ಹೊಸ ಅಪರಾಧ ಕಾನೂನಿಗೆ ತಿದ್ದುಪಡಿ | ಕೇಂದ್ರದ ಕಾನೂನಿಗೆ ರಾಜ್ಯದ ಸೆಡ್ಡು

ಕರ್ನಾಟಕ ಸರ್ಕಾರವಂತೂ ಜುಲೈ 15ರಿಂದ ಆರಂಭವಾಗಲಿರುವ ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿ ಕೇಂದ್ರದ ಈ ಮೂರು ಕಾನೂನುಗಳಿಗೆ ತಿದ್ದುಪಡಿ ತರಲು ಸಜ್ಜಾಗಿದೆ. ಈ ಕುರಿತು ಮಾತನಾಡಿರುವ ಸಚಿವ ಎಚ್‌. ಕೆ. ಪಾಟೀಲ್‌ ಅವರು; “ಗುರುವಾರ (ಜು.4 ) ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕೇಂದ್ರದ ಮೂರು ಹೊಸ ಕ್ರಿಮಿನಲ್‌ ಅಪರಾಧ ಕಾನೂನುಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ಚರ್ಚಿಸಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ. “ಈ ಮೂರು ಕಾನೂನುಗಳ 23 ಅಂಶಗಳಿಗೆ ತಿದ್ದುಪಡಿ ತರದೆ ಬೇರೆ ದಾರಿಯೇ ಇಲ್ಲ. ಹಾಗಾಗಿ ತಿದ್ದುಪಡಿ ಅತ್ಯಗತ್ಯ ಎಂದು ಸರ್ಕಾರ ಭಾವಿಸಿದೆ” ಎಂದು ಅವರು ತಿದ್ದುಪಡಿಯ ಸ್ಪಷ್ಟ ಸೂಚನೆ ನೀಡಿದ್ದಾರೆ.;

Update: 2024-07-03 07:46 GMT
ಅಪರಾಧ ಕಾನೂನುಗಳಿಗೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Click the Play button to listen to article

ಕೇಂದ್ರ ಸರ್ಕಾರದೊಂದಿಗೆ ಆರ್ಥಿಕ ಸಂಪನ್ಮೂಲ ಹಂಚಿಕೆಯಲ್ಲಿ ಆಗಿರುವ ತಾರತಮ್ಯಕ್ಕಾಗಿ ಸಂಘರ್ಷಕ್ಕಿಳಿದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ, ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳಿಗೆ ಸಂಬಂಧಿಸಿದಂತೆ ಸಂಘರ್ಷಕ್ಕಿಳಿದಿದೆ.  

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳಿಗೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೇವಲ ಸರ್ಕಾರವಷ್ಟೇ ಅಲ್ಲ, ವಕೀಲರು, ಗೃಹ ಇಲಾಖೆ, ಪೊಲೀಸ್‌ ವ್ಯವಸ್ಥೆ ಮತ್ತು ಜನಗಳು ಕೂಡ ಈ ಹೊಸ ಕಾನೂನುಗಳನ್ನು ವಿರೋಧಿಸಿದ್ದಾರೆ. 

ಕರ್ನಾಟಕ ಸರ್ಕಾರವಂತೂ ಜುಲೈ 15ರಿಂದ ಆರಂಭವಾಗಲಿರುವ ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿ ಕೇಂದ್ರದ ಈ ಮೂರು ಕಾನೂನುಗಳಿಗೆ ತಿದ್ದುಪಡಿ ತರಲು ಸಜ್ಜಾಗಿದೆ. ಈ ಕುರಿತು ಮಾತನಾಡಿರುವ ಸಚಿವ ಎಚ್‌. ಕೆ. ಪಾಟೀಲ್‌ ಅವರು; “ಗುರುವಾರ (ಜು.4 ) ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕೇಂದ್ರದ ಮೂರು ಹೊಸ ಕ್ರಿಮಿನಲ್‌ ಅಪರಾಧ ಕಾನೂನುಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ಚರ್ಚಿಸಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ. “ಈ ಮೂರು ಕಾನೂನುಗಳ 23 ಅಂಶಗಳಿಗೆ ತಿದ್ದುಪಡಿ ತರದೆ ಬೇರೆ ದಾರಿಯೇ ಇಲ್ಲ. ಹಾಗಾಗಿ ತಿದ್ದುಪಡಿ ಅತ್ಯಗತ್ಯ ಎಂದು ಸರ್ಕಾರ ಭಾವಿಸಿದೆ” ಎಂದು ಅವರು ತಿದ್ದುಪಡಿಯ ಸ್ಪಷ್ಟ ಸೂಚನೆ ನೀಡಿದ್ದಾರೆ.

ಅವರು ನೀಡಿರುವ ಸೂಚನೆಯನ್ನು ಗಮನಿಸಿದರೆ, ಭಾರತೀಯ ನ್ಯಾಯ ಸಂಹಿತೆಯ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ತಲಾ 9 ಅಂಶಗಳಿಗೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮದ 5 ಅಂಶಗಳಿಗೆ ಸೇರಿದಂತೆ ಒಟ್ಟು 23 ಅಂಶಗಳಿಗೆ ತಿದ್ದುಪಡಿ ತರಲು ಸರ್ಕಾರ ಸಿದ್ಧತೆ ನಡೆಸಿದಂತಿದೆ.

ಈ ಮೂರು ಕಾನೂನುಗಳು ಜಾರಿಗೆ ಬಂದ ನಂತರ ಪೊಲೀಸ್‌ ಇಲಾಖೆಗೆ ಹೊಸ ಸವಾಲುಗಳು ಎದುರಾಗಿ ʼನವʼ ಭಾರತೀಯ ನ್ಯಾಯ ಸಂಹಿತೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಒತ್ತಡದಲ್ಲಿ ಪೊಲೀಸರಿದ್ದಾರೆ. ಹೊಸ ಕಾನೂನು ವ್ಯವಸ್ಥೆ ಜಾರಿ ಬಗ್ಗೆ ಆತಂಕಗೊಂಡಿರುವ ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿ ಕೆ. ವಿ. ಧನಂಜಯ ಅವರು, ಈ ಕೂಡಲೇ ರಾಜ್ಯದಲ್ಲಿ ಈ ಮೂರು ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಇದಕ್ಕಾಗಿ ವಿಧಾನ ಮಂಡಲದಿಂದ ದತ್ತವಾದ ಅಧಿಕಾರವನ್ನು ಬಳಕೆ ಮಾಡುವಂತೆ ಅವರು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ. “ಭಾರತೀಯ ನ್ಯಾಯ ಸಂಹಿತೆ (BNS) ಯಲ್ಲಿ ಹೊಸದೇನಿಲ್ಲ. ಇದು ಭಾರತೀಯ ದಂಡ ಸಂಹಿತೆ (IPC) ಯ ಹೊಸ ರೂಪದಂತೆ ಕಾಣುತ್ತಿದೆ ಅಷ್ಟೆ. IPCಯ ಶೇ 75 ರಿಂದ 80 ರಷ್ಟು ಭಾಷೆಯನ್ನು ಯಥಾವತ್ತಾಗಿ ಎತ್ತಿಕೊಂಡಂತಿದೆ” ಎಂದು ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕ ವಿರೋಧಿಸುತ್ತಿರುವುದೇಕೆ?

ಸರ್ಕಾರ ಈ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವುದಾದರೂ ಏಕೆ? ಎಂದು ಗಮನಿಸಿದರೆ, ಕಾಣುವ ಅಂಶಗಳಿವು. ಈ ಕಾನೂನುಗಳು, ಸ್ವಾತಂತ್ರ್ಯ ಹೋರಾಟದ ಮೌಲ್ಯಗಳಿಗೆ ತಿಲಾಂಜಲಿ ಇತ್ತಿದೆ. ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುವುದು ಈ ಕಾನೂನುಗಳಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅತ್ಯಹತ್ಯೆ ಮಾಡಿಕೊಳ್ಳುವುದು ಅಪರಾಧವಲ್ಲ ಎಂಬ ಅಂಶದಲ್ಲಿ ಹುರುಳಿಲ್ಲ. ರಾಷ್ಟ್ರಪಿತ, ರಾಷ್ಟ್ರೀಯ ಲಾಂಛನ ಮತ್ತು ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿಸಿದವರ ವಿರುದ್ಧ ಕ್ರಮಕ್ಕೆ ಈ ಕಾಯ್ದೆಗಳಡಿಯಲ್ಲಿ ಅವಕಾಶವಿಲ್ಲ. ಅಷ್ಟೇ ಅಲ್ಲ. ಸಂಘಟಿತ ಅಪರಾಧ ಎಂದು ಆರೋಪಿಸಿ ವ್ಯಕ್ತಿಗಳ ಮೇಲೆ ಗುಂಪು ಮೊಕದ್ದಮೆ ದಾಖಲಿಸಲು ಪೊಲೀಸರಿಗೆ ವಿವೇಚನಾಧಿಕಾರ ನೀಡಲಾಗಿದೆ. ಹಾಗೆಯೇ ಆರೋಪಿಯ ಆಸ್ತಿ ಜಪ್ತಿ ಮಾಡಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಈ ಹಿಂದೆ ಆರೋಪಿಯ ಆಸ್ತಿ ಜಪ್ತಿ ಮಾಡಲು ನ್ಯಾಯಾಲಯದ ಅನುಮತಿ ಬೇಕಿತ್ತು. ರಾಷ್ಟ್ರೀಯ ಭಾವೈಕ್ಯಕ್ಕೆ ಧಕ್ಕೆ ತರುವ ಅಪರಾಧಗಳಿಗೆ ಕೇವಲ ಗರಿಷ್ಠ 3 ವರ್ಷ ಶಿಕ್ಷೆ ಅಥವಾ 1000 ರೂಪಾಯಿ ದಂಡವೆಂದು ನಿರ್ಧರಿಸಿರುವುದು ಆಶ್ಚರ್ಯ ಹುಟ್ಟಿಸಿದೆ. ಯಾವುದೇ ಅರೋಪಿಗಳಿಗೆ ಮೊದಲು 15 ದಿನವಿದ್ದ ಪೊಲೀಸ್‌ ಕಸ್ಟಡಿಯ ಅವಧಿ 90 ದಿನಗಳ ವರೆಗೆ ವಿಸ್ತರಿಸಲಾಗಿದೆ. ಎಲ್ಲಕ್ಕಿಂತ ಘೋರ ಎನ್ನಿಸುವ ತಿರ್ಮಾನ ಮೃತದೇಹದ ಮೇಲೆ ಅತ್ಯಾಚಾರ ಎಸಗುವುದು ಅಪರಾಧವಲ್ಲ ಎಂದು ಈ ಕಾನೂನು ಹೇಳುವುದು. “ಈ ಅಂಶಗಳಿಗೆ ತಿದ್ದುಪಡಿ ತರದಿದ್ದರೆ, ಅದು ಸಮಾಜಕ್ಕೆ ಮಾಡುವ ತೀವ್ರತರವಾದ ದ್ರೋಹವಾಗುತ್ತದೆʼ ಎಂದು ರಾಜ್ಯ ಕಾನೂನು ಸಚಿವ ಎಚ್. ಕೆ. ಪಾಟೀಲರು ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಸಮಾಜ ಸ್ನೇಹಿಯೇ?

ಕೇಂದ್ರ ಜಾರಿಗೊಳಿಸಿರುವ ಈ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳ ಬಗ್ಗೆ ಇಷ್ಟೊಂದು ಪ್ರಶ್ನೆಗಳಿದ್ದರೂ, ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಯುಗ ಆರಂಭವಾಗಿದೆ ಎಂದೇ ಈ ಕಾನೂನುಗಳನ್ನು ಶ್ಲಾಘಿಸಲಾಗುತ್ತಿದೆ. ನಿಜ. ಈ ಪ್ರಕ್ರಿಯೆಯೊಂದಿಗೆ ಒಂದೂವರೆ ಶತಮಾನಗಳಿಂದ ಜಾರಿಯಲ್ಲಿದ್ದ ಭಾರತೀಯ ದಂಡ ಸಂಹಿತೆ (Indian Penal Code) ಕ್ರಿಮಿನಲ್‌ ಪ್ರಕ್ರಿಯಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಈಗ ಇತಿಹಾಸ ಸೇರಿವೆ. ಆದರೆ, ಅವುಗಳನ್ನು ಇತಿಹಾಸ ಸೇರಿಸುವ ಮುನ್ನ ಸ್ವಲ್ಪ ಎಚ್ಚರ ವಹಿಸಿ, ಈ ಮುನ್ನ ಹೇಳಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜ ಸ್ನೇಹಿಯಾಗಿಸಿದ್ದಲ್ಲಿ 150 ವರ್ಷಗಳ ಕಾಲ ಜಾರಿಯಲ್ಲಿದ್ದ ಅಪರಾಧ ಕಾನೂನುಗಳು ಮತ್ತಷ್ಟ ಪ್ರಸ್ತುತವಾಗುತ್ತಿತ್ತು ಎಂಬುದು ಕಾನೂನು ತಜ್ಞರ ಅನಿಸಿಕೆ. ಈ ಕಾನೂನುಗಳಲ್ಲಿ ಒಂದಿಷ್ಟು ಆಕ್ಷೇಪಾರ್ಹ ಸಂಗತಿಗಳಿವೆ ಎಂದು ಪ್ರತಿಪಕ್ಷಗಳು ಹಾಗು ಸ್ವಯಂ ಸೇವಾ ಸಂಸ್ಥೆಗಳು ಧ್ವನಿ ಎತ್ತಿವೆ. ಅವು ಟೀಕೆಗಾಗಿ ಟೀಕೆಯ ಧ್ವನಿಯಲ್ಲ. ಅದರಲ್ಲಿ ಕಾಣಿಸುವುದು ಸಮಾಜಿಕ ಜವಾಬ್ದಾರಿ. ಏಕೆಂದರೆ, ಈ ಕಾನೂನುಗಳು ಮಾನವ ಹಕ್ಕಿಗೆ, ಮಾನವೀಯ ಮೌಲ್ಯಗಳಿಗೆ ಧಕ್ಕೆಯಾಗಬಾರದೆಂಬುದು ಅವರ ಆಕ್ಷೇಪಗಳ ಆಶಯ ಎಂಬುದನ್ನು ಆಳುವವರು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದು ವಿರೋಧ ಪಕ್ಷಗಳ ನಿಲುವು.

ಆದರೆ, ಈ ಪ್ರಕ್ರಿಯೆಯಲ್ಲಿ ಒಂದು ಒಳ್ಳೆಯ ಸಂಗತಿ ಕಾಣಿಸುತ್ತದೆ. ಹೊಸ ಕಾನೂನುಗಳು ಆಧುನಿಕ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಿವೆ. “ಮೂರು ಅಪರಾಧ ಕಾನೂನುಗಳು ಸೋಮವಾರದಿಂದ ಜಾರಿಯಾಗಿವೆ. ಈ ಕಾನೂನುಗಳನ್ನು ಜಾರಿಗೊಳಿಸಲು ಸರ್ಕಾರ ಒಂದು ತಂತ್ರಾಂಶ (App) ಅಭಿವೃದ್ಧಿ ಪಡಿಸಿದೆ. ಇನ್ನು ಮುಂದೆ ದಾಖಲಾಗುವ ಪ್ರಕರಣಗಳಿಗೆ ಈ ಕಾನೂನುಗಳು ಅನ್ವಯವಾಗಲಿವೆ” ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಸ್ಪಷ್ಟಪಡಿಸಿದ್ದಾರೆ.

“ಆದರೆ, ಈ ಕಾನೂನುಗಳಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಪರಿಣಾಮ ಗೊತ್ತಾಗಲು ಇನ್ನು ಕೆಲವು ಕಾಲ ಬೇಕು” ಎನ್ನುತ್ತಾರೆ ಪರಮೇಶ್ವರ್.

ಆದರೆ ಈ ಕಾನೂನುಗಳು ಸಂಪೂರ್ಣವಾಗಿ ಮಾನವ ಸ್ವಾತಂತ್ಯ ಹಾಗೂ ಹಕ್ಕುಗಳ ಪರವಾಗಿಲ್ಲ ಎನ್ನುವುದನ್ನು ಇಲ್ಲಿ ಹೇಳಲೇ ಬೇಕು ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಆಡಿರುವ ಮಾತುಗಳು ಕೂಡ ಅರ್ಥಪೂರ್ಣ. ಈ ಕಾನೂನುಗಳಲ್ಲಿ ಕಾಣುವ ಮತ್ತೊಂದು ಉತ್ತಮ ಅಂಶವೆಂದರೆ ನ್ಯಾಯ ದೊರಕಿಸುವಲ್ಲಿ ವಿಳಂಬವಾಗದಂತೆ ನೋಡಿಕೊಳ್ಳುವುದು. “ನ್ಯಾಯಾಲಯದಲ್ಲಿ ಗೆದ್ದವನು ಸೋತ, ಸೋತವನು ಸತ್ತ” ಎಂಬ ಮಾತನ್ನು ಸುಳ್ಳು ಮಾಡುವಂತೆ, ಶೀಘ್ರ ನ್ಯಾಯ ದೊರಕಿಸಲು ಕ್ರಮಕೈಗೊಳ್ಳಲಾಗಿದೆ. ಪ್ರಕರಣ ನಡೆದು ಮೂರು ವರ್ಷಗಳಲ್ಲಿ ನ್ಯಾಯ ನೀಡುವ ನ್ಯಾಯಾಂಗ ವ್ಯವಸ್ಥೆಯನ್ನು ಈ ಕಾನೂನುಗಳು ಖಾತ್ರಿ ಪಡಿಸಿವೆ.

ಪರಿಷ್ಕರಣೆಯ ಸಮಝಾಯಿಷಿ

ಈ ಕಾನೂನುಗಳ ಬಗ್ಗೆ ಬಂದಿರುವ ಆಕ್ಷೇಪಗಳ ಬಗ್ಗೆ ಸಮರ್ಥನೆ ಕೂಡ ಸಮನಾಗಿ ಸಮಾನಾಂತರವಾಗಿ ವ್ಯಕ್ತವಾಗುತ್ತಿದೆ. ಆ ಆಕ್ಷೇಪಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸಬೂಬು; ಯಾವುದೇ ಹೊಸ ಕಾಯ್ದೆ ಜಾರಿಗೆ ತಂದರೂ, ಅದರಲ್ಲಿ ನ್ಯೂನ್ಯತೆಗಳು ಇದ್ದೇ ಇರುತ್ತವೆ. ಅವುಗಳನ್ನು ಕಾಲ ಕ್ರಮೇಣ ಸರಿಪಡಿಸಿಕೊಳ್ಳಲು ಪರಿಷ್ಕರಣೆಗೆ ಅವಕಾಶವಿದೆ ಎನ್ನುವುದು. ಸರಿಪಡಿಸಿಕೊಳ್ಳುವ ಸಂಸತ್‌ ಆಗಲಿ, ವಿಧಾನ ಮಂಡಲವಾಗಲಿ ಯಾವ ರಾಜಕೀಯ ಪಕ್ಷದ ಕೈಯಲ್ಲಿದೆ ಎನ್ನುವದು ಮುಖ್ಯವಾಗುತ್ತದೆ ಎಂಬುದನ್ನು ಇಲ್ಲಿ ಮರೆಯಬಾರದು ಎಂಬುದು ತಿದ್ದುಪಡಿಗಳನ್ನು ತರಲು ನಿರ್ಧರಿಸಿರುವ ಕಾಂಗ್ರೆಸ್‌ ಸರ್ಕಾರದ ನಿಲುವು.

“ಏಕೆಂದರೆ, ಕೇಂದ್ರ ಸರ್ಕಾರವು ತನ್ನ ಹಿಂದಿನ ಅವಧಿಯಲ್ಲಿ ರೂಪಿಸಿರುವ ಈ ಸಿದ್ಧ ಕಾಯ್ದೆಯನ್ನು ಇದೀಗ ಯಾವುದೇ ಚರ್ಚೆಯಿಲ್ಲದೆ ಜಾರಿಗೊಳಿಸಿದೆ. ಇದು ಸರಿಯಲ್ಲ. ಏಕೆಂದರೆ, ಯಾವುದೇ ಕಾನೂನು ರೂಪುಗೊಂಡರೆ ಅದು ಅದೇ ಸರ್ಕಾರದ ಅವಧಿಯಲ್ಲಿ ಜಾರಿಯಾಗಬೇಕು. ಇದು ಸಾಧ್ಯವಾಗದ ಪಕ್ಷದಲ್ಲಿ ಮತ್ತೆ ಅದೇ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಹಳೆ ನೀತಿ ಜಾರಿಗೊಳಿಸುವ ಮುನ್ನ ಮತ್ತೊಮ್ಮೆ ಕಾನೂನು ಜಾರಿ ಪ್ರಕ್ರಿಯೆ ನಡೆಸಬೇಕು. ಆದರೆ ಈಗ ಅಧಿಕಾರಕ್ಕೆ ಬಂದಿರುವ ಎನ್‌ ಡಿ ಎ ನೇತೃತ್ವದ ಸಮ್ಮಿಶ್ರ ಸರ್ಕಾರ ಹೊಸದಾಗಿ ಪ್ರಕ್ರಿಯೆ ನಡೆಸದೆ ತನ್ನ ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಏಕಪಕ್ಷೀಯವಾಗಿ ಜಾರಿ ಮಾಡಿದೆ. ಇದು ಅಸಂಬದ್ಧ , ಅನೈತಿಕ ರಾಜಕೀಯ ಕ್ರಮ ಎನ್ನುವುದು ಎಚ್‌ ಕೆ ಪಾಟೀಲ್‌ ರ ವಾದ. ಈ ವಾದದಲ್ಲಿ ಹುರುಳಿಲ್ಲ ಎಂದು ತಳ್ಳಿ ಹಾಕುವಂತಿಲ್ಲ.

ತಜ್ಞರ ಸಮಿತಿ ವರದಿ, ಶಿಫಾರಸುಗಳ ನಿರ್ಲಕ್ಷ್ಯ

ಇಲ್ಲಿ ಮತ್ತೊಂದು ಸಂಗತಿಯನ್ನು ಗಮನಿಸಬೇಕು. ಈ ಕಾನೂನುಗಳನ್ನು ಜಾರಿಗೆ ತರುವಾಗ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳು ನೀಡಿರುವ ಸಲಹೆಗಳನ್ನು, ಅಭಿಪ್ರಾಯಗಳನ್ನು ಮೋದಿ ನೇತೃತ್ವದ ಸಮ್ಮಿಶ್ರ ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ಸಾರ್ವತ್ರಿಕ ಸತ್ಯ. “ಈ ಹಿಂದೆ ಗೃಹ ಸಚಿವ ಅಮಿತ್‌ ಶಾ ಅವರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು, ಮೂರು ಕಾನೂನುಗಳು ಮಸೂದೆ ಹಂತದಲ್ಲಿರುವಾಗ ಸಲಹೆ ಸೂಚನೆ ಕೇಳಿದ್ದರು. ಅದರಂತೆ ಸರ್ಕಾರ ಈ ಕುರಿತು ತಜ್ಞರ ಸಮಿತಿ ರಚಿಸಿ ಅಭಿಪ್ರಾಯ ಸಂಗ್ರಹ ಮಾಡಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ 23 ಸಲಹೆಗಳನ್ನು ನೀಡಿ ವರದಿ ಸಲ್ಲಿಸಿತ್ತು. ಆದರೆ ಎನ್‌ ಡಿ ಎ ಸರ್ಕಾರ ಈ ಯಾವುದೇ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳದೆ, ಏಕಪಕ್ಷೀಯವಾಗಿ ಈ ಕಾನೂನುಗಳನ್ನು ಜಾರಿಮಾಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪಾಟೀಲರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಬೇಕಿರುವುದು ವಿರೋಧ ಪಕ್ಷದಲ್ಲಿರುವ ಬಿಜೆಪಿ.

ಮಾನವ ಹಕ್ಕುಗಳ ಉಲ್ಲಂಘನೆ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕಾನೂನುಗಳಲ್ಲಿ ಹಲವು ದೋಷಗಳು ಉಳಿದುಕೊಂಡಿವೆ. ಈ ಕಾನೂನುಗಳ ಜಾರಿಯಿಂದ ದೇಶದಲ್ಲಿ ಪೊಲೀಸ್‌ ಆಳ್ವಿಕೆ ಆರಂಭವಾಗಲಿದೆ. ಈ ಕಾನೂನುಗಳು ಸ್ವಾತಂತ್ರ್ಯ ಚಳವಳಿಯ ಆಶಯಗಳಿಗೆ, ಮಾನವೀಯ ಉದಾತ್ತ ಧ್ಯೇಯಗಳಿಗೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಈ ಕಾನೂನುಗಳ ಜಾರಿಯಿಂದ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಲಿದೆ ಎಂಬುದು ಎಚ್‌ ಕೆ. ಪಾಟೀಲ್‌ ದೃಢವಾದ ನಂಬಿಕೆ.

ತಿದ್ದುಪಡಿ ಅಧಿಕಾರವಿದೆಯೇ?

ಹಾಗಾದರೆ, ಈ ಕಾನೂನುಗಳಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆಯೇ? ಎಂಬ ಪ್ರಶ್ನೆ ಸಹಜ. “ಸಾಧ್ಯವಿದೆ” ಎಂದು ಸಂವಿಧಾನ ಮತ್ತು ಸಂಸದೀಯ ವ್ಯವಸ್ಥೆಯ ಅಧಿಕೃತ ತಿಳುವಳಿಕೆ ಇರುವ ಪಾಟೀಲರು ಹೇಳುತ್ತಾರೆ. “ ಸಂವಿಧಾನದ ಪರಿಚ್ಛೇದ 7ರ 3ನೇ ಪಟ್ಟಿಯಲ್ಲಿ ದತ್ತವಾದ ಅಧಿಕಾರ ಬಳಸಿಕೊಂಡು ಈ ಮೂರು ಕಾನೂನುಗಳಿಗೆ ಅಗತ್ಯವಾದ ತಿದ್ದುಪಡಿ ತರಲು ಎಲ್ಲ ಪ್ರಕ್ರಿಯೆ ನಡೆಸಲಾಗುತ್ತಿದೆ” ಎನ್ನುತಾರೆ ಪಾಟೀಲ್.‌‌

ಈ ಕುರಿತು ಕಾನೂನು ತಜ್ಞರು ಏನು ಹೇಳುತ್ತಾರೆ ಎಂಬುದೂ ಇಲ್ಲಿ ಮುಖ್ಯ. ಯಾವುದೇ ರಾಜ್ಯಕ್ಕೆ ಇಷ್ಟವಿರಲಿ, ಇಲ್ಲದಿರಲಿ, ಆ ರಾಜ್ಯಗಳು ಮಾಡಿದ ತಿದ್ದುಪಡಿ ಜಾರಿಯಾಗುವವರೆಗೂ ಈ ಹೊಸ ಮೂರು ಕಾನೂನುಗಳನ್ನು ಆಯಾ ರಾಜ್ಯ ಸರ್ಕಾರ ಅನುಸರಿಸಲೇಬೇಕು.

Tags:    

Similar News