ಆರ್ಸಿಬಿ ಕಾಲ್ತುಳಿತ ದುರಂತ: ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿಗಳಿಗೆ ಹೊಸ ಹುದ್ದೆ
ಆರ್ಸಿಬಿ ತಂಡವು ತನ್ನ 18 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿತ್ತು. ಈ ಸಂಭ್ರಮವನ್ನು ಆಚರಿಸಲು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾರೀ ಜನಸಂದಣಿ ಸೇರಿತ್ತು.;
ಐಪಿಎಸ್ ಅಧಿಕಾರಿ ಬಿ. ದಯಾನಂದ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐಪಿಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪದಲ್ಲಿ ಅಮಾನತುಗೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೊಸ ಹುದ್ದೆಗಳನ್ನು ನೀಡಿ ಅಧಿಕೃತ ಆದೇಶ ಹೊರಡಿಸಿದೆ.
ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ ಅವರನ್ನು ಜೈಲುಗಳು ಮತ್ತು ಸುಧಾರಣಾ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಎಡಿಜಿಪಿ) ನೇಮಿಸಲಾಗಿದೆ. ಹಾಗೆಯೇ, ಡಿಸಿಪಿ ಆಗಿದ್ದ ಶೇಖರ್ ಎಚ್. ಟೇಕಣ್ಣನವರ್ ಅವರನ್ನು ಬೆಂಗಳೂರಿನ ಗುಪ್ತಚರ ವಿಭಾಗದ ಪೊಲೀಸ್ ಅಧೀಕ್ಷಕರಾಗಿ (ಎಸ್ಪಿ) ನಿಯೋಜಿಸಲಾಗಿದೆ.
ಈ ವರ್ಷದ ಜೂನ್ 4 ರಂದು, ಆರ್ಸಿಬಿ ತಂಡವು ತನ್ನ 18 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿತ್ತು. ಈ ಸಂಭ್ರಮವನ್ನು ಆಚರಿಸಲು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾರೀ ಜನಸಂದಣಿ ಸೇರಿತ್ತು. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ದುರಂತಕ್ಕೆ ಭದ್ರತಾ ವೈಫಲ್ಯ ಮತ್ತು ಕರ್ತವ್ಯ ಲೋಪವೇ ಕಾರಣ ಎಂದು ಆರೋಪಿಸಿ, ಸರ್ಕಾರವು ಬಿ. ದಯಾನಂದ, ಶೇಖರ್ ಎಚ್. ಟೇಕ್ಕಣ್ಣನವರ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು.
ಘಟನೆ ಕುರಿತು ತನಿಖೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಡಿ'ಕುನ್ಹಾ ನೇತೃತ್ವದ ನ್ಯಾಯಾಂಗ ಆಯೋಗ ಹಾಗೂ ಮ್ಯಾಜಿಸ್ಟ್ರೇಟ್ ತನಿಖಾ ವರದಿಗಳನ್ನು ಆಧರಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮತ್ತೊಬ್ಬ ಅಮಾನತುಗೊಂಡಿದ್ದ ಅಧಿಕಾರಿ ವಿಕಾಶ್ ಕುಮಾರ್ ವಿಕಾಶ್ ಅವರ ಪ್ರಕರಣವು ನ್ಯಾಯಾಲಯದಲ್ಲಿ ಇನ್ನೂ ಬಾಕಿ ಇರುವುದರಿಂದ, ಅವರ ನೇಮಕಾತಿ ಕುರಿತು ಯಾವುದೇ ನಿರ್ಧಾರವಾಗಿಲ್ಲ. ಹಿರಿಯ ಅಧಿಕಾರಿಗಳ ಮರು ನೇಮಕಾತಿ ರಾಜ್ಯ ಪೊಲೀಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.