ನಬಾರ್ಡ್ ಸಾಲ ಕಡಿತ: ನಿರ್ಧಾರ ಮರು ಪರಿಶೀಲಿಸಲು ರಾಜ್ಯ ಸರ್ಕಾರ ಆಗ್ರಹ
ನಬಾರ್ಡ್ ನೀಡುವ ಸಾಲದ ಮೊತ್ತ ಕಡಿಮೆ ಮಾಡಿರುವುದರಿಂದ ರೈತರಿಗೆ ಹೊಡೆತ ಬೀಳಲಿದೆ. ಇದರಿಂದ ಸಹಕಾರಿ ಸಂಸ್ಥೆಗಳು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲು ಆಗುತ್ತಿಲ್ಲ.;
ಬಂಡವಾಳ ಆಧರಿತ ರಾಜ್ಯದ ಕೃಷಿ ವಲಯದ ಮೇಲೆ ಕೇಂದ್ರ ಸರ್ಕಾರ ಪ್ರಹಾರ ನಡೆಸಿದೆ. ಕೇಂದ್ರ ಸರ್ಕಾರ ಅಧೀನದ ನಬಾರ್ಡ್ ಸಂಸ್ಥೆಯ ಮೂಲಕ ಸಹಕಾರ ಸಂಸ್ಥೆಗಳಿಗೆ ನೀಡುತ್ತಿದ್ದ ಸಾಲದ ಮೊತ್ತವನ್ನು ಕಡಿಮೆ ಮಾಡಿರುವುದು ರೈತರನ್ನು ಆತಂಕಕ್ಕೆ ದೂಡಿದೆ.
ರಾಜ್ಯದ ಬಹುತೇಕ ಕೃಷಿಕರು ಸಹಕಾರಿ ಸಂಸ್ಥೆಗಳಿಂದ ರಿಯಾಯಿತಿ ದರದಲ್ಲಿ ಸಾಲಸೌಲಭ್ಯ ಪಡೆದು ಕೃಷಿ ಚಟುವಟಿಕೆ ನಡೆಸುತ್ತಾರೆ. ನಬಾರ್ಡ್‌ನಿಂದ ಸಾಲ ಪಡೆವ ಸಹಕಾರಿ ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಕೃಷಿ ಸಾಲ ನೀಡುತ್ತವೆ. ರಾಜ್ಯದ ಕೃಷಿ ಮತ್ತು ಕೃಷಿ ಪೂರಕ ವಲಯದ ಹಣಕಾಸು ಹರಿವಿನ ಪ್ರಮುಖ ಮೂಲವೇ ಸಹಕಾರ ವಲಯದ ಕೃಷಿ ಸಾಲ. ಆದರೆ, ಇದೀಗ ನಬಾರ್ಡ್ ಸಹಕಾರ ಬ್ಯಾಂಕುಗಳಿಗೆ ನೀಡುವ ಸಾಲದ ಮೊತ್ತ ಕಡಿತ ಮಾಡಿದೆ.
ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಬಾರ್ಡ್ ನ ಈ ನಿರ್ಧಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ರೈತರು ಆತಂಕಗೊಂಡಿದ್ದರೆ, ಮತ್ತೊಂದು ಕಡೆ ಸಹಕಾರ ವಲಯದ ಪ್ರಮುಖರು ಚಿಂತೆಗೀಡಾಗಿದ್ದಾರೆ.
ನಬಾರ್ಡ್ ತನ್ನ ನಿರ್ಧಾರ ಮರು ಪರಿಶೀಲಿಸಬೇಕು ಎಂದು ರಾಜ್ಯ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ್ ಪಾಟೀಲ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರು ಒತ್ತಾಯಿಸಿದ್ದಾರೆ.
ಶಿವಾನಂದ್ ಪಾಟೀಲ ಹೇಳಿದ್ದೇನು?
ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡುವುದರಿಂದ ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗಲಿದೆ. ರಾಜ್ಯದಲ್ಲಿ ಸುಮಾರು 63 ಲಕ್ಷ ರೈತರಿದ್ದು, 30 ಲಕ್ಷ ರೈತರು ಕೃಷಿ ಸಾಲಕ್ಕಾಗಿ ಡಿಸಿಸಿ ಬ್ಯಾಂಕ್‌ಗಳನ್ನೇ ಅವಲಂಬಿಸಿದ್ದಾರೆ. ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡಿದರೆ ಡಿಸಿಸಿ ಬ್ಯಾಂಕುಗಳ ಕೃಷಿ ಸಾಲವೂ ಕಡಿಮೆಯಾಗಲಿದೆ. ಇದು ಕೃಷಿ ಕ್ಷೇತ್ರದ ಹಿನ್ನಡೆಗೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವೇ ಡಿಸಿಸಿ ಬ್ಯಾಂಕುಗಳು ಆರ್ಥಿಕವಾಗಿ ಸುಸ್ಥಿತಿಯಲ್ಲಿವೆ. ಇತರ ಡಿಸಿಸಿ ಬ್ಯಾಂಕುಗಳು ನಬಾರ್ಡ್ ನೀಡುವ ಹಣದಲ್ಲೇ ರೈತರಿಗೆ ಕೃಷಿಸಾಲ ನೀಡುತ್ತಿವೆ ಎಂದಿದ್ದಾರೆ.
ಸುಮಾರು 30 ರಿಂದ 35 ಲಕ್ಷ ರೈತರು ಕೃಷಿ ಸಾಲಕ್ಕಾಗಿ ಡಿಸಿಸಿ ಬ್ಯಾಂಕುಗಳನ್ನು ಆಶ್ರಯಿಸಿದ್ದಾರೆ. ಇತರ ಸುಮಾರು 35 ಲಕ್ಷ ರೈತರು ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆಯುತ್ತಿದ್ದಾರೆ. ಎಲ್ಲ ರೈತರಿಗೂ ಸಹಕಾರಿ ಬ್ಯಾಂಕುಗಳ ಮೂಲಕವೇ ಕೃಷಿ ಸಾಲ ಸಿಗುವಂತಾಗಬೇಕು ಎಂಬುದು ನಮ್ಮ ಆಶಯ. ಆದರೆ ನಬಾರ್ಡ್ ಸಾಲದ ಮೊತ್ತ ಕಡಿಮೆ ಮಾಡುವುದರಿಂದ ಈ ಉದ್ದೇಶಕ್ಕೆ ಪೆಟ್ಟು ಬೀಳಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಸಮಸ್ಯೆ ಸೃಷ್ಟಿಯಾಗಿದೆ. ಪ್ರತಿಶತ 40ರಷ್ಟಿದ್ದ ಸಾಲದ ಪ್ರಮಾಣ ಈಗ ಪ್ರತಿಶತ 20ಕ್ಕೆ ಕುಸಿದಿದೆ. ಕೃಷಿ ವಲಯದ ಮೇಲೆ ನಿಜವಾಗಿಯೂ ಆಸಕ್ತಿ ಇದ್ದರೆ ನಬಾರ್ಡ್ ಯಾವುದೇ ಕಾರಣಕ್ಕೂ ಸಾಲದ ಮೊತ್ತ ಕಡಿಮೆ ಮಾಡಬಾರದು ಎಂದಿದ್ದಾರೆ.
ನಬಾರ್ಡ್ ರಿಯಾಯಿತಿ ಬಡ್ಡಿ ದರದ ಸಾಲದ ಮೊತ್ತ ಕಡಿತ ಮಾಡದಂತೆ ದಕ್ಷಿಣದ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರದ ಬಳಿ ನಿಯೋಗ ತೆರಳುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಈ ಬಗ್ಗೆ ತಕ್ಷಣವೇ ಕೇಂದ್ರಕ್ಕೆ ಪತ್ರ ಬರೆಯುವ ಕುರಿತು ಸಿಎಂ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ನಬಾರ್ಡ್ ಕ್ರಮಕ್ಕೆ ಜಿ .ಟಿ. ದೇವೇಗೌಡ ಅಸಮಾಧಾನ
ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ಸಹಕಾರ ಸಂಘಗಳಿಗೆ ನೀಡುತ್ತಿದ್ದ ಸಾಲದ ಪ್ರಮಾಣ ಇಳಿಸಿರುವುದು ಸರಿಯಲ್ಲ. ಸಹಕಾರ ಕ್ಷೇತ್ರಕ್ಕೆ ಕೇಂದ್ರ ಅಸಹಕಾರ ನೀಡುತ್ತಿದೆ ಎಂದು ಭಾವಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಬಾರ್ಡ್ ಸಹಕಾರ ಸಂಘಗಳಿಗೆ ಶೇ 1ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿತ್ತು. ಆದರೆ ಈಗ ಬಡ್ಡಿದರವನ್ನು ಶೇ 4.5ಕ್ಕೆ ಏರಿಕೆ ಮಾಡಿದೆ. ಇನ್ನೂ ಹೆಚ್ಚು ಸಾಲ ಕೇಳಿದರೆ ಶೇ 8.5ರ ಬಡ್ಡಿ ದರದಲ್ಲಿ ನೀಡುತ್ತೇವೆ ಎನ್ನುತ್ತಿದೆ. ಹಾಗಾಗಿ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ನಬಾರ್ಡ್ ಈ ಮೊದಲಿನಂತೆ ಸಾಲ ನೀಡಬೇಕು. ರಾಜ್ಯದ ರೈತರ ಹಿತಾಸಕ್ತಿ ಗಮನಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಕ್ರಮ ಕೈಗೊಳ್ಳಬೇಕು. ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರೂ ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ.