ಪರಿಶಿಷ್ಟರ ಅನುದಾನ ಗ್ಯಾರಂಟಿಗೆ ಬಳಕೆ; ಸರ್ಕಾರದ ವಿರುದ್ಧ ಆರ್‌. ಅಶೋಕ್‌ ವಾಗ್ದಾಳಿ

ಬಜೆಟ್ ನಲ್ಲಿ ಅವಾಸ್ತವಿಕ ಘೋಷಣೆಗಳನ್ನು ಮಾಡಿ, ಪರಿಶಿಷ್ಟರ ಮೂಗಿಗೆ ತುಪ್ಪ ಸವರಿ, ಬಿಟ್ಟಿ ಪ್ರಚಾರ ಪಡೆದುಕೊಂಡರೆ ಪರಿಶಿಷ್ಟ ಸಮುದಾಯಗಳ ಕಲ್ಯಾಣ ಆಗುತ್ತದೆಯೇ ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ.;

Update: 2025-07-28 06:26 GMT

ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಹಾಗೂ ಸಿಎಂ ಸಿದ್ದರಾಮಯ್ಯ

ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಬಜೆಟ್‌ನಲ್ಲಿ ಮೀಸಲಿರಿಸಿದ್ದ 42,017.51 ಕೋಟಿ ರೂ. ಅನುದಾನದಲ್ಲಿ 11,896.84 ಕೋಟಿ ರೂ. ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ಮುಂದಾಗಿದ್ದು ಪರಿಶಿಷ್ಟ ಸಮುದಾಯಗಳಿಗೆ ದ್ರೋಹ ಬಗೆಯಲು ಹೊರಟಿದೆ ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

"ಸಿಎಂ ಸಿದ್ದರಾಮಯ್ಯನವರೇ, ಅನುದಾನ ಹಂಚಿಕೆ ಮಾಡಲು ಹಣವಿಲ್ಲದ ಮೇಲೆ ಕಾಟಾಚಾರಕ್ಕೆ ಬಜೆಟ್‌ನಲ್ಲಿ ಘೋಷಣೆ ಮಾಡುವುದಾದರೂ ಏಕೆ? ಬಜೆಟ್ ನಲ್ಲಿ ಅವಾಸ್ತವಿಕ ಘೋಷಣೆಗಳನ್ನು ಮಾಡಿ, ಪರಿಶಿಷ್ಟರ ಮೂಗಿಗೆ ತುಪ್ಪ ಸವರಿ, ಬಿಟ್ಟಿ ಪ್ರಚಾರ ಪಡೆದುಕೊಂಡರೆ ಪರಿಶಿಷ್ಟ ಸಮುದಾಯಗಳ ಕಲ್ಯಾಣ ಆಗುತ್ತದೆಯೇ? ಇದೇನಾ ತಮಗೆ ಪರಿಶಿಷ್ಟ ಸಮುದಾಯಗಳ ಬಗ್ಗೆ ಇರುವ ಬದ್ಧತೆ ಇದೇನಾ ತಮ್ಮ ಸಾಮಾಜಿಕ ನ್ಯಾಯ" ಎಂದು ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಪ್ರಶ್ನಿಸಿದ್ದಾರೆ.

ಅಹಿಂದ ಹೆಸರಲ್ಲಿ ರಾಜಕೀಯ ಮಾಡಬೇಡಿ

ಬಿಡುಗಡೆ ಮಾಡಿರುವ ಅಲ್ಪ ಸ್ವಲ್ಪ ಅನುದಾನವನ್ನೂ ಭ್ರಷ್ಟಾಚಾರದ ಮೂಲಕ ಲೂಟಿ ಮಾಡಲಾಗುತ್ತಿದೆ. ಮತ್ತೊಂದೆಡೆ ಘೋಷಣೆ ಮಾಡಿದ ಅನುದಾನವನ್ನು ಹಂಚಿಕೆ ಮಾಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ಮುಂದಿನ ದಿನಗಳಲ್ಲಿ ಅಹಿಂದ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ತಿಳಿಸಿದ್ದಾರೆ.

ಕನ್ನಡಿಗರ ಕೈಗೆ ಚೊಂಬು

ಕಳೆದ ಎರಡು ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಯಾವುದೇ ಅನುದಾನ ಬಿಡುಗಡೆ ಮಾಡದೆ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಚುನಾವಣೆಗೂ ಮುನ್ನ ಒಬ್ಬರಿಗೆ 10 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ನಂತರ ಅಕ್ಕಿಯೂ ವಿತರಿಸದೆ, ಹಣವೂ ನೀಡದೆ ಕನ್ನಡಿಗರ ಕೈಗೆ ಚೊಂಬು ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಸರ್ಕಾರ ಸಂಪೂರ್ಣ ದಿವಾಳಿ

ಪಡಿತರ ಅಕ್ಕಿ ಸಾಗಿಸುವ ಲಾರಿ ಮಾಲೀಕರ ಬಿಲ್ ಪಾವತಿ ಮಾಡಲು, ಸಮಯಕ್ಕೆ ಸರಿಯಾಗಿ ಹಣ ನೀಡಿ ಎಫ್‌ಸಿಐಯಿಂದ ಅಕ್ಕಿ ಖರೀದಿ ಮಾಡಲು ಸರ್ಕಾರದ ಬಳಿ ಹಣವಿಲ್ಲ. ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಕಮಿಷನ್ ಕೊಡಲೂ ಸಾಧ್ಯವಾಗುತ್ತಿಲ್ಲ. ಸಂಪೂರ್ಣವಾಗಿ ದಿವಾಳಿಯಾಗಿರುವ ಕಾಂಗ್ರೆಸ್‌ ಸರ್ಕಾರದಲ್ಲಿ ಯಾವುದಕ್ಕೂ ಹಣವಿಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ.

Tags:    

Similar News