ಸಚಿವ ಸ್ಥಾನಕ್ಕೆ ರಾಜಣ್ಣ ರಾಜೀನಾಮೆಯಲ್ಲ, ಸಿದ್ದರಾಮಯ್ಯ ಸಂಪುಟದಿಂದ ವಜಾ
ಸಹಕಾರ ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ಅವರನ್ನು ವಜಾ ಮಾಡಲಾಗಿದೆ. ಈ ಬಗ್ಗೆ ರಾಜ್ಯಪಾಲ ಕಚೇರಿಯಿಂದ ಸರ್ಕಾರಕ್ಕೆ ರವಾನಿಸಿರುವ ಅಧಿಕೃತಪತ್ರದಲ್ಲಿ ಉಲ್ಲೇಖವಾಗಿದೆ.;
ಸಹಕಾರ ಸಚಿವ ಸ್ಥಾನದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾ ಮಾಡಲಾಗಿದೆ. ಈ ಬಗ್ಗೆ ರಾಜ್ಯಪಾಲ ಕಚೇರಿಯಿಂದ ಸರ್ಕಾರಕ್ಕೆ ರವಾನಿಸಿರುವ ಅಧಿಕೃತಪತ್ರದಲ್ಲಿ ಉಲ್ಲೇಖವಾಗಿದೆ. ಈ ಮೂಲಕ ಕೆ.ಎನ್.ರಾಜಣ್ಣ ರಾಜೀನಾಮೆ ವಿಚಾರಕ್ಕೆ ಹೊಸ ತಿರುವು ಪಡೆದುಕೊಂಡಂತಾಗಿದೆ.
ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿಯಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ಪತ್ರ ರವಾನೆಯಾಗಿದೆ. ಈ ಪತ್ರದಲ್ಲಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕುವ ಕುರಿತು ರಾಜ್ಯಪಾಲರು ಸಹಿ ಮಾಡಿದ ಮೂಲ ಅಧಿಸೂಚನೆಯನ್ನು ಇದರೊಂದಿಗೆ ಕಳುಹಿಸಲು ನಿರ್ದೇಶಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಕೆಎನ್ ರಾಜಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸೋಮವಾರ ಮಧ್ಯಾಹ್ನ ಸುಮಾರಿಗೆ ಮುಖ್ಯಮಂತ್ರಿಗಳ ಅಧಿಕಾರಿಗಳಿಗೆ ನೀಡಿದ್ದರು. ಆದರೆ, ಸಂಜೆಯಾಗುತ್ತಿದ್ದಂತೆ ಕೆಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಲಾಗಿದೆ ಎಂಬ ಪತ್ರವು ರಾಜ್ಯಪಾಲರ ಕಚೇರಿಯಿಂದ ಸರ್ಕಾರಕ್ಕೆ ರವಾನೆಯಾಗಿದೆ. ರಾಜಣ್ಣ ರಾಜೀನಾಮೆ ನೀಡುವ ಮುನ್ನವೇ ಸರ್ಕಾರದ ಮುಖ್ಯಸ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ವಜಾಕ್ಕೆ ನಿರ್ಧರಿಸಿ ರಾಜಭವನಕ್ಕೆ ಮಾಹಿತಿ ನೀಡಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ರಾಜಣ್ಣ ಸ್ವಯಂ ಪ್ರೇರಿತವಾಗಿ ರಾಜೀನಾಮೆಗೆ ಮುಂದಾಗಿದ್ದರು ಎಂದು ಹೇಳಲಾಗಿದೆ.
'ಮಹದೇವಪುರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂಬ ಆರೋಪ ಮಾಡುವಾಗ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿತ್ತು' ಎಂಬ ರಾಜಣ್ಣ ಹೇಳಿಕೆಯು, ಮತಗಳ್ಳತನದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು. ಇದು ಪತ್ರಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದ್ದರಿಂದ, ಹಾನಿಯನ್ನು ನಿಯಂತ್ರಿಸಲು ಕಾಂಗ್ರೆಸ್ ಹೈಕಮಾಂಡ್, ರಾಜಣ್ಣ ಅವರನ್ನು ಸರ್ಕಾರದಿಂದ ತೆಗೆದುಹಾಕುವ ಕಠಿಣ ತೀರ್ಮಾನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಜಾಗೊಳಿಸುವ ತೀರ್ಮಾನ ಕೈಗೊಂಡರು ಎನ್ನಲಾಗಿದೆ.