ಬೆಂಗಳೂರಿನ ಯುವತಿ ಕತ್ತು ಸೀಳಿದ ಸ್ಥಿತಿಯಲ್ಲಿ ಶವ ಪತ್ತೆ: ಕೊಲೆ ಶಂಕೆ
ಬೆಂಗಳೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದಾಳೆ.;
ಬೆಂಗಳೂರು: ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಮನೆಯ ಬಾತ್‌ರೂಂನಲ್ಲಿ ಕುತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ಯುವತಿ ಪ್ರಭುಧ್ಯಾ(21) ಖಾಸಗಿ ಕಾಲೇಜಿನಲ್ಲಿ ದ್ವೀತಿಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಆದರೆ, ನಿನ್ನೆ ಸಂಜೆ ಏಕಾಏಕಿ ಮನೆಯ ಬಾತ್ ರೂಂ ನಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದಾಳೆ.
ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ(ಏ.15) ಸಂಜೆ ಘಟನೆ ನಡೆದಿದ್ದು, ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಪ್ರಭುಧ್ಯಾಳ ಸಾವು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ, ಕೊಲೆಯೋ? ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಗಳನ್ನು ಹತ್ಯೆ ಮಾಡಿದ್ದಾರೆ ಎಂದ ತಾಯಿ
ಮೃತ ಯುವತಿ ಪ್ರಭುಧ್ಯಾ ಅವರ ತಾಯಿ ಸೌಮ್ಯಾ ತಮ್ಮ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಮಗಳನ್ನು ಯಾರೋ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಆಫೀಸ್‌ನಲ್ಲಿದ್ದ ನನಗೆ ಮಧ್ಯಾಹ್ನ ಫೋನ್ ಮಾಡಿದ್ದಳು. ಫ್ರೆಂಡ್ಸ್ ಜತೆಗೆ ಇದ್ದೀನಿ, ಪಾನಿಪುರಿ ತಿಂದು ಮನೆಗೆ ಹೋಗುತ್ತೇನೆ ಎಂದಿದ್ದಳು. ನಂತರ ನಾನು ಆಫೀಸ್ ಮುಗಿಸಿ ಮನೆಗೆ ಬಂದು ನೋಡಿದಾಗ ಮಗಳು ಬಾತ್ ರೂಮಿನಲ್ಲಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಘಟನೆ ಕುರಿತು ಮಾಹಿತಿ ನೀಡಿದ್ದಾರೆ.
"ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ. ವ್ಯವಸ್ಥೆಯೇ ನನ್ನ ಮಗಳ ಸಾವಿಗೆ ಕಾರಣವಾಗಿರಬೇಕು. ಪ್ರತಿದಿನ ಕಾಲೇಜಿನಿಂದ ಮನೆಗೆ ಬಂದ ಕೂಡಲೇ ಸೇಫ್ ಆಗಿ ತಲುಪಿದ್ದಕ್ಕೆ ಮೇಸೆಜ್ ಮಾಡುತ್ತಿದ್ದಳು. ಎಜುಕೇಷನ್ ಸಿಸ್ಟಮ್ ಪ್ರಶ್ನೆ ಮಾಡ್ತಿದ್ದಳು. ಮನೆಯ ಹಿಂಬದಿ ಡೋರ್ ಓಪನ್ ಆಗಿದೆ, ನನ್ನ ಮಗಳ ಮೊಬೈಲ್ ಕಳೆದು ಹೋಗಿದೆ. ನನ್ನ ಮಗಳನ್ನು ಕ್ರೂರವಾಗಿ ಕೊಲೆ ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.
ಯುವತಿಯ ಡೆತ್ ನೋಟ್ ಪತ್ತೆ
ಈ ನಡುವೆ, ಯುವತಿಯ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆಯಲಾಗಿದೆ. ಆದರೆ, ಯುವತಿಯ ತಾಯಿ ಆ ಡೆತ್ ನೋಟ್ ಬರಹ ತನ್ನ ಮಗಳದ್ದಲ್ಲ ಎಂದು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಪೊಲೀಸರು ಆ ಪತ್ರವನ್ನು ಎಫ್‌ಎಸ್‌ಎಲ್ ಗೆ ಕಳಿಸಿದ್ದು, ಶವ ಪರೀಕ್ಷೆಯ ವರದಿ ಮತ್ತು ಈ ಡೆತ್ ನೋಟ್ ಕುರಿತು ವರದಿ ಬಂದ ಬಳಿಕವಷ್ಟೇ ಯುವತಿಯ ಸಾವು ಕೊಲೆಯೋ? ಅಥವಾ ಆತ್ಮಹತ್ಯೆಯೋ? ಎಂಬುದು ಖಚಿತವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.