ವಯೋಮಿತಿ ಸಡಿಲಿಕೆ; ಕೋರ್ಟ್ ಮೆಟ್ಟಿಲೇರಲು ಖಾಸಗಿ ಶಾಲೆಗಳ ಒಕ್ಕೂಟ ಸಜ್ಜು
ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ ಬಗ್ಗೆ ಸರ್ಕಾರ ಏಕಾಏಕಿ ನಿರ್ಧಾರಕ್ಕೆ ಬಂದಿರುವುದು ಅತಿದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ ಎಂದು ಆರೋಪಿಸಿ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಲು ಸಜ್ಜಾಗಿದೆ.;
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಈ ವರ್ಷ 1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಂಘರ್ಷ ಎದುರಾಗಿದೆ. ಈ ಹಿಂದೆ ಒಂದನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಎಂಬ ಆದೇಶ ಸಂಘರ್ಷಕ್ಕೆ ಕಾರಣವಾಗಿತ್ತು. ಪೋಷಕರ ಒತ್ತಾಯಕ್ಕೆ ಶಿಕ್ಷಣ ಇಲಾಖೆ ಈ ವರ್ಷಕ್ಕೆ ವಿನಾಯಿತಿ ಕೊಟ್ಟಿದೆ. ಆದರೆ ಸರ್ಕಾರದ ನಡೆ ಪ್ರಶ್ನಿಸಿ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೆಟ್ಟಿಲೇರಲು ಮುಂದಾಗಿವೆ.
ಕೆಲವು ಖಾಸಗಿ ಶಾಲೆಗಳು ಸರ್ಕಾರದ ಈ ಹಿಂದೆ ವಯೋಮಿತಿ ವಿಚಾರಕ್ಕೆ ನೀಡಿರುವ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಇದರ ಪ್ರಕಾರವೇ ದಾಖಲಾತಿ ಕೂಡಾ ಮಾಡಿಸಿಕೊಳ್ಳಲಾಗಿದೆ. ಆದರೆ ಸರ್ಕಾರ ಈಗ ಏಕಾಏಕಿ ಈ ನಿರ್ಧಾರಕ್ಕೆ ಬಂದಿರುವುದು ಅತಿದೊಡ್ಡ ಸಮಸ್ಯೆ ತಂದೊಡ್ಡಿದೆ. ಮುಂದಿನ ವರ್ಷಕ್ಕೂ ವಯೋಮಿತಿ ಸಡಿಲಿಕೆ ನೀಡಬೇಕಾದ ಅವಶ್ಯಕತೆ ಎದುರಾಗಿದೆ ಎಂದು ಕೋರ್ಟ್ ಮೊರೆ ಹೋಗಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.
ಸರ್ಕಾರ ಈ ವರ್ಷ ಮಾತ್ರ 5.5 ವರ್ಷಕ್ಕೆ ವಯೋಮಿತಿ ಸಡಿಲಿಕೆ ಮಾಡಿದೆ. ಜೊತೆಗೆ ಯುಕೆಜಿ ಮುಗಿಸಿರಬೇಕು ಎಂದು ಹೇಳಿದೆ. ಆದರೆ ಈಗಾಗಲೇ ಸರ್ಕಾರದ ಆದೇಶ ಪಾಲನೆ ಮಾಡಿಕೊಂಡೇ ಎಲ್ಕೆಜಿ ಶಾಲೆಗೆ ದಾಖಲಾದ ಮಕ್ಕಳ ಸ್ಥಿತಿ ಏನು ಎಂದು ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ಹೊರ ಹಾಕಿದ್ದಾರೆ. ದೇಶದಲ್ಲಿ ಈಗಾಗಲೇ ಎಲ್ಲಡೆ 1ನೇ ತರಗತಿಯ ದಾಖಲಾತಿಗೆ 6 ವರ್ಷ ಪೂರ್ಣಗೊಂಡಿರಬೇಕು ಎಂದು ಇದೆ. ರಾಜ್ಯದಲ್ಲಿ ಹೊಸ ರೂಲ್ಸ್ ತಂದರೆ ಸಮಸ್ಯೆಯಾಗುತ್ತದೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ಆಕ್ರೋಶ ಹೊರಹಾಕಿದೆ.
ಸರ್ಕಾರದ ಹೊಸ ಆದೇಶವೇನು?
ಶಾಲಾ ಶಿಕ್ಷಣ ಇಲಾಖೆ 2022ರ ನವೆಂಬರ್‌ನಲ್ಲಿ ಹೊರಡಿಸಿದ ಆದೇಶದ ಪ್ರಕಾರ, ಜೂನ್ 1, 2025ರ ಒಳಗೆ ಆರು ವರ್ಷಗಳನ್ನು ಪೂರ್ಣಗೊಳಿಸಿದ ಮಕ್ಕಳು 2025-26 ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಇದರಿಂದ ಸಾವಿರಾರು ಮಕ್ಕಳ ಪ್ರವೇಶಕ್ಕೆ ಅಡ್ಡಿಯಾಗಿದೆ. ಮೊದಲು ಇದ್ದಂತೆ ಪೋಷಕರ ಇಚ್ಛೆಗೆ ಅನುಗುಣವಾಗಿ ಶಾಲೆಗೆ ಸೇರಿಸಲು ವಯೋಮಿತಿ ಸಡಿಲಿಕೆಯ ಅವಕಾಶ ನೀಡಬೇಕು ಎಂದು ಹಲವು ಪೋಷಕರು ಮನವಿ ಮಾಡಿದ್ದರು. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪೋಷಕರ ವಿನಂತಿಯನ್ನುರಾಜ್ಯ ಶಿಕ್ಷಣ ನೀತಿ ಆಯೋಗದ ಗಮನಕ್ಕೆ ತಂದಿದ್ದರು.
ಈ ಬಗ್ಗೆ ಕ್ರಮ ಕೈಗೊಂಡಿದ್ದ ಆಯೋಗ, ಒಂದು ವರ್ಷಕ್ಕೆ ಸೀಮಿತಗೊಳಿಸಿ, ವಯೋಮಿತಿ ಸಡಿಲಿಕೆ ಅವಕಾಶ ನೀಡಿತ್ತು. ರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿ ವರದಿ ಆಧಾರದ ಮೇಲಿನ ಕಡ್ಡಾಯ 6 ವರ್ಷ ವಯೋಮಿತಿಯನ್ನು ಸಡಿಲಿಸಲಾಗಿದೆ. ಆದರೆ, ಒಂದನೇ ತರಗತಿ ಸೇರ್ಪಡೆಗೆ ಯುಕೆಜಿ ಆಗಿರಬೇಕು. ಇದು ಈ ವರ್ಷಕ್ಕೆ ಮಾತ್ರ ಅನ್ವಯ. ಮುಂದಿನ ವರ್ಷದಿಂದ ಕಡ್ಡಾಯ ವಯೋಮಿತಿ 6 ವರ್ಷವೇ ಇರಲಿದೆ ಎಂದು ಇತ್ತೀಚೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದ್ದರು.