ಅತ್ಯಾಚಾರ ಪ್ರಕರಣ | A1 ಮುನಿರತ್ನಗೆ ಇಲ್ಲ ಜಾಮೀನು; ಮೂವರಿಗೆ ಜಾಮೀನು ಮಂಜೂರು
ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ A1 ಆರೋಪಿ ಮುನಿರತ್ನ ಹೊರತುಪಡಿಸಿ ಉಳಿದ ಮೂವರಿಗೆ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.;
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಹೊರತುಪಡಿಸಿ ಉಳಿದ ಮೂವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಸೋಮವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು, ಆರೋಪಿಗಳಾದ ಲೋಹಿತ್, ಕಿರಣ್ ಮತ್ತು ಮಂಜುನಾಥ್ ಗೆ ಜಾಮೀನು ಮಂಜೂರು ಮಾಡಿದರು. ಆದರೆ, ಎ1 ಆರೋಪಿಯಾಗಿರುವ ಮುನಿರತ್ನ ಅವರಿಗೆ ಜಾಮೀನು ನಿರಾಕರಿಸಿದೆ.
ಐಪಿಸಿ ಸೆಕ್ಷನ್ 354ಎ, 354ಸಿ, 376, 506, 504, 120(ಬಿ), 149, 384, 406, 308 ಅಡಿಯಲ್ಲಿ ಕೇಸ್ ದಾಖಲಾಗಿದೆ. ಮುನಿರತ್ನ ನಾಯ್ಡು (A1), ವಿಜಯ್ ಕುಮಾರ್ (A2), ಸುಧಾಕರ (A3), ಕಿರಣ್ ಕುಮಾರ್ (A4), ಲೋಹಿತ್ ಗೌಡ (A5), ಮಂಜುನಾಥ (A6), ಲೋಕಿ (A7) ಎಂಬವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿತ್ತು.
ಸಮಾಜ ಸೇವಕಿಯಾಗಿ ಗುರುತಿಸಿಕೊಂಡು ಬಿಜೆಪಿಯಲ್ಲೂ ಸಕ್ರಿಯವಾಗಿದ್ದ ರಾಜರಾಜೇಶ್ವರಿ ನಗರದ ಸುಮಾರು 40 ವರ್ಷದ ಮಹಿಳೆಯ ದೂರಿನ ಆಧಾರದ ಮೇಲೆ ಕಗ್ಗಲೀಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.