ರಾಜ್ಯಪಾಲರ ವಿರುದ್ಧ ರಾಜ್ಯದ ನಾನಾಭಾಗಗಳಲ್ಲಿ ಪ್ರತಿಭಟನೆ: ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಲೀಂ ಅಹ್ಮದ್

Update: 2024-08-19 09:35 GMT

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ವಿಚಾರ, ಕಾಂಗ್ರೆಸ್ ಪಡೆ ಕೆಂಡವಾಗುವಂತೆ ಮಾಡಿದೆ. ಈ ವಿಚಾರವಾಗಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು ಸೇರಿದಂತೆ ರಾಜ್ಯದ ನಾನಾಭಾಗಗಳಲ್ಲಿ ʻಷಡ್ಯಂತ್ರಕ್ಕೆ ಸವಾಲುʼ ಎಂದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ರಾಜ್ಯಪಾಲರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದು, ʻʻಒಬ್ಬ ಅಯೋಗ್ಯ, ಬೇಜವಾಬ್ದಾರಿ ಗವರ್ನರ್​. ಯಾವುದೇ ದಾಖಲೆ ಇಲ್ಲದೇ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ. ನಾವು ಸುಮ್ಮನೆ ಕೂರಲ್ಲ, ಹೋರಾಟ ಮಾಡುತ್ತೇವೆʼʼ ಎಂದು ಕಿಡಿಕಾರಿದ್ದಾರೆ.

ಮತ್ತೊಂದೆಡೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಆಕ್ರೋಶ ಹೊರ ಹಾಕಿದ್ದಾರೆ. ʻʻಬಿಜೆಪಿ ಏಜೆಂಟ್ ಆಗಿ ಗವರ್ನರ್ ಕೆಲಸ ಮಾಡುತ್ತಿದ್ದಾರೆ. ಅವರು ಗವರ್ನರ್ ಅಲ್ಲ, ಇವರು ನಾಲಾಯಕ್ ಗವರ್ನರ್, ಬಿಜೆಪಿ ಏಜೆಂಟ್. ನಾಲಾಯಕ್ ಗವರ್ನರ್‌​ಗೆ ಧಿಕ್ಕಾರ. ಇವರು ಇಲ್ಲಿ ರಾಜ್ಯಪಾಲ ಆಗುವುದಕ್ಕೆ ಯೋಗ್ಯರಲ್ಲ. ತೊಲಗಿ ತೊಲಗಿ ರಾಜ್ಯಪಾಲರೇ ತೊಲಗಿ. ರಾಜ್ಯಪಾಲರಿಗೆ ಮಾನ ಮರ್ಯಾದೆ ನಾಚಿಕೆ ಇದೆಯಾ? ಸಂವಿಧಾನದ ಬಗ್ಗೆ ಗೌರವ ಇದೆಯಾ?ʼʼ ಎಂದು ಕೆಂಡಕಾರಿದ್ದಾರೆ.

ಮೈಸೂರಿನಲ್ಲಿ ಬೃಹತ್‌ ಪ್ರತಿಭಟನೆ

ಮೈಸೂರಿನಲ್ಲಿ ಆಯೋಜಿಸಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ತನ್ವಿರ್ ಸೇಠ್ ಕೂಡ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʻʻಸಿದ್ದರಾಮಯ್ಯ ಯಾವುದೇ ವಿಚಾರದಲ್ಲಿ ಯಾರಿಗೂ ಶಿಫಾರಸ್ಸು ಮಾಡಿಲ್ಲ. ನಿವೇಶನ ಹಂಚಿಕೆ ಮಾಡುವ ವೇಳೆ ಸಿದ್ದರಾಮಯ್ಯರ ಯಾವುದೇ ಪಾತ್ರವಿಲ್ಲ. ಬಿಜೆಪಿ, ಜೆಡಿಎಸ್ ನಾಯಕರು ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯರನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ರಾಜ್ಯಪಾಲರ ಕ್ರಮ ಸಂವಿಧಾನ ವಿರೋಧಿಯಾಗಿದೆ. ರಾಜ್ಯಪಾಲರ ಕ್ರಮವನ್ನ ಪ್ರಶ್ನಿಸಿ ಹೈ ಕೋರ್ಟ್ ಮುಂದೆ ಹೋಗಬೇಕಿದೆ. ಸಚಿವರು, ಶಾಸಕರು, ಪರಿಷತ್ ಸದಸ್ಯರು ಸಿದ್ದರಾಮಯ್ಯ ಬೆನ್ನ ಹಿಂದೆ ಇದ್ದಾರೆ. ನೀಚ ರಾಜಕಾರಣ ಮಾಡುತ್ತಿರುವ ಜೆಡಿಎಸ್, ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ. ಸಿದ್ದರಾಮಯ್ಯನವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆʼʼ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಈ ಪ್ರತಿಭಟನೆ ವೇಳೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ʻʻದೇಶದಲ್ಲಿ ಬಿಜೆಪಿ ಜೊತೆಗೆ ಇಲ್ಲದೇ ಇರುವ ಸರ್ಕಾರಗಳನ್ನು ಕಿತ್ತುಹಾಕುವ ಪ್ರಯತ್ನ ನಡೆದಿದೆʼʼ ಎಂದು ಆರೋಪಿಸಿದರು.

ʻʻಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಎಂದೂ ಸ್ವಂತ ಬಲದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಅಪರೇಷನ್‌ ಕಮಲದ ಮೂಲಕ ಎರಡು ಬಾರಿ ಅಧಿಕಾರ ಹಿಡಿದಿದ್ದಾರೆ. ಅವರಿಗೆ ಸಂವಿಧಾನದ ಮೇಲೆ ನಂಬಿಕೆಯೇ ಇಲ್ಲ. ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಬಳಸಿಕೊಂಡು ರಾಜಕೀಯ ಪಿತೂರಿ ಮೂಲಕ ಕರ್ನಾಟಕದಲ್ಲಿನ ಚುನಾಯಿತ ಸರ್ಕಾರವನ್ನು ವಜಾಗೊಳಿಸುವ ಹುನ್ನಾರ ನಡೆಸಿದೆ. ರಾಜಭವನವನ್ನು ರಾಜಕೀಯದ ಅಂಗಳವನ್ನಾಗಿ ಮಾಡಲಾಗಿದೆʼʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ʻʻಸಂವಿಧಾನದ ರಕ್ಷಣೆ ಹೊತ್ತ ರಾಜ್ಯಪಾಲರು ರಾಜಕೀಯ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ' ಎಂದು ದೂರಿದರು.

ಶಿವಮೊಗ್ಗದಲ್ಲೂ ಕೈ ಕಾರ್ಯಕರ್ತರ ಪ್ರತಿಭಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ ತೊಲಗಲಿ, ತೊಲಗಲಿ ರಾಜ್ಯಪಾಲರು ತೊಲಗಲಿ ಎಂಬ ಘೋಷಣೆಗಳ ಕೂಗಿದರು.

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ʻʻರಾಜ್ಯಪಾಲರು ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಏಕೆ ಕೊಡುತ್ತಿಲ್ಲ. ಸರ್ಕಾರವನ್ನು ದುರ್ಬಲಗೊಳಿಸಲು ಕೇಂದ್ರ ಹುನ್ನಾರು ಮಾಡಿದೆ. 136 ಶಾಸಕರು ಗೆದ್ದಿದ್ದೇವೆ ಯಾವುದಕ್ಕೂ ಬಗ್ಗಲ್ಲʼʼ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಕೇಸ್ ಬೇರೆ ಬೇರೆ ಇದೆ. ಸುಪ್ರೀಂಕೋರ್ಟ್‌ ನ್ಯಾಯಾಧೀಶ ಬಿ.ವಿ.ನಾಗರತ್ನ ಅವರು ರಾಜ್ಯಪಾಲರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಜೈಲಿಗೆ ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್‌ ಸದಸ್ಯೆ ಬಲ್ಕಿಷ್ ಬಾನು ಮಾತನಾಡಿ, ʻʻರಾಜ್ಯಪಾಲರು ಸಂವಿಧಾನ ದ್ರೋಹಿ ಆಗಿದ್ದಾರೆ. ದೇವರಾಜ ಅರಸು ನಂತರ ಸಿದ್ದರಾಮಯ್ಯ ಎರಡನೇ ಬಾರಿಗೆ ಸಿಎಂ ಆಗಿರುವುದು ಸಹಿಸಿಕೊಳ್ಳಲು ಬಿಜೆಪಿ-ಜೆಡಿಎಸ್ ನವರಿಗೆ ಆಗುತ್ತಿಲ್ಲ. ಯಡಿಯೂರಪ್ಪ ಕುಟುಂಬದ ಆಸ್ತಿ ಎಷ್ಟಿದೆ. ರಾಜ್ಯದ ಬೊಕ್ಕಸ ಲೂಟಿ ಮಾಡಿದ್ದೀರಿ. ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಆಸ್ತಿ ವ್ಯಾಪಕವಾಗಿದೆʼʼ ಎಂದು ಆರೋಪಿಸಿದರು.

ಮಂಗಳೂರು: ಟಯರ್‌ಗೆ ಬೆಂಕಿ, ಬಸ್ ಮೇಲೆ ಕಲ್ಲು ತೂರಾಟ

ಕಾಂಗ್ರೆಸ್‌ ಕಾರ್ಯಕರ್ತರು ಮಂಗಳೂರಿನ ಲಾಲ್ ಬಾಗ್ ನ ಪಾಲಿಕೆ ಕಚೇರಿ ಎದುರು ರಸ್ತೆ ತಡೆ ನಡೆಸಿ, ಟೈ‌ ಸುಟ್ಟು ಪ್ರತಿಭಟನೆ ನಡೆಸಿದರು. ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿ  ರಸ್ತೆ ತಡೆ ನಡೆಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಇದಕ್ಕೂ ಮುನ್ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಲಾಲ್ ಬಾಗ್ ವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಯೂತ್ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಟೈರ್ ಗೆ ಬೆಂಕಿ ಹಚ್ಚಿದರು. ತಕ್ಷಣವೇ ಡಿಸಿಪಿ ಸಿದ್ದಾರ್ಥ ಗೋಯಲ್ ನೇತೃತ್ವದಲ್ಲಿ ಪೊಲೀಸರು ಬೆಂಕಿಯನ್ನು ನಂದಿಸಿದರು.

ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲವು ಕಿಡಿಗೇಡಿಗಳು ನಗರದ ಸ್ಟೇಟ್‌ ಬ್ಯಾಂಕ್‌ ನಿಂದ ಜೋಕಟ್ಟೆಗೆ ಹೋಗುವ ಮೌಲಾ' 2 ಸಿ ಸಿಟಿ ಬಸ್ ಗೆ ಲಾಲ್ಬಾಗ್ ನಲ್ಲಿ ಬಸ್‌ ಮೇಲೆ ಕಲ್ಲು ತೂರಿದರು. ಇದರಿಂದ ಪ್ರಯಾಣಿಕ ಮಹಿಳೆಯೊಬ್ಬರಿಗೆ ಗಾಯವಾಗಿದೆ.

ಬಸ್‌ನಲ್ಲಿ ಹತ್ತು ಮಂದಿ ಪ್ರಯಾಣಿಕರಿದ್ದರು. ಚಾಲಕ ಸೀಟಿನ ಹಿಂದೆ ಕುಳಿತ್ತಿದ್ದ ಮಹಿಳೆಗೆ ಗಾಯವಾಗಿದೆ. ನಾಲ್ವರು ಸೇರಿ ಕಲ್ಲು ತೂರಿದ್ದಾರೆ. ಈ ಬಸ್‌ ನೌಫಾಲ್ ಎಂಬ ಬಿಜೆಪಿ ನಾಯಕರಿಗೆ ಸೇರಿದ್ದು. ಉದ್ದೇಶಪೂರ್ವಕವಾಗಿ ಕಲ್ಲು ತೂರಾಟ ನಡೆಸಲಾಗಿದೆ. ಬಸ್ ನಲ್ಲಿದ್ದ ಪ್ರಯಾಣಿಕರನ್ನು ಇನ್ನೊಂದು ಬಸ್ ನಲ್ಲಿ ಕಳುಹಿಸಿಕೊಡಲಾಯಿತುʼʼ ಎಂದು ಬಸ್ ಸಿಬ್ಬಂದಿ ತಿಳಿಸಿದರು.

ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ 'ಔಟ್ ಔಟ್ ಗೆಹಲೋಟ್‌ʼ ಎಂದು  ಘೋಷಣೆ ಕೂಗಿದರು. ರಸ್ತೆ ತಡೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು. ಸ್ವಲ ಹೊತ್ತಿನಲ್ಲಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.

Tags:    

Similar News