ಮಳೆ ಹಾನಿ: ಕೇಂದ್ರದ ಪರಿಹಾರ ಸದ್ಯ ಅವಶ್ಯಕತೆ ಇಲ್ಲ ಎಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ
ಇದುವರೆಗೆ ರಾಜ್ಯದಲ್ಲಿ ಮಳೆ ಅನಾಹುತಕ್ಕೆ 20 ಮಂದಿ ಮೃತಪಟ್ಟಿದ್ದಾರೆ. ಮಳೆ ಹಾನಿಗೆ ಪರಿಹಾರ ಕೊಡುವಷ್ಟು ಹಣ ನಮ್ಮಲ್ಲಿದ್ದು, ಕೇಂದ್ರದಿಂದ ಪರಿಹಾರ ಕೇಳುವ ಸ್ಥಿತಿ ಇಲ್ಲ. ಮಳೆ ಹೆಚ್ಚಾಗಿ, ನಷ್ಟವಾದರೆ ಪರಿಹಾರ ಕೇಳುತ್ತೇವೆ' ಎಂದು ಹೇಳಿದ್ದಾರೆ.
'ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮಳೆ ಅನಾಹುತಗಳಲ್ಲಿ ಇದುವರೆಗೆ 20 ಮಂದಿ ಮೃತಪಟ್ಟಿದ್ದಾರೆ. ಆದರೆ ಮಳೆ ಹಾನಿಗೆ ಪರಿಹಾರ ಕೊಡುವಷ್ಟು ಹಣ ನಮ್ಮಲ್ಲಿದ್ದು, ಕೇಂದ್ರದಿಂದ ಪರಿಹಾರ ಕೇಳುವ ಸ್ಥಿತಿ ಇಲ್ಲ. ಮಳೆ ಹೆಚ್ಚಾಗಿ, ನಷ್ಟವಾದರೆ ಪರಿಹಾರ ಕೇಳುತ್ತೇವೆ' ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
'ಅತಿವೃಷ್ಟಿಯಾಗುವ 1,763 ಸಂಭವನೀಯ ಗ್ರಾಮಗಳನ್ನು ಗುರುತಿಸಲಾಗಿದ್ದು, ಆಯಾ ಜಿಲ್ಲಾಡಳಿತಕ್ಕೆ ಪಟ್ಟಿ ನೀಡಲಾಗಿದೆ. ವಿಪತ್ತು ನಿರ್ವಹಿಸಲು ಟಾಸ್ಕ್‌ಫೋರ್ಸ್ ರಚನೆಗೆ ಸೂಚಿಸಲಾಗಿದೆ' ಎಂದರು.
“ಪಂಚಾಯಿತಿ, ಕಂದಾಯ ಇಲಾಖೆ ಅಧಿಕಾರಿಗಳು, ಎಂಜಿನಿಯರುಗಳು, ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಸಣ್ಣ ನೀರಾವರಿ ಇಲಾಖೆ ಸಿಬ್ಬಂದಿ ಟಾಸ್ಕ್‌ಫೋರ್ಸ್‌ನಲ್ಲಿರಲಿದ್ದಾರೆ. ಸಂಭವನೀಯ ಅತಿವೃಷ್ಟಿ ಗ್ರಾಮಗಳಿಗೆ ಭೇಟಿ ನೀಡಿ ಅಣಕು ಕಾರ್ಯಾಚರಣೆ ಮಾಡಲಿದ್ದಾರೆ' ಎಂದರು.
'ವಿಪತ್ತು ನಿರ್ವಹಣೆಗಾಗಿ ರೂ 777 ಕೋಟಿ ಹಣವನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಖಾತೆಗಳಿಗೆ ವಿತರಿಸಲಾಗಿದೆ. ಎರಡು ಮೂರು ದಿನ ಸತತ ಮಳೆಯಾಗುವ ಮುನ್ಸೂಚನೆ ಬಂದಾಗ ಗ್ರಾಮದಲ್ಲಿಯೇ ತಂಡವು ಮೊಕ್ಕಾಂ ಹೂಡಲು ಹಾಗೂ ಅವಶ್ಯಕತೆ ಇದ್ದರೆ ಕಾಳಜಿ ಕೇಂದ್ರ ತೆರೆಯಲು ಸೂಚಿಸಲಾಗಿದೆ' ಎಂದು ಹೇಳಿದರು.
'ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ, ಬೆಂಗಳೂರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತುಕಡಿ ಹಾಗೂ ಬೆಂಗಳೂರು, ದಾವಣಗೆರೆ, ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಎಸ್‌ಟಿಆರ್‌ಎಫ್ ತುಕಡಿಗಳನ್ನು ಇರಿಸಲಾಗಿದೆ. ಜವಾಬ್ದಾರಿಯುತ ಸರ್ಕಾರವಾಗಿ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ' ಎಂದರು.