Stampede | ಗೆಲ್ಲುವ ಮೊದಲೇ ವಿಜಯೋತ್ಸವಕ್ಕೆ ಅನುಮತಿ ಕೇಳಿತ್ತೇ ಆರ್ಸಿಬಿ? ; ಕೇಂದ್ರ ಸಚಿವ ಎಚ್ಡಿಕೆ ಸ್ಫೋಟಕ ಮಾಹಿತಿ
ನಾವು ಗೆಲ್ಲುತ್ತೇವೆ ಎಂದು ಆರ್ಸಿಬಿಗೆ ಕನಸು ಬಿದ್ದಿತ್ತಾ? ಇನ್ನು ಫೈನಲ್ ಪಂದ್ಯ ಆರಂಭವಾಗೇ ಇರಲಿಲ್ಲ. ಆಗಲೇ ವಿಜಯೋತ್ಸವಕ್ಕೆ ಆರ್ಸಿಬಿಯವರು ಅರ್ಜಿ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.;
ಐಪಿಎಲ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನವೇ ಆರ್ಸಿಬಿ ಆಡಳಿತ ಮಂಡಳಿಯವರು ವಿಜಯೋತ್ಸವ ಆಚರಣೆಗೆ ಅನುಮತಿ ಕೋರಿ ನಗರ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ.
ಗುಜರಾತ್ನ ಅಹಮದಾಬಾದ್ನಲ್ಲಿ ಫೈನಲ್ಸ್ ಪಂದ್ಯ ಸಂಜೆ ಏಳೂವರೆ ಗಂಟೆಗೆ ನಿಗದಿಯಾಗಿತ್ತು. ಆದರೆ, ಬೆಂಗಳೂರಿನಲ್ಲಿ ಸಂಜೆ ಆರು ಗಂಟೆಗೆ ಆರ್ಸಿಬಿ ವಿಜಯೋತ್ಸವ ಆಚರಣೆಗೆ ಆರ್ಸಿಬಿ ಆಡಳಿತ ಮಂಡಳಿ ಅನುಮತಿ ಕೋರಿತ್ತು. ಪಂದ್ಯ ಆರಂಭಕ್ಕೆ ಮೊದಲೇ ಆರ್ಸಿಬಿ ಆಡಳಿತ ಮಂಡಳಿಗೆ ತಮ್ಮ ತಂಡ ಗೆಲ್ಲಲಿದೆ ಎಂದು ಕನಸು ಬಿದ್ದಿತ್ತೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನು ಫೈನಲ್ ಪಂದ್ಯ ಆರಂಭವಾಗದಿದ್ದರೂ ಅರ್ಜಿ ಕೊಡುತ್ತಾರೆ. ಇನ್ನೊಂದು ಅರ್ಜಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕೊಟ್ಟು ವಿಧಾನಸೌಧದ ಮುಂಭಾಗ ಕಾರ್ಯಕ್ರಮ ಮಾಡಲು ಅವಕಾಶ ಕೊಡಿ ಎಂದು ಕೇಳುತ್ತಾರೆ? ಇದು ಹೇಗೆ ಸಾಧ್ಯ ಎಂದು ಕೇಳಿದ್ದಾರೆ.
ವಿಜಯೋತ್ಸವಕ್ಕೆ ಅನುಮತಿ ಕೋರಿದ್ದ ಈ ಎಲ್ಲಾ ಪತ್ರಗಳನ್ನು ಯಾರು ಬರೆದಿದ್ದರು?, ಪಂದ್ಯ ಮುಗಿದ ಮರುದಿನ ಬೆಳಿಗ್ಗೆ 7.30ಕ್ಕೆ ಪೊಲೀಸ್ ಆಯುಕ್ತರ ಮೇಲೆ ಒತ್ತಡ ಹಾಕಿದ್ದು ಯಾರು? ಎನ್ನುವುದು ಗೊತ್ತಿದೆ. ಅದನ್ನೇ ಹೇಳಿದ್ದೇನೆ. ನಾನು ವಾಸ್ತವಾಂಶ ತಿಳಿದು ಮಾತಾಡಿದ್ದೇನೆ. ಅಸೂಯೆಯಿಂದ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಾನು ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.
ಅಸೂಕ್ಷ್ಮ ಸರ್ಕಾರಕ್ಕೆ ಕೊನೆಗೂ ಜ್ಞಾನೋದಯ
ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜು ಅವರನ್ನು ಬಿಡುಗಡೆ ಮಾಡಿರುವುದು ಒಳ್ಳೆಯ ಕ್ರಮ, ಈ ಅಸೂಕ್ಷ್ಮ ಸರ್ಕಾರಕ್ಕೆ ಈಗ ಜ್ಞಾನೋದಯವಾಗಿದೆ. ಆದರೆ, ಐವರು ಪೊಲೀಸ್ ಅಧಿಕಾರಿಗಳು ಅಮಾನತು ಮಾಡಿದ್ದು ಸರಿಯಲ್ಲ. ಸರ್ಕಾರ ಈ ರೀತಿ ನಡೆದುಕೊಂಡರೆ ಅಧಿಕಾರಿಗಳು ಕೆಲಸ ಮಾಡಲು ಆಗುವುದಿಲ್ಲ. ಸರ್ಕಾರದ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಧಿಕಾರಿಗಳನ್ನು ತಲೆದಂಡ ಮಾಡಿರುವುದು ಸರಿಯಲ್ಲ. ಈ ಘಟನೆಯ ಮೂಲ ಕಾರಣಗಳೇ ಬೇರೆ. ಆ ಕಾರಣಗಳನ್ನು ಸರ್ಕಾರ ಮರೆಮಾಚುತ್ತಿದೆ ಎಂದು ಟೀಕಿಸಿದ್ದಾರೆ.
ಹೆಣದ ಮೇಲೆ ಬಿಜೆಪಿ - ಜೆಡಿಎಸ್ ರಾಜಕೀಯ ಮಾಡುತ್ತಿವೆ ಎಂದು ಸಿಎಂ, ಡಿಸಿಎಂ ಹೇಳಿಕೆಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಹೆಣದ ಮೇಲೆ ರಾಜಕೀಯ ಮಾಡುವ ಅವಶ್ಯಕತೆ ನಮಗಿಲ್ಲ. ಇದ್ದ ವಿಷಯವನ್ನೇ ನಾನು ಹೇಳಿದ್ದೇನೆ. ನನ್ನ ಮಿತ್ರ ಪಕ್ಷವೂ ಹೇಳಿದೆ. ಇದರಲ್ಲಿ ರಾಜಕೀಯ ಏನಿದೆ? ಕ್ರೀಡಾಂಗಣದ ಮುಂದೆ ಮೃತದೇಹಗಳು ಬಿದ್ದ ಮೇಲೆಯೂ ಕ್ರೀಡಾಂಗಣಕ್ಕೆ ಹೋಗಿ ಟ್ರೋಫಿಗೆ ಮುತ್ತಿಕ್ಕಿ ಶೋ ಮಾಡಿದ್ದು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ, ಡಿಸಿಎಂ, ಗೃಹ ಸಚಿವರೇ ಹೊಣೆ
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣದ ಸಂಪೂರ್ಣ ಹೊಣೆಯನ್ನು ಸಿಎಂ, ಡಿಸಿಎಂ, ಗೃಹ ಸಚಿವರೇ ತೆಗೆದುಕೊಳ್ಳಬೇಕು. ಈ ಮೂವರದು ಕೂಡ ತಪ್ಪಿದೆ. ಪಂದ್ಯ ಗೆದ್ದ 24 ಗಂಟೆ ಒಳಗೆ ಆತುರವಾಗಿ ಸನ್ಮಾನ ಮಾಡುವುದು ಏನಿತ್ತು? ಅದನ್ನು ಸರಿಯಾಗಿ ಮಾಡಲಿಲ್ಲ. ಆಟಗಾರರನ್ನು ಕೂಡ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಈ ಪುರುಷಾರ್ಥಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಬೇಕಿತ್ತಾ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿಗೆ ಡಿಕೆಶಿ ಕೊಡುಗೆ ಏನು ?
ಸದನದಲ್ಲಿ ಎಲ್ಲರ ಕಾಲದಲ್ಲಿ ಆಗಿದ್ದು ಮಾತಾಡ್ತೀನಿ ಎಂಬ ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಲೇವಡಿ ಮಾಡಿದ ಸಚಿವರು, ಸದನದಲ್ಲಿ ಅವರು ಏನು ಮಾತನಾಡುತ್ತಾರೆ? ತಮ್ಮ ಬಳಿ ಏನು ದಾಖಲೆ ಇದೆ ಎನ್ನುವುದನ್ನು ಇಡಲಿ. ಹಿಂದೆ ನಡೆದ ಕಲಾಪಗಳಲ್ಲಿ ಅವರು ಏನೇನು ಮಾಡಿದ್ದರು ಎಂಬುದು ಗೊತ್ತಿದೆ. ಏನ್ ಸಾಧನೆ ಮಾಡಿದ್ದೀನಿ ಅಂತ ಸದನದಲ್ಲಿ ಮಾತಾಡ್ತಾರೆ. ಈ ಘಟನೆ ಬಿಡಿ ಎರಡು ವರ್ಷಗಳಲ್ಲಿ ಇವರ ಸಾಧನೆ ಏನು? ಬೆಂಗಳೂರು ನಗರಕ್ಕೆ, ರಾಜ್ಯಕ್ಕೆ ಇವರ ಕೊಡುಗೆ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೀವ ಕಳೆದುಕೊಂಡವರು ವಾಪಸ್ ಬರುವುದಿಲ್ಲ. ದುಡ್ಡಿನ ಮೇಲೆ ಜೀವಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಸರ್ಕಾರ ಅನೇಕ ಸಮಯದಲ್ಲಿ ವಿಶೇಷ ಪ್ರಕರಣ ಅಂತ ಅನೇಕ ಬಾರಿ ಪರಿಹಾರ ಕೊಟ್ಟಿದೆ. ಇದು ಸರ್ಕಾರವೇ ಎಸಗಿದ ತಪ್ಪು. ಕುಟುಂಬಗಳಿಗೆ ಆಗಿರುವ ದುಃಖವನ್ನು ನೀಗಿಸಲು ಸಾಧ್ಯವಿಲ್ಲ. ಇದನ್ನು ವಿಶೇಷ ಪ್ರಕರಣ ಎಂದು ಸರ್ಕಾರ ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಡಾ. ರಾಜ್ ನಿಧನದ ದಿನಕ್ಕೆ ಹೋಲಿಕೆ ಸರಿಯಲ್ಲ
ವರನಟ ಡಾ. ರಾಜ್ ಕುಮಾರ್ ಅವರ ನಿಧನದ ಸಂದರ್ಭದಲ್ಲಿ ಏನೇನು ನಡೆಯಿತೋ ಎನ್ನುವುದು ಈಗಾಗಲೇ ಹೇಳಿದ್ದೇನೆ. ಈ ಸರ್ಕಾರ ಅಣ್ಣಾವ್ರ ನಿಧನದ ವಿಷಯ ಇಟ್ಟುಕೊಂಡು ಕಾಲ್ತುಳಿತ ಪ್ರಕರಣದಲ್ಲಿ ರಕ್ಷಣೆ ಪಡೆಯೋದು ಬೇಡ, ಅವರು ನಿಧನರಾದ ಸಂದರ್ಭದಲ್ಲಿ ಅಶಾಂತಿ ಉಂಟು ಮಾಡಲು ನಿರ್ದಿಷ್ಟವಾಗಿ ಕೆಲವರು ಪ್ರಯತ್ನಪಟ್ಟರು. ಸೀಮೆಎಣ್ಣೆ, ಪೆಟ್ರೋಲ್ ತಂದು ಬೆಂಗಳೂರು ನಗರದಲ್ಲಿ ಶಾಂತಿಯುತವಾಗಿ ನಡೆಯಬೇಕಿದ್ದ ವರನಟರ ಅಂತಿಮಯಾತ್ರೆ, ಅಂತ್ಯ ಸಂಸ್ಕಾರದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ಕೆಲವರು ವ್ಯವಸ್ಥಿತವಾಗಿ ಮಾಡಿದರು. ಆಗ ಗೋಲಿಬಾರ್ ಆಯಿತು. ಇಬ್ಬರು ಸಾವನ್ನಪ್ಪಿದರು. ಅದನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಆ ಘಟನೆಗೂ ಕಾಲ್ತುಳಿತಕ್ಕೆ ಹೋಲಿಕೆ ಮಾಡಬಾರದು ಎಂದು ಹೇಳಿದ್ದಾರೆ.