮುಸ್ಲಿಮರಿಗೆ ಮತದಾನ ಹಕ್ಕು ರದ್ದು ಮಾಡುವಂತೆ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಸಚಿವ ಎಚ್.ಸಿ. ಮಹದೇವಪ್ಪ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪೇಜಾವರ ಶ್ರೀಗಳು, ಚಂದ್ರಶೇಖರ ಸ್ವಾಮೀಜಿ ಅವರನ್ನು ನಾವು ಗೌರವದ ಸ್ಥಾನದಲ್ಲಿ ನೋಡುತ್ತಿದ್ದೇವೆ. ದೇಶದಲ್ಲಿ ಪ್ರತಿಯೊಬ್ಬರನ್ನು ಗೌರವಿಸಬೇಕು, ಪರಸ್ಪರರ ಮೇಲೆ ವಿಶ್ವಾಸ ಇಡಬೇಕು. ನಮಗೇ ಬೇಕಾದ ರೀತಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಎಂದು ಆಗುವುದಿಲ್ಲ. ಸರ್ವಾಧಿಕಾರಿ ಧೋರಣೆ, ಕೋಮುವಾದಿ ದಳ್ಳುರಿ, ಶೋಷಣೆ, ದಬ್ಬಾಳಿಕೆ, ಅಸಮಾನತೆ ನಿಯಂತ್ರಿಸುವ ಸಲುವಾಗಿಯೇ ಸಂವಿಧಾನ ರಚನೆಯಾಗಿದೆ ಎಂದು ಉಭಯ ಶ್ರೀಗಳ ವಿವಾದಾತ್ಮಕ ಹೇಳಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ಜಾರಿಗೂ ಮುನ್ನ ದೇಶದಲ್ಲಿ ಕೇವಲ 416 ಜನರಿಗೆ ಮಾತ್ರ ಮತದಾನ ಮಾಡುವ ಅವಕಾಶ ಇತ್ತು. ಡಾ. ಬಿ.ಆರ್. ಅಂಬೇಡ್ಕರ್ ಅವರು ದುಂಡುಮೇಜಿನ ಸಭೆಯಲ್ಲಿ ಸಮರ್ಥ ವಾದ ಮಂಡಿಸಿ ಎಲ್ಲರಿಗೂ ಓಟಿನ ಅವಕಾಶ ಕೊಡಿಸಿದರು. ಮತದಾನ ಹಕ್ಕು ರದ್ದುಪಡಿಸಬೇಕು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ ಎಂದು ಚಂದ್ರಶೇಖರ ನಾಥ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಬೇಕಾದ ಸ್ವಾಮೀಜಿಗಳು ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ. ಆರ್ ಎಸ್ ಎಸ್ ನವರು ಸಂವಿಧಾನ ಒಪ್ಪಲು ಸಿದ್ದರಿಲ್ಲ. ಮನುವಾದದ ಮನಸ್ಸುಗಳು ಹೀಗೆ ಮಾತನಾಡುತ್ತವೆ. 1947 ರಲ್ಲಿ ಜನಸಂಘ ಕೂಡ ಸಂವಿಧಾನ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಆದರೆ, ಭಾರತ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಮುಸಲ್ಮಾನರಿಗೆ ಮತದಾನ ಹಕ್ಕು ರದ್ದು ಮಾಡಬೇಕೆಂಬ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಸ್ವಾಮೀಜಿ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳು ರಾಜಕೀಯದಿಂದ ದೂರ ಇದ್ದರೆ ಒಳ್ಳೆಯದು. ಸಂವಿಧಾನ ಎಲ್ಲರಿಗೂ ಮತದಾನದ ಹಕ್ಕು ಕೊಟ್ಟಿದೆ. ವಿವಾದಾತ್ಮಕ ಹೇಳಿಕೆ ನೀಡದಂತೆ ಸ್ವಾಮಿಗಳಿಗೆ ಮನವಿ ಮಾಡುತ್ತೇನೆ. ಸುಖಾಸುಮ್ಮನೆ ವಿವಾದಿತ ಹೇಳಿಕೆ ನೀಡಿ ಅಶಾಂತಿ ಸೃಷ್ಟಿಸಬೇಡಿ ಎಂದು ಮನವಿ ಮಾಡಿದ್ದಾರೆ.
ವಿವಾದಿತ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಸ್ವಾಮೀಜಿ
ಮುಸ್ಲಿಮರ ಕುರಿತ ತಮ್ಮ ಹೇಳಿಕೆ ವಿವಾದ ಪಡೆಯುತ್ತಿದ್ದಂತೆ ಚಂದ್ರಶೇಖರನಾಥ ಸ್ವಾಮೀಜಿ ಸ್ಪಷ್ಟೀಕರಣ ನೀಡಿ, ವಿಷಾದ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕಿಸಾನ್ ಸಂಘದ ಕಾರ್ಯಕ್ರಮದಲ್ಲಿ ಬಾಯಿ ತಪ್ಪಿನಿಂದ ಹೇಳಿಕೆ ನೀಡಿದ್ದೇನೆ. ನನ್ನ ಉದ್ದೇಶ ಯಾವುದೇ ಸಮುದಾಯವನ್ನು ನಿಂದಿಸುವುದಾಗಿರಲಿಲ್ಲ. ರೈತರ ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಕುರಿತು ಅತೃಪ್ತಿ ವ್ಯಕ್ತಪಡಿಸಿದ್ದೆ ಎಂದು ಹೇಳಿದ್ದಾರೆ.
ಧರ್ಮಸಹಿಷ್ಣುಗಳಾದ ಒಕ್ಕಲಿಗರು ಎಲ್ಲ ಧರ್ಮಿಯರನ್ನು ಸಮಾನವಾಗಿ ಕಾಣುತ್ತಿದ್ದಾರೆ. ಶ್ರೀಮಠದೊಂದಿಗೆ ಮುಸ್ಲಿಂ ಸಮುದಾಯದವರು ಕೂಡ ಸಂಪರ್ಕ ಇಟ್ಟುಕೊಂಡಿದ್ದಾರೆ. ದೇಶದಲ್ಲಿ ವಕ್ಫ್ ಮಸೂದೆಗೆ ತಿದ್ದುಪಡಿ ತರುವ ಸಂಬಂಧ ಕೇಂದ್ರ ಸರ್ಕಾರ ಜೆಪಿಸಿ ರಚನೆ ಮಾಡಿದೆ. ಸಮಿತಿಯ ಎಲ್ಲ ಕಡೆ ಪ್ರವಾಸ ಮಾಡಿ ಅಧ್ಯಯನ ನಡೆಸುತ್ತಿದೆ. ಜೆಪಿಸಿಯ ಅಂತಿಮ ನಿರ್ಧಾರಕ್ಕೆ ಎಲ್ಲರೂ ಬದ್ಧರಿರಬೇಕು ಎಂಬುದು ನನ್ನ ಮಾತಿನ ತಾತ್ಪರ್ಯವಾಗಿತ್ತು. ದೇಶದಲ್ಲಿ ಎಲ್ಲರಿಗೂ ಮತದಾನ ಹಕ್ಕಿದೆ. ಆ ಕಾರ್ಯಕ್ರಮದಲ್ಲಿ ಬಾಯಿ ತಪ್ಪಿ ನೀಡಿದ ಹೇಳಿಕೆಯಿಂದ ಮುಸಲ್ಮಾನರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ. ಈ ವಿಷಯವನ್ನು ಮುಂದೆ ಬೆಳೆಸದಂತೆ ಮನವಿ ಮಾಡುತ್ತೇನೆ ಎಂದು ಕೋರಿದ್ದಾರೆ.