ರಾಮನಗರ ಮರುನಾಮಕರಣ ವಿವಾದ: ಡಿಕೆ ಶಿವಕುಮಾರ್ ವಿರುದ್ಧ ಎಚ್‌ಡಿಕೆ, ನಿಖಿಲ್ ವಾಗ್ದಾಳಿ

ಈ ಪ್ರಸ್ತಾವನೆಯ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಹಿತಾಸಕ್ತಿ, ನಿರ್ದಿಷ್ಟವಾಗಿ ತಮ್ಮ ಭೂಮಿಯ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶವಿದೆ ಎಂದು ಇಬ್ಬರೂ ನಾಯಕರು ಆರೋಪಿಸಿದ್ದಾರೆ.;

Update: 2025-05-23 08:35 GMT

ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಎಂದು ಕಾಂಗ್ರೆಸ್ ಸರ್ಕಾರ ಮರುನಾಮಕರಣ ಮಾಡಿರುವುದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಪುತ್ರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.


ಈ ಪ್ರಸ್ತಾವನೆಯ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಹಿತಾಸಕ್ತಿ, ನಿರ್ದಿಷ್ಟವಾಗಿ ತಮ್ಮ ಭೂಮಿಯ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶವಿದೆ ಎಂದು ಇಬ್ಬರೂ ನಾಯಕರು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, "ಡಿ.ಕೆ. ಶಿವಕುಮಾರ್ ಅವರ ಜಮೀನುಗಳ ಬೆಲೆ ಏರಿಕೆಗಾಗಿಯೇ ಈ ಮರುನಾಮಕರಣ ತಂತ್ರ ಮಾಡಲಾಗಿದೆ. ಈ ಹಿಂದೆ ದೊಡ್ಡಬಳ್ಳಾಪುರ, ದೇವನಹಳ್ಳಿಯನ್ನು ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚಿಸಲಾಗಿತ್ತು. ಇದೀಗ ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವುದರಿಂದ ಅವರ ಹಿಡುವಳಿಗಳ ಮೌಲ್ಯ ಹೆಚ್ಚಾಗಬಹುದು," ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ 40 ವರ್ಷಗಳ ಹಿಂದಿನ ಜಮೀನು ಖರೀದಿಯ ವಿಷಯದ ವಿಚಾರಣೆಗೆ ಎಸ್‌ಐಟಿ ತನಿಖೆ ನಡೆಸುತ್ತಿರುವುದನ್ನು ಸ್ಮರಿಸಿದ ಅವರು, "ಶಾಂತಿನಗರದ ದಲಿತರ ಜಮೀನನ್ನು ಕಬಳಿಸಿದ್ದು ಯಾರು? ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ದಲಿತರಿಗೆ ನೀಡಿದ್ದ ಜಮೀನನ್ನು ಯಾರು ನುಂಗಿದ್ದಾರೆ?" ಎಂದು ಡಿ.ಕೆ. ಶಿವಕುಮಾರ್‌ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಅಲ್ಲದೇ. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ದಲಿತರ ಭೂಮಿ ಕಬಳಿಸಿದವರನ್ನು ಪಕ್ಕದಲ್ಲಿಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ರನ್ಯಾ ಪರಮೇಶ್ವರ್​ ಸಿಲುಕಿಸಿದ್ದು ಕಾಂಗ್ರೆಸ್ ಪ್ರಭಾವಿ ನಾಯಕ

ರನ್ಯಾ ರಾವ್​ ಅಕ್ರಮ ಚಿನ್ನ ಸಾಗಾಟ ಪ್ರಕರಣದ ಕುರಿತು ಮಾತನಾಡಿದ ಎಚ್​ ಡಿ ಕುಮಾರಸ್ವಾಮಿ, ಕಾಂಗ್ರೆಸ್‌ನ ಪ್ರಭಾವಿ ನಾಯಕರೊಬ್ಬರು ಸಚಿವ ಜಿ. ಪರಮೇಶ್ವರ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು. "ಚಿನ್ನ ಕಳ್ಳ ಸಾಗಾಟದ ಮಾಹಿತಿಯನ್ನು ಇದೇ ಪ್ರಭಾವಿ ನಾಯಕ ಜಾರಿ ನಿರ್ದೇಶನಾಲಯಕ್ಕೆ ನೀಡಿದ್ದಾರೆ. ಈ ವಿಷಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿಳಿದಿದೆ" ಎಂದು ಕುಮಾರಸ್ವಾಮಿ ಹೇಳಿದರು.

ನಿಖಿಲ್ ಕುಮಾರಸ್ವಾಮಿ ಅವರ ಆಕ್ಷೇಪ

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ಈ ರಾಮನಗರದ ಹೆಸರು ಬದಲಾಯಿಸುವ ಪ್ರಸ್ತಾವನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. "ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಕರೆಯುವುದು ಅಭಿವೃದ್ಧಿಯಲ್ಲ, ಕೇವಲ ನಾಮಫಲಕ ಬದಲಾವಣೆ ಅಷ್ಟೇ. ಇತಿಹಾಸ ಮತ್ತು ಸಾಂಸ್ಕೃತಿಕ ಬೇರುಗಳಿರುವ ಜಿಲ್ಲೆಯ ಹೆಸರನ್ನು ರಿಯಲ್ ಎಸ್ಟೇಟ್ ಬ್ರೋಷರ್‌ನಂತೆ ಬದಲಾಯಿಸಲಾಗುತ್ತಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಊರ ಹೆಸರು ಬದಲಾಯಿಸಿದರೆ ರಸ್ತೆ ಗುಂಡಿಗಳು ತುಂಬುವುದಿಲ್ಲ. ಕಳೆದ ಎರಡು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಮನಗರದಲ್ಲಿ ಒಂದೇ ಒಂದು ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ರಾಜಕೀಯ ಹೋರ್ಡಿಂಗ್‌ಗಳನ್ನೇ ಮೂಲಸೌಕರ್ಯವೆಂದು ಭಾವಿಸಿದಂತಿದೆ," ಎಂದು ವ್ಯಂಗ್ಯವಾಡಿದ ಅವರು, "ಡಿ.ಕೆ. ಶಿವಕುಮಾರ್ ತಮ್ಮ ಹೆಸರನ್ನು 'ಡಿಕೆ ಸಿಎಂ ಕುಮಾರ್' ಎಂದು ಬದಲಾಯಿಸಿಕೊಳ್ಳಬಹುದು, ಏಕೆಂದರೆ ನಾಯಕತ್ವವಿಲ್ಲದಿದ್ದಾಗ ಬ್ರ್ಯಾಂಡಿಂಗ್ ಒಂದೇ ಪ್ರಣಾಳಿಕೆಯಾಗುತ್ತದೆ," ಎಂದು ಕಿಡಿಕಾರಿದರು. 

Tags:    

Similar News