ಹಾಸನ ಉಸ್ತುವಾರಿ ಸ್ಥಾನಕ್ಕೆ ರಾಜಣ್ಣ ಗುಡ್ಬೈ, ಕೃಷ್ಣಬೈರೇಗೌಡರಿಗೆ ಆ.15ರ ಧ್ವಜಾರೋಹಣ ಹೊಣೆ
"ನಾನೇಕೆ ಉಸ್ತುವಾರಿ ಸಚಿವನಾಗಿರಬೇಕು?" ಎಂದು ಪ್ರಶ್ನಿಸಿ, ಅವರು ತಮ್ಮ ಸ್ಥಾನದಿಂದ ದೂರ ಉಳಿಯುವ ಮುನ್ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ನ ಉನ್ನತ ಮೂಲಗಳು ತಿಳಿಸಿವೆ.;
ಕೆ. ಎನ್ ರಾಜಣ್ಣ
ರಾಜ್ಯ ಕಾಂಗ್ರೆಸ್ ಸರ್ಕಾರದೊಳಗೆ ಅಸಮಾಧಾನದ ಹೊಗೆಯಾಡುತ್ತಿದ್ದು, ಇದೀಗ ಹಾಸನ ಜಿಲ್ಲೆಯಲ್ಲಿನ ಉಸ್ತುವಾರಿ ವಿಚಾರದಲ್ಲೂ ಭಿನ್ನಮತ ಸ್ಫೋಟಗೊಂಡಿದೆ. ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
"ನಾನೇಕೆ ಉಸ್ತುವಾರಿ ಸಚಿವನಾಗಿರಬೇಕು?" ಎಂದು ಪ್ರಶ್ನಿಸಿ, ಅವರು ತಮ್ಮ ಸ್ಥಾನದಿಂದ ದೂರ ಉಳಿಯುವ ಮುನ್ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ನ ಉನ್ನತ ಮೂಲಗಳು ತಿಳಿಸಿವೆ.
ಈ ನಾಟಕೀಯ ಬೆಳವಣಿಗೆಯ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಹಾಸನದಲ್ಲಿ ಧ್ವಜಾರೋಹಣ ನೆರವೇರಿಸುವ ಜವಾಬ್ದಾರಿಯನ್ನು ಕಂದಾಯ ಸಚಿವ ಕೃಷ್ಣಾಭೈರೇಗೌಡ ಅವರಿಗೆ ವಹಿಸಿ ಆದೇಶ ಹೊರಡಿಸಿದ್ದಾರೆ. ಸಾಮಾನ್ಯವಾಗಿ, ಜಿಲ್ಲಾ ಉಸ್ತುವಾರಿ ಸಚಿವರೇ ಈ ಗೌರವವನ್ನು ನಿರ್ವಹಿಸುವುದು ವಾಡಿಕೆ. ಆದರೆ, ರಾಜಣ್ಣ ಅವರ ಬದಲಿಗೆ ಕೃಷ್ಣಭೈರೇಗೌಡರನ್ನು ನೇಮಿಸಿರುವುದು, ರಾಜಣ್ಣ ಮತ್ತು ಮುಖ್ಯಮಂತ್ರಿಗಳ ನಡುವಿನ ಮುನಿಸು ನಿಜ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ರಾಜಣ್ಣ ಕೋಪಕ್ಕೆ ಕಾರಣವೇನು?
ಪಕ್ಷದ ಆಂತರಿಕ ವಲಯದ ಪ್ರಕಾರ, ಹುಡಾ ಅಧ್ಯಕ್ಷರ ನೇಮಕಾತಿಯನ್ನು ತಮ್ಮ ಗಮನಕ್ಕೆ ತಾರದೆ ಏಕಪಕ್ಷೀಯವಾಗಿ ನಿರ್ಧರಿಸಿದ್ದೇ ರಾಜಣ್ಣ ಅವರ ಕೋಪಕ್ಕೆ ಕಾರಣ. "ಜಿಲ್ಲೆಯ ಪ್ರಮುಖ ನೇಮಕಾತಿಗಳಲ್ಲಿ ಉಸ್ತುವಾರಿ ಸಚಿವರಾಗಿ ನನ್ನ ಅಭಿಪ್ರಾಯಕ್ಕೆ ಬೆಲೆ ಇಲ್ಲದಿದ್ದರೆ, ಆ ಸ್ಥಾನದಲ್ಲಿ ಮುಂದುವರಿದು ಏನು ಪ್ರಯೋಜನ?" ಎಂದು ಅವರು ತಮ್ಮ ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.