Old Pension Scheme | ಒಪಿಎಸ್‌ ಮರು ಜಾರಿಗೆ ನೌಕರರ ಪಟ್ಟು; ಸರ್ಕಾರಕ್ಕೆ ಇಕ್ಕಟ್ಟು

ಒಪಿಎಸ್ ಮರು ಜಾರಿ ಕುರಿತು ಮುಂಬರುವ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಎನ್‌ಪಿಎಸ್‌ ಸಂಘ ಧರಣಿ ನಡೆಸಲು ನಿರ್ಧರಿಸಿದೆ.;

Update: 2025-01-22 11:16 GMT
ಶಾಂತಾರಾಮ್‌ ತೇಜಾ ಹಾಗೂ ಸಿ.ಎಸ್‌.ಷಡಾಕ್ಷರಿ

ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘ ಫೆ.7 ರಂದು ಅಹೋರಾತ್ರಿ ಧರಣಿ ಆರಂಭಿಸಲು ನಿರ್ಧರಿಸಿದೆ.

ಬಜೆಟ್‌ನಲ್ಲಿ ಒಪಿಎಸ್ ಮರು ಜಾರಿ ಕುರಿತು ಘೋಷಣೆ ಮಾಡುವಂತೆ ಒತ್ತಾಯಿಸಲು ಧರಣಿ ಹಮ್ಮಿಕೊಂಡಿದ್ದು, ಜನವರಿ 31 ರವರೆಗೆ ಪತ್ರ ಚಳವಳಿಯನ್ನು ಹಮ್ಮಿಕೊಂಡಿದೆ. ಜ.20 ರಿಂದಲೇ ಪತ್ರ ಚಳವಳಿ ಆರಂಭಿಸಿದ್ದು, ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೊಳಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಹಳೆ ಪಿಂಚಣಿ ಯೋಜನೆ ಜಾರಿಯಿಂದ ನಿವೃತ್ತ ನೌಕರರಿಗೆ ಒದಗಿಸಬೇಕಾದ ಪಿಂಚಣಿ, ಭತ್ಯೆಗಳ ಹೊರೆ ನಿಭಾಯಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಅಂದಾಜು 4 ಲಕ್ಷದಷ್ಟಿರುವ ಎನ್‌ಪಿಎಸ್‌ ನೌಕರರು ಹಳೆ ಪಿಂಚಣಿ ಯೋಜನೆಗೆ ಒತ್ತಾಯಿಸಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರಗಳನ್ನು ಬರೆಯುತ್ತಿದ್ದಾರೆ. 

2006 ಏಪ್ರಿಲ್ ಗಿಂತ ಹಿಂದೆ ಚಾಲ್ತಿಯಲ್ಲಿದ್ದ ಹಳೆ ಪಿಂಚಣಿ ಯೋಜನೆಯನ್ನೇ ಮರು ಜಾರಿ ಮಾಡಬೇಕು. ಆ ಮೂಲಕ ನಿವೃತ್ತಿಯ ನಂತರ ನೌಕರರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಬೇಕು ಎಂಬುದು ಎನ್‌ಪಿಎಸ್‌ ನೌಕರರ ಸಂಘದ ಏಕಮಾತ್ರ ಬೇಡಿಕೆಯಾಗಿದೆ. ಇದಕ್ಕಾಗಿಯೇ 2014 ರಿಂದ ಸಂಘದ ನೇತೃತದಲ್ಲಿ ಸರ್ಕಾರಿ ನೌಕರರು ಹೋರಾಟ ನಡೆಸುತ್ತಿದ್ದಾರೆ. 

ಮತ್ತೊಂದೆಡೆ ಸಿ.ಎಸ್. ಷಡಾಕ್ಷರಿ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವೂ ಹಳೆಯ ಪಿಂಚಣಿ ಯೋಜನೆ ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಆದರೆ, ಯಾವುದೇ ಒತ್ತಡ ತಂತ್ರದ ಮೊರೆ ಹೋಗಿಲ್ಲ. ಎರಡೂ ಸಂಘಟನೆಗಳ ಹೋರಾಟದ ಗುರಿ ಒಂದೇ ಆಗಿರುವುದರಿಂದ ಸರ್ಕಾರ ಒತ್ತಡದಲ್ಲಿ ಸಿಲುಕಿದೆ.

ಎನ್‌ಪಿಎಸ್‌ ನೌಕರರ ಸಂಘ ಹೇಳುವುದೇನು?

ʼʼಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ 2014 ರಿಂದಲೂ ಎನ್‌ಪಿಎಸ್‌ ನೌಕರರ ಸಂಘ ಹೋರಾಟ ನಡೆಸುತ್ತಿದೆ. 2022ರಲ್ಲಿ 14 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ ಪರಿಣಾಮ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಒಪಿಎಸ್ ಮರು ಜಾರಿಯ ಆಶ್ವಾಸನೆ ನೀಡಿತ್ತು. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇವೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ, ತುರ್ತಾಗಿ ಜಾರಿ ಮಾಡುವಂತೆ ಒತ್ತಡ ಹೇರಲು ಫೆ. 7 ರಂದು ಅಹೋರಾತ್ರಿ ಧರಣಿಗೆ ನಿರ್ಧರಿಸಲಾಗಿದೆʼʼ ಎಂದು ಎನ್‌ಪಿಎಸ್‌ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ತೇಜಾ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ʼʼಸರ್ಕಾರ ಭರವಸೆ ನೀಡಿರುವುದರಿಂದ ಹಕ್ಕೋತ್ತಾಯ ಧರಣಿ ಮಾಡಲು ನಿರ್ಧರಿಸಿದ್ದೇವೆ. ಈಗಾಗಲೇ ಪ್ರಣಾಳಿಕೆಯ ಐದು ಭರವಸೆಗಳನ್ನು ಸರ್ಕಾರ ಈಡೇರಿಸಿದೆ. ಆರನೇ ಭರವಸೆಯೇ ಒಪಿಎಸ್‌. ಸಂಘದಲ್ಲಿ ಸರ್ಕಾರಿ ನೌಕರರು ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸೇರಿ ಅಂದಾಜು 4 ಲಕ್ಷಕ್ಕೂ ಅಧಿಕ ನೌಕರರಿದ್ದಾರೆ. ಎನ್‌ಪಿಎಸ್‌-ಯುಪಿಎಸ್‌ ಬದಲಿಗೆ ನಮಗೆ ಹಳೆಯ ಪಿಂಚಣಿ ಯೋಜನೆಯನ್ನೇ ಮರುಜಾರಿಗೊಳಿಸಬೇಕುʼʼ ಎಂದರು.

ಹೊಸ ಬಾಟಲಿ, ಹಳೆಯ ಮದ್ಯ

ʼʼಕೇಂದ್ರ ಸರ್ಕಾರ ಎನ್‌ಪಿಎಸ್‌(ರಾಷ್ಟ್ರೀಯ ಪಿಂಚಣಿ ಯೋಜನೆ) ಬದಲಾಗಿ ಜಾರಿಗೆ ತಂದಿರುವ ಯುಪಿಎಸ್ (ಏಕೀಕೃತ ಪಿಂಚಣಿ ಯೋಜನೆ) ಹೊಸ ಬಾಟಲಿಯಲ್ಲಿ ಹಳೆಯ ಮದ್ಯ ಸೇರಿಸಿದಂತಿದೆ. ಏಕೀಕೃತ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಯಾವುದೇ ಪ್ರಯೋಜನವಿಲ್ಲ. ನೌಕರರ ವೇತನದಿಂದಲೇ ಕಡಿತ ಮಾಡುವ ಹಣವನ್ನು ನಿವೃತ್ತಿಯ ನಂತರ  ಮಾರುಕಟ್ಟೆ ಆಧರಿತವಾಗಿ ಪಿಂಚಣಿ ನೀಡಲಾಗುತ್ತದೆ. ಇದರಿಂದ ನೌಕರರ ಕುಟುಂಬಕ್ಕೆ ಆರ್ಥಿಕ ಭದ್ರತೆ ಇರುವುದಿಲ್ಲʼʼ ಎಂದು ಶಾಂತಾರಾಮ್ ಹೇಳಿದರು.

ಒಪಿಎಸ್ ಮರು ಜಾರಿ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘವೂ ಕೈಜೋಡಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಂತಾರಾಮ್ ಅವರು, ʼʼ2019ರವರೆಗೆ ಸರ್ಕಾರಿ ನೌಕರರ ಸಂಘ ಒಪಿಎಸ್ ಪರವಾಗಿರಲಿಲ್ಲ. ಈಗ ಒಪಿಎಸ್ ಮರು ಜಾರಿಗೆ ಒತ್ತಾಯಿಸುತ್ತಿರುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸುತ್ತಿದೆ. ಸರ್ಕಾರಿ ನೌಕರರ ಸಂಘದಲ್ಲಿ ಒಪಿಎಸ್‌ ಫಲಾನುಭವಿಗಳ ಸಂಖ್ಯೆ ಕಡಿಮೆ ಇದೆ. 2006 ನಂತರ ಸರ್ಕಾರಿ ಸೇವೆಗೆ ಬಂದವರಿಗೆ ಈ ಸೌಲಭ್ಯವಿಲ್ಲ. ಹಾಗಾಗಿ ಸರ್ಕಾರಿ ನೌಕರರ ಸಂಘ ಒಪಿಎಸ್ ವಿಚಾರವನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿಲ್ಲ. ಬರೀ ಚುನಾವಣೆಗೆ ಕೇಂದ್ರಿತವಾಗಿ ಹೇಳಿಕೆ ನೀಡಲು ಸೀಮಿತವಾಗಿದೆʼʼ ಎಂದು ಹೇಳಿದರು.

ಧರಣಿಯಿಂದ ಪ್ರಯೋಜನವಿಲ್ಲ

ಇನ್ನು ಸರ್ಕಾರಿ ಒಪಿಎಸ್ ನೌಕರರ ಧರಣಿ ಕುರಿತಂತೆ ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ʼʼಧರಣಿ ನಡೆಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಒಪಿಎಸ್ ಮರು ಜಾರಿಗಾಗಿ ನಮ್ಮ ಸಂಘದ ವತಿಯಿಂದ ಸರ್ಕಾರದ ಮೇಲೆ ಒತ್ತಡ ಹಾಕಿದ್ದೇವೆ. ಇದಕ್ಕಾಗಿ ರಾಜ್ಯ ಸರ್ಕಾರ ಸಮಿತಿ ರಚಿಸಿದ್ದು, ಎರಡು ಸಭೆಗಳನ್ನೂ ನಡೆಸಿದೆ. ಸಮಿತಿಯ ವರದಿಗಾಗಿ ಕಾಯುತ್ತಿದ್ದೇವೆʼʼ ಎಂದು ಹೇಳಿದರು.

"ಸರ್ಕಾರಿ ನೌಕರರ ಸಂಘದಲ್ಲೂ ಒಪಿಎಸ್ ವ್ಯಾಪ್ತಿಗೆ ಒಳಪಡುವ 2.20 ಲಕ್ಷ ನೌಕರರಿದ್ದಾರೆ. ಎನ್‌ಪಿಎಸ್‌ ನೌಕರರ ಸಂಘದಲ್ಲಿ3.5 ಲಕ್ಷ ನೌಕರರಿದ್ದಾರೆ. ಸರ್ಕಾರ ಈಗಾಗಲೇ ಒಪಿಎಸ್ ಮರು ಜಾರಿಯ ಭರವಸೆ ನೀಡಿದೆʼʼ ಎಂದು ತಿಳಿಸಿದರು.

ಒಪಿಎಸ್ ಪರಿಶೀಲನೆಗೆ ಸಮಿತಿ

ಎನ್‌ಪಿಎಸ್‌ ಬದಲಾಗಿ ಒಪಿಎಸ್ ಯೋಜನೆ ಮರು ಜಾರಿ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸಲು ಈ ಹಿಂದಿನ ಬಿಜೆಪಿ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2018 ನವೆಂಬರ್ ಹಾಗೂ 2023 ಮಾರ್ಚ್ ತಿಂಗಳ ಆದೇಶದಂತೆ ಸಮಿತಿ ರಚಿಸಿತ್ತು. 2024 ಆಗಸ್ಟ್ 16 ರಂದು ಕಾಂಗ್ರೆಸ್ ಸರ್ಕಾರ ಈ ಸಮಿತಿಯನ್ನು ಪುನರ್ ರಚಿಸಿ ಆದೇಶಿಸಿದೆ. ಸಮಿತಿಯು ಆರ್ಥಿಕ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸುತ್ತಿದೆ. 

ಇನ್ನು 2006 ಏಪ್ರಿಲ್ ಗಿಂತ ಹಿಂದೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿ 2006 ರ ನಂತರ ನೇಮಕಗೊಂಡ ರಾಜ್ಯ ಸರ್ಕಾರದ ಸುಮಾರು 13 ಸಾವಿರ ಸರ್ಕಾರಿ ನೌಕರರನ್ನು ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಸಿಎಂ ಸಿದ್ದರಾಮಯ್ಯ ಅವರು 2024 ಜನವರಿಯಲ್ಲಿ ಆದೇಶ ಹೊರಡಿಸಿದ್ದರು. ಹೀಗಾಗಿ ಒಪಿಎಸ್‌ ವ್ಯಾಪ್ತಿಗೆ ಒಳಪಟ್ಟಿರುವ ನೌಕರರ ಸಂಖ್ಯೆ ಹೆಚ್ಚಿದೆ. ಈ ಎಲ್ಲಾ ನೌಕರರಿಗೂ ನಿವೃತ್ತ ನಂತರ ಪಾವತಿಸಬೇಕಾದ ಭತ್ಯೆಗಳು, ಆರ್ಥಿಕ ಮಿತಿಗಳ ಕುರಿತು ಸಮಿತಿ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಎಲ್ಲೆಲ್ಲಿ ಒಪಿಎಸ್ ಮರು ಜಾರಿ

ಒಪಿಎಸ್ ಅಥವಾ ಎನ್‌ಪಿಎಸ್‌ ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಜಸ್ಥಾನ, ಪಂಜಾಬ್, ಛತ್ತೀಸಗಢ ಹಾಗೂ ಹಿಮಾಚಲ ಪ್ರದೇಶ ಎನ್‌ಪಿಎಸ್‌ ವ್ಯವಸ್ಥೆಯಿಂದ ಒಪಿಎಸ್‌ಗೆ ಮರಳಿವೆ.

2004 ಜನವರಿ 1 ರಂದು ಕೇಂದ್ರ ಸರ್ಕಾರ ಒಪಿಎಸ್ ವ್ಯವಸ್ಥೆ ರದ್ದುಪಡಿಸಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್‌ಪಿಎಸ್‌ ) ಜಾರಿಗೆ ತಂದಿತ್ತು. ಇದರನ್ವಯ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಎನ್‌ಪಿಎಸ್‌ಗೆ ಒಳಪಟ್ಟಿದ್ದರು. ಎನ್‌ಪಿಎಸ್‌ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಏಕೀಕೃತ ಪಿಂಚಣಿ ಯೋಜನೆಯನ್ನು(ಯುಪಿಎಸ್‌) ಕೇಂದ್ರ ಸರ್ಕಾರ ಘೋಷಿಸಿತ್ತು. 2025 ಏಪ್ರಿಲ್ 1 ರಿಂದ ನೌಕರರು ಎನ್‌ಪಿಎಸ್‌ ಅಥವಾ ಯುಪಿಎಸ್ ನಲ್ಲಿ ಮುಂದುವರಿಯುವ ಕುರಿತು ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್‌) ಅಂದರೇನು?

ಹಳೆಯ ಪಿಂಚಣಿ ಪರಿಷ್ಕರಿಸಿ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್‌) ಯನ್ನು ಕೇಂದ್ರ ಸರ್ಕಾರ 2004 ರಲ್ಲಿ ಜಾರಿಗೊಳಿಸಿದೆ. ಸದ್ಯ ಇದರಡಿ ರಾಜ್ಯದ ಸುಮಾರು ಅಂದಾಜು 4ಲಕ್ಷ ಉದ್ಯೋಗಿಗಳು ಇದ್ದಾರೆ.  

ಎನ್‌ಪಿಎಸ್‌ ಯೋಜನೆಯಡಿ ನೌಕರರ ಮೂಲ ವೇತನ ಹಾಗೂ ತುಟ್ಟಿಭತ್ಯೆಯಲ್ಲಿ ಶೇ.10ರಷ್ಟು ವೇತನ ಕಡಿತವಾಗಲಿದೆ. ಇದಕ್ಕೆ ಸರ್ಕಾರ ಶೇ.14 ರಷ್ಟು ಕೊಡುಗೆ ನೀಡುತ್ತದೆ. ಒಟ್ಟು ಕ್ರೂಡೀಕರಣವಾದ ಶೇ.24 ರಷ್ಟು ವಂತಿಕೆಯನ್ನು ಕೇಂದ್ರ ಸರ್ಕಾರ ಸ್ವಾಮ್ಯದ ಎಲ್‌ಐಸಿ, ಎಸ್‌ಬಿಐ ಹಾಗೂ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ ಯಲ್ಲಿ ಹೂಡಿಕೆ ಮಾಡಲಿದೆ. ಷೇರು ಮಾರುಕಟ್ಟೆಯ ಬೆಳವಣಿಗೆ ಆಧಾರದ ಮೇಲೆ ನಿವೃತ್ತಿಯ ನಂತರ ನೌಕರರಿಗೆ ಪಿಂಚಣಿ ನಿಗದಿಯಾಗಲಿದೆ. ಹಾಗಾಗಿ ಎನ್‌ಪಿಎಸ್‌ ನಿವೃತ್ತ ನೌಕರರ ಭವಿಷ್ಯ ಅನಿಶ್ಚಿತತೆಯಿಂದ ಕೂಡಿದೆ.   

ಹೀಗೆ ನಿವೃತ್ತ ನೌಕರರಿಂದ ಸಂಗ್ರಹಿಸಿದ ಒಟ್ಟು ವಂತಿಗೆಯ ಶೇ.60ರಷ್ಟು ಹಣವನ್ನು ನಿವೃತ್ತಿಯ ಬಳಿಕ ಒಂದೇ ಕಂತಿನಲ್ಲಿ ನೀಡಲಾಗುತ್ತದೆ. ಉಳಿದ ಶೇ.40ರಷ್ಟು ಹಣವನ್ನು ಮತ್ತೆ ಹೂಡಿಕೆ ಮಾಡಿ, ಮಾರುಕಟ್ಟೆ ಬೆಳವಣಿಗೆ ಆಧಾರದ ಮೇಲೆ ಪಿಂಚಣಿ ರೂಪದಲ್ಲಿ ನೀಡುತ್ತದೆ. ಉದಾಹರಣೆಗೆ 1.20 ಲಕ್ಷ ರೂ. ವೇತನ ಪಡೆಯುವ ಸರ್ಕಾರಿ ನೌಕರರೊಬ್ಬರು ಎನ್‌ಪಿಎಸ್‌ ಯೋಜನೆಯಡಿ ನಿವೃತ್ತಿ ಬಳಿಕ ಕೇವಲ 5 ಸಾವಿರ ರೂ. ಪಿಂಚಣಿ ಪಡೆಯಲಿದ್ದಾರೆ. ಒಮ್ಮೆ ನಿಗದಿಯಾದ ಪಿಂಚಣಿ ದರ ಜೀವಿತಾವಧಿವರೆಗೆ ಮುಂದುವರಿಯಲಿದೆ.  

ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಅಂದರೇನು?

ಹಳೆಯ ಪಿಂಚಣಿ ಯೋಜನೆಯನ್ನು 2004 ರಲ್ಲಿ ಕೇಂದ್ರ ಸರ್ಕಾರ ಹಿಂಪಡೆದಿತ್ತು. ಆದರೆ, ಒಪಿಎಸ್‌ ಮರು ಜಾರಿಯ ಆಯ್ಕೆಯನ್ನು ರಾಜ್ಯಗಳಿಗೆ ಬಿಟ್ಟಿತ್ತು. ಈ ಯೋಜನೆಯಡಿ ನೌಕರರ ವೇತನದಲ್ಲಿ ಯಾವುದೇ ವಂತಿಕೆಯನ್ನು ಕಡಿತ ಮಾಡುವುದಿಲ್ಲ. ನಿವೃತ್ತಿಯ ನಂತರ ನೌಕರರ ಮೂಲ ವೇತನದ ಶೇ 50 ರಷ್ಟು ಹಣವನ್ನು ಸರ್ಕಾರವೇ ಪಿಂಚಣಿ ರೂಪದಲ್ಲಿ ನೀಡಲಿದೆ. ಜೊತೆಗೆ ಕಾಲಕಾಲಕ್ಕೆ ನಡೆಯುವ ವೇತನ ಪರಿಷ್ಕರಣೆ, ತುಟ್ಟಿಭತ್ಯೆ ಏರಿಕೆಯ ಲಾಭವೂ ಇವರಿಗೆ ಸಿಗಲಿದೆ. 1992 ರಲ್ಲಿ ಒಪಿಎಸ್‌ ವ್ಯಾಪ್ತಿಯಲ್ಲಿದ್ದ ನೌಕರರು 42ಸಾವಿರ ರೂ. ಮೂಲ ವೇತನ ಪಡೆಯುತ್ತಿದ್ದರೆ, ನಿವೃತ್ತಿಯ ನಂತರ ಪಿಂಚಣಿ ರೂಪದಲ್ಲಿ 21 ಸಾವಿರ ರೂ. ಪಿಂಚಣಿ ಸಿಗುತ್ತಿತ್ತು. ಈಗ ವೇತನ ಪರಿಷ್ಕರಣೆ, ತುಟ್ಟಿಭತ್ಯೆ ಹೆಚ್ಚಳದ ಕ್ರಮಗಳಿಂದಾಗಿ ಅವರ ಪಿಂಚಣಿ ಮೊತ್ತ 68 ಸಾವಿರ ರೂ.ಗಳಿಗೆ ಏರಿಕೆಯಾಗಿದೆ. ಹಾಗಾಗಿ ಒಪಿಎಸ್‌ ಮರುಜಾರಿಗೆ ಹೆಚ್ಚು ಒತ್ತಡ ಹಾಕಲಾಗುತ್ತಿದೆ. ಇನ್ನು ಒಪಿಎಸ್‌ ನಲ್ಲಿ ಮೂಲವೇತನದ ಶೇ 50ರಷ್ಟು ಪಿಂಚಣಿ ಪಡೆಯಬೇಕಾದರೆ ಕನಿಷ್ಠ 30 ವರ್ಷ ಸೇವೆ ಸಲ್ಲಿಸಿರಬೇಕು. ಇನ್ನು ಒಪಿಎಸ್‌ಗೆ ಒಳಪಡಲು 20ವರ್ಷ ಸೇವೆ ಸಲ್ಲಿಸಿರಬೇಕಾಗುತ್ತದೆ.   

ವಿಪರ್ಯಾಸವೆಂದರೆ 2006ರಲ್ಲಿ ಮಾರ್ಚ್‌ 31 ರಂದು ಸರ್ಕಾರಿ ಸೇವೆಗೆ ಸೇರಿದವರು ಹಾಗೂ 2006ಏಪ್ರಿಲ್‌ 1ರಂದು ನೇಮಕವಾದವರ ನಡುವೆ ಎನ್‌ಪಿಎಸ್‌ ಯೋಜನೆಯಿಂದಾಗಿ ಒಂದೇ ದಿನದ ಅಂತರದಲ್ಲಿ ಕನಿಷ್ಠ 5 ಸಾವಿರ ವೇತನ ವ್ಯತ್ಯಾಸವಿದೆ. ನೇಮಕಾತಿಯಲ್ಲಿ ಕೇವಲ ಒಂದು ದಿನ ವ್ಯತ್ಯಾಸದಿಂದಲೇ ಇಷ್ಟೊಂದು ವೇತನ ತಾರತಮ್ಯದಿಂದ ಕೂಡಿದೆ.

Tags:    

Similar News