ಅತ್ಯಾಚಾರ, ಬ್ಲ್ಯಾಕ್‌ಮೇಲ್: ಯುವಕನ ಬಂಧನ, ತಂದೆಗಾಗಿ ಶೋಧ
ಸುಬ್ರಹ್ಮಣ್ಯನಗರ ನಿವಾಸಿಯಾದ 24 ವರ್ಷದ ಯುವತಿ ನೀಡಿದ ದೂರಿನ ಪ್ರಕಾರ, ನಿರಂಜನ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.;
ಸಾಂದರ್ಭಿಕ ಚಿತ್ರ
ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಖಾಸಗಿ ಕ್ಷಣಗಳ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇಲೆ, ಬಸವೇಶ್ವರನಗರ ನಿವಾಸಿಯಾದ ನಿರಂಜನ್ (30) ಎಂಬ ಯುವಕನನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್ಯನಗರ ನಿವಾಸಿಯಾದ 24 ವರ್ಷದ ಯುವತಿ ನೀಡಿದ ದೂರಿನ ಪ್ರಕಾರ, ನಿರಂಜನ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ, ಆತನ ತಂದೆ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ರಾಜಶೇಖರ್, ತನ್ನ ಮಗನ ಮೊಬೈಲ್‌ನಲ್ಲಿದ್ದ ಸಂತ್ರಸ್ತೆಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಬಳಸಿಕೊಂಡು, "ನನ್ನೊಂದಿಗೆ ಮತ್ತು ನಾನು ಹೇಳಿದವರ ಜೊತೆ ದೈಹಿಕ ಸಂಬಂಧ ಹೊಂದಬೇಕು," ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆಯು ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.
ಈ ದೂರಿನ ಅನ್ವಯ, ನಿರಂಜನ್‌ನನ್ನು ಅತ್ಯಾಚಾರ ಆರೋಪದಡಿ ಬಂಧಿಸಲಾಗಿದ್ದು, ಆತನ ತಂದೆ ರಾಜಶೇಖರ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ರಾಜಶೇಖರ್ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.