ಬೆಂಗಳೂರಿನಲ್ಲಿ ರೇಷನ್‌ ಅಕ್ಕಿ ಕೊರತೆ: ಸಾರ್ವಜನಿಕರ ಆಕ್ರೋಶ

ಪಡಿತರ ಅಕ್ಕಿ ವಿತರಣೆಯಲ್ಲಿ ಲೋಪ: ಆರೋಪ

Update: 2024-03-20 07:20 GMT
ಅಕ್ಕಿ (ಚಿತ್ರ ಕೃಪೆ: pexels)

ಬೆಂಗಳೂರು: ನಗರ ಸೇರಿದಂತೆ ವಿವಿಧ ಭಾಗದಲ್ಲಿ ಸಕಾಲದಲ್ಲಿ ಪಡಿತರ (ರೇಷನ್) ಅಕ್ಕಿ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಲಗ್ಗೆರೆಯ ಪ್ರೀತಿನಗರದ ಪಡಿತರ ಅಂಗಡಿಯ ಮುಂದೆ ಸಾರ್ವಜನಿಕರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್‌ ಆಗಿದೆ.

ಈ ರೇಷನ್‌ ಅಂಗಡಿಯಲ್ಲಿ ಪಡಿತರ ಅಕ್ಕಿ ನೀಡದೆ ಫಲಾನುಭವಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಕಳೆದ ನಾಲ್ಕು ತಿಂಗಳಿನಿಂದಲೂ ಪಡಿತರ ರೇಷನ್‌ ನೀಡಿಲ್ಲ, ಎಲ್ಲಾ ರೇಷನ್‌ ಅಂಗಡಿಗಳಲ್ಲೂ ಪಡಿತರ ಅಕ್ಕಿ ಸಿಗುತ್ತಿಲ್ಲ ಎಂದು ಜನ ಆಕ್ರೋಶದಿಂದ ಹೇಳಿರುವುದು ವಿಡಿಯೋದಲ್ಲಿದೆ.

"ರಾಜ್ಯದಲ್ಲಿ ಸ್ಟೇಟ್ ಕಾರ್ಡ್‌ ಹಾಗೂ ಸೆಂಟ್ರಲ್‌ ಕಾರ್ಡ್‌ ಎಂದು ಎರಡು ವಿಭಾಗ ಮಾಡಿಕೊಳ್ಳಲಾಗಿದೆ. ಸ್ಟೇಟ್‌ ಕಾರ್ಡ್‌ಗೆ ಅವಶ್ಯವಿರುವ ಅಕ್ಕಿ ತಡವಾಗಿ ಬಂದಿದ್ದು, ವಿತರಣೆ ಮಾಡುವುದು ತಡವಾಗಿದೆ. ಕೆಲವು ಭಾಗದಲ್ಲಿ ಕಳೆದ ಬಾರಿ ಉಳಿದಿದ್ದ ಅಕ್ಕಿಯನ್ನು ವಿತರಣೆ ಮಾಡಲಾಗಿದೆ. ಅಕ್ಕಿ ಇಲ್ಲದೆ ಇರುವ ಡಿಪೋಗಳಲ್ಲಿ ಫಲಾನುಭವಿಗಳ ಹೆಸರು ಹಾಗೂ ವಿಳಾಸವನ್ನು ಬರೆಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಇಂದಿನಿಂದ (ಮಾರ್ಚ್‌ 20)ವಿತರಣೆ ಪ್ರಾರಂಭವಾಗಲಿದೆ" ಎಂದು ಬೆಂಗಳೂರು ಆಹಾರ ನಿರೀಕ್ಷಿಕ ಶಮಂತ್‌ ತಿಳಿಸಿದರು.

"ಮಂಗಳವಾರ ಗೋಡನ್‌ಗೆ ಅಕ್ಕಿ ಬಂದಿದ್ದು, ವಿತರಣೆ ಪ್ರಾರಂಭಿಸಿದ್ದೇವೆ. ವರ್ಷಾಂತ್ಯವೂ ಆಗಿರುವುದರಿಂದ ಪೂರೈಕೆ ವಿಳಂಬವಾಗಿದ್ದು, ವಿತರಣೆ ತಡವಾಗಿದೆ. ಲಗ್ಗೆರೆಯ ಪ್ರೀತಿ ನಗರದಲ್ಲಿ 17 ಪಡಿತರ ಅಂಗಡಿಗಳಿದ್ದು, ಪ್ರತಿ ಅಂಗಡಿಗಳಲ್ಲೂ 600ರಿಂದ 700 ಕಾರ್ಡ್‌ಗಳಿವೆ ಎಲ್ಲರಿಗೂ ಪಡಿತರ ವಿತರಿಸಲಿದ್ದೇವೆ" ಎಂದು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

Tags:    

Similar News