ಖರ್ಗೆಯವರಿಗೆ ಗೊತ್ತೇ? ತೊಗರಿ ನಾಡಿನಲ್ಲಿ ಮಳೆಗೆ 1.06 ಲಕ್ಷ ಹೆಕ್ಟೇರ್ ಬೆಳೆ ಹಾನಿ!
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರೈತರೊಬ್ಬರಿಗೆ ಗದರಿದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಲಬುರಗಿ ರೈತರ ಪರಿಸ್ಥಿತಿ ಕುರಿತು ಚರ್ಚೆಗೆ ಕಾರಣವಾಗಿದೆ. ಬಿಜೆಪಿಗಿದು ಪ್ರಬಲ ಟೀಕಾಸ್ತ್ರವಾಗಿದೆ.;
ಕಲ್ಯಾಣ ಕರ್ನಾಟಕದ ಹೃದಯ ಭಾಗ ಕಲಬುರಗಿ ಜಿಲ್ಲೆಯನ್ನು ತೊಗರಿ ಕಣಜ ಎಂದು ಕರೆಯಲಾಗುತ್ತದೆ. ತೊಗರಿ ಕಣಜದ ನಾಡಿನಲ್ಲಿ ತೊಗರಿ ಬೆಲೆ ಕುಸಿತಗೊಂಡಿದ್ದು, ರೈತರು ಕಂಗಲಾಗಿದ್ದಾರೆ. ಅದರಲ್ಲಿಯೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರೈತರೊಬ್ಬರಿಗೆ ಗದರಿದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಲಬುರಗಿ ರೈತರ ಪರಿಸ್ಥಿತಿ ಕುರಿತು ಚರ್ಚೆಗೆ ಕಾರಣವಾಗಿದೆ. ಬಿಜೆಪಿಗೆ ಇದು ಪ್ರಬಲ ಟೀಕಾಸ್ತ್ರವಾಗಿದೆ.
ಮುಂಗಾರಿನ ಅತಿವೃಷ್ಟಿಯಿಂದಾಗಿ ತೊಗರಿ ಮಾತ್ರವಲ್ಲದೇ, ಹೆಸರುಬೇಳೆ, ಉದ್ದು ಸೇರಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ಜಿಲ್ಲೆಯಲ್ಲಿ 1.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ನಷ್ಟವಾಗಿದ್ದು, 90 ಕೋಟಿ ರೂ.ಗಿಂತ ಹೆಚ್ಚು ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಗೊತ್ತಾಗಿದೆ.
ವಾಡಿಕೆಯಂತೆ ಕಲಬುರಗಿ ಜಿಲ್ಲೆಯಲ್ಲಿ 156 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, 263 ಮಿ.ಮೀ ಮಳೆ ಸುರಿದಿದ್ದು, ಶೇ 69ರಷ್ಟು ಹೆಚ್ಚು ಮಳೆಯಾಗಿತ್ತು. ಅದರಲ್ಲಿಯೂ ಆಗಸ್ಟ್ ತಿಂಗಳ ಕೊನೆಯ ಎರಡು ವಾರದಲ್ಲಿ ಸುರಿದ 108 ಮಿ.ಮೀ ಮಳೆಯು ರೈತರ ಬೆಳೆಗಳನ್ನು ನೀರುಪಾಲಾಗುವಂತೆ ಮಾಡಿದೆ. ತೊಗರಿ, ಹೆಸರು, ಹತ್ತಿ, ಉದ್ದು ಬೆಳೆಗಳು ಅಪಾರ ಹಾನಿಗೀಡಾಗಿವೆ ಎಂಬುದು ಇಲಾಖೆಯ ಸಮೀಕ್ಷೆಯು ತಿಳಿಸಿದೆ.
ಪ್ರಸಕ್ತ ಮುಂಗಾರಿನಲ್ಲಿ 51,850 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿತ್ತು. ಈ ಪೈಕಿ 25,471 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಹಾನಿಯಾಗಿದೆ. ಬಿತ್ತನೆಯಾಗಿದ್ದ 30,935 ಹೆಕ್ಟೇರ್‌ಗಳ ಪೈಕಿ 7,976 ಹೆಕ್ಟೇರ್ ಪ್ರದೇಶದಲ್ಲಿನ ಉದ್ದು ಬೆಳೆ ಹಾಳಾಗಿದೆ. ಇನ್ನು, ಜಿಲ್ಲೆಯ ರೈತರು 5,94,191 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತಿದ್ದು, ಆ ಪೈಕಿ ಧಾರಾಕಾರ ಮಳೆಗೆ 58,319 ಹೆಕ್ಟೇರ್‌ನಲ್ಲಿ ಬೆಳೆದಿದ್ದ ತೊಗರಿ ಬೆಳೆಗೆ ಹಾನಿಯಾಗಿದೆ.1,22,058 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದ ಪೈಕಿ 13,371 ಹೆಕ್ಟೇರ್ ಪ್ರದೇಶದ ಹತ್ತಿ ಬೆಳೆಯು ಹಾನಿಗೊಂಡಿದೆ. ಇದಲ್ಲದೇ, 715 ಹೆಕ್ಟೇರ್‌ನಷ್ಟು ಸೋಯಾಬಿನ್ ಬೆಳೆಯೂ ನಿರಂತರ ಮಳೆಗೆ ಸಿಲುಕಿ ನಲುಗಿರುವುದು ಗೊತ್ತಾಗಿದೆ.
ಆಳಂದದಲ್ಲಿ ಹೆಚ್ಚು ಹಾನಿ: ಜಿಲ್ಲೆಯಲ್ಲಿ 78 ಸಾವಿರ ದೂರು
ಕಲಬುರಗಿ ಜಿಲ್ಲೆಯ ಪೈಕಿ ಅತಿಹೆಚ್ಚು ಹಾನಿ ಆಳಂದ ತಾಲ್ಲೂಕಿನಲ್ಲಿ ಸಂಭವಿಸಿದ್ದು, 15,521 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ವಿವಿಧ ಬೆಳೆಗಳು ಮಳೆಗೆ ಆಹುತಿಯಾಗಿವೆ. ಅಫಜಲಪುರದಲ್ಲಿ 13,850 ಹೆಕ್ಟೇರ್‌ಗಳಷ್ಟು ಪ್ರದೇಶಗಳಲ್ಲಿ ಬೆಳೆ ಹಾಳಾಗಿದೆ. ಹೆಸರು, ಉದ್ದು ರಾಶಿ ಪ್ರಗತಿಯಲ್ಲಿದೆ. ಸೋಯಾಬಿನ್ ಕಾಯಿಕಟ್ಟುವ ಹಂತದಲ್ಲಿದೆ. ತೊಗರಿ ಬೆಳವಣಿಗೆಯ ಹಂತದಲ್ಲಿದೆ. ಬೆಳೆ ಹಾನಿಗೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ 78 ಸಾವಿರ ದೂರು ಸ್ವೀಕರಿಸಲಾಗಿದ್ದು, 25 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗಿದೆ. ಪ್ರಾದೇಶಿಕ ಪ್ರಾಕೃತಿಕ ವಿಕೋಪ ಹಾಗೂ ಕೋಲ್ಲೋತ್ತರ ಹಾನಿಯಡಿ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಕೆ ಮಾಡಿದೆ ಎಂದು ಮೂಲಗಳು ಹೇಳಿವೆ.
ಕ್ವಿಂಟಾಲ್ ತೊಗರಿಗೆ ಕನಿಷ್ಠ 5ಸಾವಿರ ರೂ. ಕುಸಿತ:
ತೊಗರಿ ಕಣಜ ಕಲಬುರಗಿಯಲ್ಲಿ ತೊಗರಿ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 5000ಸಾವಿರ ರೂ.ಗೆ ಕುಸಿದಿದ್ದು, ಇದು ಮೂರು ವರ್ಷದಲ್ಲೇ ಅತ್ಯಂತ ಕಡಿಮೆ ಬೆಲೆಯಾಗಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲೇ ಅತ್ಯಂತ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆಯಾಗಿದೆ. ವಾಣಿಜ್ಯ ಬೆಳೆಯಾಗಿರುವುದರಿಂದ ರೈತರು ಹೆಚ್ಚು ಖರ್ಚು ಮಾಡಿ ತೊಗರಿ ಬೆಳೆಯುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಸಿಗುತ್ತಿರುವ ಬೆಲೆ ಮಾತ್ರ ಅತ್ಯಂತ ಕಡಿಮೆ ಬೆಲೆಗೆ ಕುಸಿತ ಕಂಡಿದೆ. ಬೆಲೆ ಕಡಿಮೆಯಿದೆ ಎಂಬ ಕಾರಣಕ್ಕೆ ಕೇಂದ್ರ ಸರಕಾರ 7500 ರೂ. ಬೆಂಬಲ ಬೆಲೆ ಘೋಷಿಸಿತ್ತು. ಅದರಂತೆ ರಾಜ್ಯ ಸರಕಾರವೂ 450 ರೂ. ಪ್ರೋತ್ಸಾಹ ಧನವನ್ನೂ ನೀಡಿ ರೈತರ ನೆರವಿಗೆ ಬರಲಾಗಿತ್ತು. ಆದರೂ ರೈತರ ನಷ್ಟವನ್ನು ಸರಿದೂಗಿಸಲು ಕಷ್ಟಕರವಾಗಿದೆ.
ಮಳೆಯ ಜತೆಗೆ ಇತರೆ ಕಾರಣಗಳು ಸಹ ಬೆಲೆ ಇಳಿಕೆಗೆ ಕಾರಣ
ತೊಗರಿ ಬೆಲೆ ಇಳಿಕೆಗೆ ಅತಿವೃಷ್ಟಿ ಪ್ರಮುಖ ಕಾರಣವಾದರೆ, ಕಳೆದ ವರ್ಷ ತೊಗರಿ ಉತ್ತಮ ಉತ್ಪಾದನೆ ರಾಜ್ಯದಲ್ಲಾಗಿದೆ. ಕಲಬುರಗಿಯಲ್ಲೇ 40ಲಕ್ಷ ಕ್ವಿಂಟಾಲ್ ತೊಗರಿ ಬೆಳೆಯಲಾಗಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ವಿಜಯಪುರ, ಬಾಗಲಕೋಟೆಯಲ್ಲಿಯೂ ಸಹ ಈ ಬಾರಿ ಹತ್ತಿರ ಹತ್ತಿರ ಕಲಬುರಗಿಯಷ್ಟೇ ತೊಗರಿ ಉತ್ಪಾದನೆ ಮಾಡಲಾಗಿದೆ. ಮಾತ್ರವಲ್ಲ, ಖರೀದಿ ಕೇಂದ್ರಗಳಿಂದ ಅಂದಾಜು 20 ಲಕ್ಷ ಕ್ವಿಂಟಾಲ್ ತೊಗರಿ ಶೇಖರಣೆ ಮಾಡಲಾಗಿದೆ. ದಲ್ಲಾಳಿಗಳು ಸಹ ತೊಗರಿ ಖರೀದಿ ಮಾಡಿಟ್ಟುಕೊಂಡಿದ್ದಾರೆ. ಇದರ ಜತೆಗೆ ಮಯನ್ಮಾರ್, ಮೊಜಂಬಿಕಾ, ತಾಂಜೇನಿಯಾ, ಸುಡಾನ್ ದೇಶಗಳಿಂದಲೂ ತೊಗರಿ ಆಮದು ಮಾಡಿಕೊಂಡಿರುವ ಕಾರಣಕ್ಕಾಗಿ ರಾಜ್ಯದಲ್ಲಿ ತೊಗರಿ ಬೆಲೆ ಇಳಿಮುಖವಾಗಿದೆ. ಈ ಹಿಂದೆ 4 ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಂಡಿದ್ದರೆ, ಪ್ರಸ್ತುತ 8ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಈ ಎಲ್ಲಾ ಕಾರಣಗಳಿಂದಾಗಿ ತೊಗರಿ ಬೆಳೆ ಕುಸಿತ ಕಂಡಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
115 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿ:
ಈ ನಡುವೆ, ಜಿಲ್ಲೆಯಲ್ಲಿ ಜೂ.1ರಿಂದ ಆ.31ರ ಅವಧಿಯಲ್ಲಿ ಬರೋಬ್ಬರಿ 115.09 ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ತೋಟಗಾರಿಕೆ ಬೆಳೆಗಳಿಗೂ ಹಾನಿಯಾಗಿದೆ. ಈ ಪೈಕಿ ಪಪ್ಪಾಯ ಹಾಗೂ ಈರುಳ್ಳಿ ಬೆಳೆಯೇ ಹೆಚ್ಚಾಗಿದೆ. ಕಲಬುರಗಿ ತಾಲ್ಲೂಕಿನಲ್ಲಿ 43 ಹೆಕ್ಟೇರ್‌ನಷ್ಟು ಹಾಗೂ ಅಫಜಲಪುರ ತಾಲ್ಲೂಕಿನಲ್ಲಿ 32.15 ಹೆಕ್ಟೇರ್‌ನಷ್ಟು ಸೇರಿ ಎರಡೇ ತಾಲ್ಲೂಕುಗಳಲ್ಲಿ 75.15ರಷ್ಟು ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. 11 ಹೆಕ್ಟೇರ್‌ಗಳಷ್ಟು ಟೊಮೆಟೊ ಹಾಗೂ 6.30 ಹೆಕ್ಟೇರ್‌ಗಳಷ್ಟು ಮೆಣಸಿನಕಾಯಿ ಬೆಳೆಗೂ ಹಾನಿಯಾಗಿದೆ ಎಂದು ಹೇಳಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ಆರು ಹಡೆದವಳಿಗೆ ಮೂರು ಹಡೆದವಳು ಹೇಳಿದಂಗಾಯ್ತು. ಹೋಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಬಳಿ ತೊಗರಿ ಕೇಳು’ ಎಂದು ರೈತ ಯುವಕನ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರೇಗಿದ ಘಟನೆ ಭಾನುವಾರ ಕಲಬುರಗಿಯಲ್ಲಿ ನಡೆದಿದೆ.
ಇತ್ತೀಚೆಗೆ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ್ದರು. ಈ ಸಂದರ್ಭದಲ್ಲಿ ರೈತ ಯುವಕನೊಬ್ಬ ಹಾಳಾದ ತೊಗರಿ ಬೆಳೆಯನ್ನು ತೋರಿಸಿ, ‘ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ತೊಗರಿ ಹಾಳಾಗಿದೆ ಸರ್’ ಎಂದಿದ್ದಾನೆ. ಆ ಸಂದರ್ಭದಲ್ಲಿ, ಎಷ್ಟು ಪ್ರದೇಶದಲ್ಲಿ ಬೆಳೆದ ತೊಗರಿ ಹಾಳಾಗಿದ ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಆತ ನಾಲ್ಕು ಎಕರೆ ಎಂದಿದ್ದಾನೆ. ಅಷ್ಟಕ್ಕೆ ರೇಗಿದ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ‘ನನಗೂ ಗೊತ್ತು. ಇದು ಆರು ಹಡೆದವಳ ಮುಂದೆ 3 ಹಡೆದವಳು ಹೇಳಿದಂಗಾಯ್ತು. ನಿನ್ನದು ನಾಲ್ಕು ಎಕರೆ ಹಾಳಾಗಿದ್ದರೆ ನನ್ನದು ನಲವತ್ತು ಎಕರೆಯ ಬೆಳೆ ಹಾಳಾಗಿದೆ. ತೊಗರಿ ಮಾತ್ರವಲ್ಲ, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ ಬೆಳೆಗಳೂ ಸಹ ಹಾಳಾಗಿವೆ. ಬರೀ ಪ್ರಚಾರಕ್ಕಾಗಿ ಈ ರೀತಿ ಹೇಳಿಕೊಂಡು ಬರಬೇಡ. ಹೋಗಿ ಮೋದಿ, ಅಮಿತ್ ಶಾ ಬಳಿ ತೊಗರಿ ಕೇಳು’ ಎಂದಿದ್ದಾರೆ.
ಹೇಳಿಕೆಗೆ ವ್ಯಾಪಕ ಖಂಡನೆ:
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಇದನ್ನು ಟೀಕಾಸ್ತ್ರವಾಗಿ ಬಳಸಿಕೊಂಡಿದೆ. ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸಹ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಖಂಡಿಸಿದ್ದರು. ಬೆಳೆ ಹಾನಿಯಿಂದ ಕಂಗೆಟ್ಟು ಹೋದ ಯುವ ರೈತನೊಬ್ಬ ತಮ್ಮ ಬಳಿ ನೋವು ತೋಡಿಕೊಳ್ಳಲು ಬಂದಾಗ ತೊಗರಿ ಬೇಳೆ ಹಾನಿಯಾಗಿದ್ದನ್ನು ನನ್ನಬಳಿ ತೋರಿಸಲು ಬಂದಿದ್ದೀಯಾ?’ ಎಂದು ಏರು ಧ್ವನಿಯಲ್ಲಿ ಗದರಿಸಿರುವುದು ಸಮಂಜಸವಲ್ಲ. ಬೇಜವಾಬ್ದಾರಿ ಮಾತುಗಳನ್ನಾಡಿದ್ದಾರೆ. ಅಲ್ಲದೇ, ಯುವ ರೈತನನ್ನು ಅಪಮಾನಿಸಿದ್ದು, ರೈತರ ಬಗ್ಗೆ ಇರುವ ಅಸಹನೆ ಹಾಗೂ ಉಡಾಫೆ ಧೋರಣೆಯನ್ನು ಪ್ರತಿಬಿಂಬಿಸಿದೆ ಎಂದು ಟೀಕೆಗಳು ವ್ಯಕ್ತವಾಗಿವೆ.
ಅಭಿಪ್ರಾಯಗಳು:
ಕಲಬುರಗಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಿರಂತರ ಮಳೆಯು ಕರ್ನಾಟಕದ 'ತೂರು ಬಟ್ಟಲು' ಎಂದು ಕರೆಯಲ್ಪಡುವ ಪ್ರದೇಶದಲ್ಲಿ ವ್ಯಾಪಕ ಬೆಳೆ ನಾಶಕ್ಕೆ ಕಾರಣವಾಯಿತು. ಹೆಚ್ಚಿನ ತೇವಾಂಶದಿಂದಾಗಿ ಕಡ್ಲೆಬೇಳೆ, ಹೆಸರುಬೇಳೆ ಮತ್ತು ಉದ್ದು ಬೆಳೆಗಳ ಹೊಲಗಳು ಹಾನಿಗೊಳಗಾಗಿವೆ ಎಂದು ಜಿಕೆವಿಕೆಯಲ್ಲಿನ ಎನ್‌ಲೈಟ್ ಅಗ್ರೋಟೆಕ್ ಇಂಡಿಯಾ ಸಂಸ್ಥೆಯ ಸಸ್ಯ ಶರೀರಶಾಸ್ತ್ರಜ್ಞ ಡಾ. ಪ್ರವೀಣ್ ಎಚ್.ಜಿ. ತಿಳಿಸಿದ್ದಾರೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಅವರು, ಸಸ್ಯಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ ಅಥವಾ ಬೀಜಗಳ ಒಳಗೆ ಮೊಳಕೆಯೊಡೆಯುತ್ತವೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಸಾಲ ಮತ್ತು ಸಾಲದ ಮೂಲಕ ಹೆಚ್ಚಿನ ಹೂಡಿಕೆ ಮಾಡಿದ ರೈತರು ದೀರ್ಘಕಾಲದ ಮಳೆಯಿಂದ ತಮ್ಮ ಹೊಲಗಳು ಕುಸಿಯುವುದನ್ನು ಗಮನಿಸುತ್ತಾರೆ. ಕೃಷಿ ಇಲಾಖೆ ಇನ್ನೂ ನಷ್ಟವನ್ನು ಅಳೆಯಲಿಲ್ಲ. ಆದರೆ ಆರಂಭಿಕ ಅವಲೋಕನಗಳು ದೊಡ್ಡ ಪ್ರಮಾಣದ ವಿನಾಶವನ್ನು ಸೂಚಿಸುತ್ತವೆ. ಅದೇ ಸಮಯದಲ್ಲಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಪಡೆಯಲು ಪ್ರಯತ್ನಿಸುತ್ತಿರುವ ರೈತರು ಸಹಾಯವಾಣಿಗಳು ಸ್ಥಗಿತಗೊಂಡಿರುವುದರಿಂದ ತಮ್ಮ ದೂರುಗಳನ್ನು ನೋಂದಾಯಿಸಲು ಹೆಣಗಾಡುತ್ತಿದ್ದಾರೆ. ಇದರಿಂದಾಗಿ ಅನೇಕರು ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಲ್ಲಿ ಭೌತಿಕ ವರದಿಯನ್ನು ಅವಲಂಬಿಸಬೇಕಾಯಿತು. ಒಟ್ಟಾಗಿ, ಮಾರುಕಟ್ಟೆ ವೈಫಲ್ಯಗಳು ಮತ್ತು ನೈಸರ್ಗಿಕ ವಿಕೋಪಗಳು ಈ ಪ್ರದೇಶದ ಬೆಳೆಗಾರರ ಸಂಕಷ್ಟವನ್ನು ಹೆಚ್ಚಿಸಿವೆ ಎಂದು ಹೇಳಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಿಲ್ಲೆಯವರೇ ಆಗಿದ್ದು, ರೈತರ ಪರಿಸ್ಥಿತಿ ಕುರಿತು ಅರಿವಿದೆ. ಆದರೆ ಆ ರೀತಿ ಮಾತನಾಡಬಾರದಿತ್ತು. ಅತಿವೃಷ್ಠಿಯಿಂದಾಗಿ ತೊಗರಿ ನಾಶವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ರೈತರ ಕಣ್ಣೀರು ವರಿಸಬೇಕೇ ಹೊರತು ಕಣ್ಣೀರು ಸುರಿಸುವಂತ ಎಮಾತನಾಡಬಾರದು. ಜಿಲ್ಲೆಯಲ್ಲಿ ಸಾಕಾಷ್ಟು ಬೆಳೆ ಹಾನಿಯಾಗಿದೆ. ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹೇಳಿದರು.