CAFE BLAST CASE | ಸಂಚುಕೋರನ ಬಂಧನ!

ಮೂರು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಎನ್‌ ಐಎ ಗುರುವಾರ ವಶಕ್ಕೆ ಪಡೆದಿದೆ;

Update: 2024-03-28 14:54 GMT
ರಾಮೇಶ್ವರಂ ಕೆಫೆ

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಂಚಿನಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಬುಧವಾರ ಕರ್ನಾಟಕ , ತಮಿಳುನಾಡು ಹಾಗೂ ಉತ್ತರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತ್ತು.

ಕರ್ನಾಟಕದ 12, ತಮಿಳುನಾಡಿನ 5 ಹಾಗೂ ಉತ್ತರ ಪ್ರದೇಶದ ಒಂದು ಪ್ರದೇಶ ಸೇರಿದಂತೆ 18 ಸ್ಥಳಗಳಲ್ಲಿ ಎನ್ಐಎ ತಂಡಗಳು ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ರಾಮೇಶ್ವರಂ ಕೆಫೆ ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದ ಎನ್ನಲಾಗಿರುವ ಮುಝಮ್ಮಿಲ್ ಶರೀಫ್ (Muzammil Shareef) ಎಂಬವನನ್ನು ಬಂಧಿಸಲಾಗಿದೆ.

ಮಾರ್ಚ್ 3 ರಂದು ರಾಮೇಶ್ವರಂ ಕೆಫೆ ಸ್ಫೋಟದ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎನ್ಐಎ, ಸ್ಫೋಟ ನಡೆಸಿದ ಪ್ರಮುಖ ಆರೋಪಿ ಮುಸಾವಿರ್ ಹುಸ್ಸೇನ್ ಶಾಝಿಬ್‌ನ ಗುರುತು ಪತ್ತೆ ಮಾಡಿತ್ತು. ಅಲ್ಲದೇ ಮತ್ತೊಬ್ಬ ಸಂಚುಕೋರ ಅಬ್ದುಲ್ ಮಥೀನ್ ತಾಹಾ ಎನ್ನುವವನ್ನು ಗುರುತಿಸಲಾಗಿತ್ತು. ಆದರೆ, ಆ ಇಬ್ಬರೂ ಇನ್ನೂ ಪತ್ತೆಯಾಗಿಲ್ಲ.

ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಗುರುತಿಸಲಾಗಿರುವ ಪ್ರಮುಖ ಆರೋಪಿಗಳಿಗೂ ಸೆರೆಸಿಕ್ಕಿರುವ ಆರೋಪಿ ಸಹಾಯ ಮಾಡಿದ್ದಾನೆ ಎಂದು ಎನ್ಐಎ ತನಿಖೆಯಿಂದ ಬಹಿರಂಗವಾಗಿದೆ.

ಸ್ಫೋಟದಲ್ಲಿ 9ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಈ ಮೂವರು ಆರೋಪಿಗಳ ಮನೆಗಳು ಹಾಗೂ ಇತರ ಶಂಕಿತರ ಮನೆ ಹಾಗೂ ಅಂಗಡಿಗಳ ಮೇಲೆ ಎನ್ಐಎ ಕಾರ್ಯಾಚರಣೆ ನಡೆಸಿತ್ತು. ತಪಾಸಣೆಯ ವೇಳೆ ನಗದು ಸಹಿತ ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನಿಬ್ಬರ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಎನ್ಐಎ ತಿಳಿಸಿದೆ.

Tags:    

Similar News