ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ನ.11ಕ್ಕೆ ನಿಗದಿ

ಮುಖ್ಯ ಚುನಾವಣಾಧಿಕಾರಿ ಕಚೇರಿಯ ಸಹಾಯಕ ಮುಖ್ಯ ಚುನಾವಣಾಧಿಕಾರಿ ಅವರು ಕೋಲಾರ ಜಿಲ್ಲಾಧಿಕಾರಿಗೆ ಪತ್ರ ಬರೆದು ಮರು ಮತ ಎಣಿಕೆ ನಡೆಸುವಂತೆ ಸೂಚನೆ ನೀಡಿದ್ದಾರೆ.

Update: 2025-11-05 09:58 GMT

ಸುಪ್ರೀಂಕೋರ್ಟ್‌ ಸೂಚನೆ ಮೇರೆಗೆ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಗೆ ನ.11ರಂದು ನಿಗದಿಗೊಳಿಸಲಾಗಿದೆ.

ಈ ಸಂಬಂಧ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಸಹಾಯಕ ಮುಖ್ಯ ಚುನಾವಣಾಧಿಕಾರಿ ಅವರು ಕೋಲಾರ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.  ಈಗಾಗಲೇ ಮರು ಮತಮಣಿಕೆ ಸಂಬಂಧ ರಿಟರ್ನಿಂಗ್‌ ಅಧಿಕಾರಿ ಮತ್ತು ಹೆಚ್ಚುವರಿ ಸಹಾಯಕ ರಿಟರ್ನಿಂಗ್‌ ಅಧಿಕಾರಿಯನ್ನು  ನೇಮಿಸಲಾಗಿದೆ. ಕೋಲಾರ ಉಪ ವಿಭಾಗದ ಸಹಾಯ ಆಯುಕ್ತರನ್ನು ರಿಟರ್ನಿಂಗ್‌ ಅಧಿಕಾರಿ ಮತ್ತು ಮುಳಬಾಗಿಲು, ಕೋಲಾರ, ಶ್ರೀನಿವಾಸಪುರ ತಾಲೂಕು ತಹಶೀಲ್ದಾರ್‌ಗಳು, ಬಂಗಾರಪೇಟೆ ತಾಲೂಕು ಕಚೇರಿ ಗ್ರೇಡ್‌2 ತಹಶೀಲ್ದಾರ್‌ ಅವರನ್ನು ಹೆಚ್ಚುವರಿ ಸಹಾಯಕ ರಿಟರ್ನಿಂಗ್‌ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ 248 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮತ ಎಣಿಕೆ ವೇಳೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಎಸ್‌.ಮಂಜುನಾಥಗೌಡ ಹೈಕೋರ್ಟ್‌ ಅರ್ಜಿ ಸಲ್ಲಿಸಿದ್ದರು. ನಂಜೇಗೌಡರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಚುನಾವಣಾ ಆಯೋಗದ ಕ್ರಮವನ್ನು ರದ್ದುಪಡಿಸಬೇಕು. ಅಷ್ಟೇ ಅಲ್ಲದೆ, ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು

ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್‌ ಮಾಲೂರು ಕ್ಷೇತ್ರದ ಫಲಿತಾಂಶವನ್ನು ರದ್ದುಗೊಳಿಸಿ ಆದೇಶಿಸಿತ್ತು. ನಾಲ್ಕು ವಾರದೊಳಗೆ ಮರು ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸೂಚಿಸಿತ್ತು. ಈ ಆದೇಶದ ವಿರುದ್ಧ ನಂಜೇಗೌಡ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿ ಮರು ಮತ ಎಣಿಕೆಗೆ ಸೂಚಿಸಿ, ಮುಚ್ಚಿದ ಲಕೋಟೆಯಲ್ಲಿ ಮರು ಮತ ಎಣಿಕೆ ಫಲಿತಾಂಶದ ಮಾಹಿತಿ ನೀಡುವಂತೆ ಆದೇಶಿಸಿತ್ತು.


Tags:    

Similar News