Karnataka News | ರಾಜ್ಯದ ಹಣಕಾಸು ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ; ಬಿ.ವೈ.ವಿಜಯೇಂದ್ರ ಆಗ್ರಹ

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಹಣಕಾಸು ಸ್ಥಿತಿ ಬಿಗಡಾಯಿಸಿದೆ. ಹೀಗಾಗಿ ರಾಜ್ಯದ ಜನರಿಗೆ ಈ ಬಗ್ಗೆ ತಿಳಿಸಲು ಶ್ವೇತಪತ್ರ ಹೊರಡಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.;

Update: 2025-02-19 07:53 GMT
ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಬಿ.ವೈ. ವಿಜಯೇಂದ್ರ ಮಾತನಾಡಿದರು

"ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ರಾಜ್ಯ ಸರ್ಕಾರ ಕಳೆದ ಒಂದು ವರ್ಷದಲ್ಲಿ 1.9 ಲಕ್ಷ ಕೋಟಿ ರೂ. ಮೊತ್ತದ ಸಾಲ ಮಾಡಿದೆ. ರಾಜ್ಯದ ಹಣಕಾಸು ಸ್ಥಿತಿ ಸಂಪೂರ್ಣ ಬಿಗಡಾಯಿಸಿದ್ದು, ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಶ್ವೇತಪತ್ರ ಹೊರಡಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. 

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ರಾಜ್ಯದ ಹಣಕಾಸು ಸ್ಥಿತಿಗತಿಯ ಕುರಿತು ಜನರಿಗೆ ತಿಳಿಸುವ ಸಲುವಾಗಿ ತಕ್ಷಣವೇ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿ, ‌ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ವಿದ್ಯುತ್ ಇಲಾಖೆಗೆ 6 ಸಾವಿರ ಕೋಟಿ ಬಾಕಿ

ವಿದ್ಯುತ್ ಇಲಾಖೆಗೆ ಸರ್ಕಾರದ ವಿವಿಧ ಇಲಾಖೆಗಳಿಂದ 6 ಸಾವಿರ ಕೋಟಿ ರೂ.ಬಾಕಿ ಇದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್​ ಅವರು ಹೇಳಿದ್ದಾರೆ. ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ ಮೆಟ್ರೋ ದರ ಹೆಚ್ಚಳವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಬೆಲೆ ಯೇರಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಮಹಿಳೆಯರಿಗೆ ಕಳೆದ ಐದಾರು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಸಂದಾಯವಾಗಿಲ್ಲ. ಪಡಿತರ ಅಕ್ಕಿಯ ಹಣವೂ ತಲುಪುತ್ತಿಲ್ಲ. ಕೆ.ಜಿ.ಗೆ 22 ರೂ.ಗಳಂತೆ ಕಡಿಮೆ ದರದಲ್ಲಿ ಅಕ್ಕಿ ಪೂರೈಸಲು ಕೇಂದ್ರ ಸಿದ್ಧವಿದ್ದರೂ ರಾಜ್ಯ ಸರ್ಕಾರ ಅಕ್ಕಿ ತೆಗೆದುಕೊಳ್ಳುತ್ತಿಲ್ಲ. ಇವೆಲ್ಲವೂ ರಾಜ್ಯ ಸರ್ಕಾರದ ಆರ್ಥಿಕ ದುಃಸ್ಥಿತಿಯನ್ನು ಸೂಚಿಸುತ್ತವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆಎಸ್​ಆರ್​ಟಿಸಿ ಮುಚ್ಚುವ ಸ್ಥಿತಿಗೆ ಬಂದಿದೆ 

ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ 7 ಸಾವಿರ ಕೋಟಿ ರೂ. ಬಾಕಿ ಹಣವನ್ನು ಸಾರಿಗೆ ಇಲಾಖೆಗೆ ಪಾವತಿಸಬೇಕಾಗಿದೆ.  ಆದರೆ, ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಕೆಎಸ್​ಆರ್​ಟಿಸಿ ಬಾಗಿಲು ಮುಚ್ಚುವ ಹಂತಕ್ಕೆ ಬಂದು ನಿಂತಿದೆ. ಸಾರಿಗೆ ಸಿಬ್ಬಂದಿಯ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತಿಲ್ಲ. ಎಸ್​ಸಿಪಿ,  ಟಿಎಸ್‌​ಪಿ ಹಣವನ್ನೂ ಗ್ಯಾರಂಟಿ ಯೋಜನೆಗಳಿಗೆ  ಬಳಕೆ ಮಾಡಲಾಗುತ್ತಿದೆ. ಇದರಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಗ್ಯಾರೆಂಟಿ ಯೋಜನೆಗಳಿಗೆ ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮದ ಹಣ ಬಳಸುತ್ತಿರುವುದಕ್ಕೆ ಆ ಸಮುದಾಯದ ಮುಖಂಡರೇ ಮಂಗಳವಾರ ನಡೆದ ಬಜೆಟ್‌ ಪೂರ್ವ ಸಭೆಯಲ್ಲಿ ಆಕ್ಷೇಪಿಸಿದ್ದಾರೆ ಎಂದು ಹೇಳಿದ್ದಾರೆ.

ನಾಟಕ ಬದಿಗಿಡಿ, ಶ್ವೇತಪತ್ರ ಹೊರಡಿಸಿ

ಸರ್ಕಾರದ ಯೋಗ್ಯತೆಗೆ ರಸ್ತೆ ಗುಂಡಿ ಮುಚ್ಚಲು ಆಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಹಣಕಾಸು ಪರಿಸ್ಥಿತಿ ಹೀಗಿರುವಾಗ ಪರಿಶಿಷ್ಟ ಜಾತಿ, ಪಂಗಡದವರಿಗೆ 1 ರಿಂದ 2 ಕೋಟಿ ರೂ.ಟೆಂಡರ್ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಆಲ್ ಈಸ್ ವೆಲ್ ಎಂಬ ನಾಟಕವನ್ನು ಬದಿಗಿಡಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ, ಪ್ರತಿ ತಿಂಗಳು ನೀವು ಕೊಟ್ಟಿರುವ ಭರವಸೆ ಈಡೇರಿಸಬೇಕು. ಕಳೆದ ಐದಾರು ತಿಂಗಳಿಂದ ಪಡಿತರ ಅಕ್ಕಿಯ ಹಣ ತಲುಪಿಲ್ಲ. ಗೃಹಲಕ್ಷ್ಮಿ ಹಣ ಕೈ ಸೇರಿಲ್ಲ. ಲೋಕಸಭಾ ಚುನಾವಣೆ, ಉಪ ಚುನಾವಣೆ ಬಂದಾಗ ಎರಡು ದಿನಗಳ ಮೊದಲು ಗೃಹಲಕ್ಷ್ಮೀ ಹಣ ತಲುಪುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಬಡವರು, ರೈತರನ್ನು ಭಿಕ್ಷುಕರು ಎಂದುಕೊಂಡಿದ್ದೀರಾ?

ಗ್ಯಾರಂಟಿ ಹಣವನ್ನು ಬೇಕಾಬಿಟ್ಟಿಯಾಗಿ ನೀಡುತ್ತಿರುವ ನೀವು ರಾಜ್ಯದ ಬಡವರು, ರೈತರನ್ನು ಭಿಕ್ಷುಕರು ಎಂದು ಕೊಂಡಿದ್ದೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ. 

ಗೌರವಧನಕ್ಕಾಗಿ ಶಿಕ್ಷಕರು ಧರಣಿ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಯಾವುದೇ ಯೋಜನೆಗೂ ಹಣ ಇಲ್ಲದಂತಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಜನರ ಗಮನಕ್ಕೆ ತರಲು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಸಕ್ತ ವರ್ಷ ಬರಗಾಲದ ಸೂಚನೆ ಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಎಲ್ಲವನ್ನು ನಿದ್ರೆಯಲ್ಲಿರುವ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ವಾಸ್ತವಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು ಜನರ ಬೆಂಬಲಕ್ಕೆ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ 

ಒಂದು ಕಡೆ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳುತ್ತಿದ್ದಾರೆ. ಆದರೆ ಮತ್ತೊಂದೆಡೆ ಅವರ ಬೆಂಬಲಿಗರು ದೆಹಲಿಗೆ ಹೋಗಿ ಉಳಿದಿರುವ ಅವಧಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಬೇಕು ಎಂದು ಹೈಕಮಾಂಡ್​ಗೆ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಬದಲಾವಣೆ ಮಾಡಿದರೆ ಪರಿಸ್ಥಿತಿ ಬೇರೆ ಆಗಲಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ ಎಂದು ಟೀಕಿಸಿದ್ದಾರೆ.

ನಮ್ಮಲ್ಲಿ ಅಂತಹ ಪೈಫೋಟಿ ಇಲ್ಲ

ಕಾಂಗ್ರೆಸ್‌ ಪಕ್ಷದಲ್ಲಿರುವಂತೆ ನಮ್ಮಲ್ಲಿ ಅಷ್ಟು ದೊಡ್ಡ ಪ್ರಮಾಣದ ಭಿನ್ನಮತವಿಲ್ಲ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ಆಂತರಿಕ ಕಲಹ ಇದೆ ಎಂಬುದನ್ನು ವಿಜಯೇಂದ್ರ ಒಪ್ಪಿಕೊಂಡಿದ್ದಾರೆ.  ಮುಂದಿನ ಕೆಲ ತಿಂಗಳಲ್ಲಿ ರಾಜ್ಯದಲ್ಲಿ ಬಹಳ ಕ್ಷಿಪ್ರ ಬೆಳವಣಿಗೆಗಳು ನಡೆಯಲಿವೆ. ಸಿದ್ದರಾಮಯ್ಯ ತಮ್ಮ ಕುರ್ಚಿ ಗಟ್ಟಿಯಾಗಿದೆ ಎಂಬುದು ಸತ್ಯಕ್ಕೆ ದೂರವಾದುದು ಎಂದು ಭವಿಷ್ಯ ನುಡಿದಿದ್ದಾರೆ.

Tags:    

Similar News