ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ: ಸಹಿ ಸಂಗ್ರಹಕ್ಕೆ ಪ್ರಕಾಶ್ ರಾಜ್ ಬೆಂಬಲ
ಸೌಜನ್ಯ ಹತ್ಯೆ ಮತ್ತು ಧರ್ಮಸ್ಥಳದಲ್ಲಿ ದಶಕಗಳಿಂದ ಆದ ನಿಗೂಢ ಸಾವುಗಳ ಸುಪ್ರೀಂ ಕೋರ್ಟ್ನ ಹಾಲಿ, ನಿವೃತ್ತ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಎಸ್ಐಟಿ ತನಿಖೆ ಆಗಬೇಕು ಎಂದು ಅಭಿಯಾನದಲ್ಲಿ ಒತ್ತಾಯಿಸಲಾಗಿದೆ.;
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ನಟ ಪ್ರಕಾಶ್ ರಾಜ್ ಅವರು ತಮ್ಮ ಬೆಂಬಲ ಘೋಷಿಸಿದ್ದಾರೆ. ಈ ಹೋರಾಟದಲ್ಲಿ ನಾನೂ ಪಾಲ್ಗೊಂಡಿದ್ದೇನೆ. ನೀವು ಪಾಲ್ಗೊಳ್ಳಿ ಎಂದು ಸೋಶಿಯಲ್ ಮೀಡಿಯಾ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ಆನ್ಲೈನ್ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಅದಕ್ಕೆ ಪ್ರಕಾಶ್ ರಾಜ್ ಸಹಿ ಹಾಕಿದ್ದಾರೆ. ಈ ಅಭಿಯಾನದಲ್ಲಿ ಒಂದು ಲಕ್ಷ ಸಹಿ ಸಂಗ್ರಹ ಮಾಡುವ ಗುರಿಯನ್ನು ಹೊಂದಲಾಗಿದೆ. ಸೌಜನ್ಯ ಹತ್ಯೆ ಮತ್ತು ಧರ್ಮಸ್ಥಳದಲ್ಲಿ ದಶಕಗಳಿಂದ ಆದ ನಿಗೂಢ ಸಾವುಗಳ ಸುಪ್ರೀಂ ಕೋರ್ಟ್ನ ಹಾಲಿ, ನಿವೃತ್ತ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಎಸ್ಐಟಿ ತನಿಖೆ ಆಗಬೇಕು. ಕೋರ್ಟ್ ಈಗಾಗಲೇ ನೀಡಿರುವ ಆದೇಶದಂತೆ ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಎಂದು ಅಭಿಯಾನದಲ್ಲಿ ಒತ್ತಾಯಿಸಲಾಗಿದೆ.
ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ 17 ವರ್ಷದ ವಿದ್ಯಾರ್ಥಿನಿ ಸೌಜನ್ಯಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಕೊಲೆಯಾಗಿದ್ದರು. ಘಟನೆ ನಡೆದು ಇಷ್ಟು ವರ್ಷಗಳಾದರೂ ಅಪರಾಧಿಗಳಿಗೆ ಶಿಕ್ಷೆಯಾಗದಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಸೌಜನ್ಯಾ ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರಿಂದ ತನಿಖೆ ಆರಂಭವಾಯಿತು. ಪ್ರಕರಣದ ಗಂಭೀರತೆ ಮತ್ತು ಸಾರ್ವಜನಿಕ ಒತ್ತಡದಿಂದಾಗಿ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಯಿತು. ಸಿಐಡಿ ತನಿಖೆಯ ನಂತರವೂ ದೋಷಿಗಳನ್ನು ಗುರುತಿಸಿ ಶಿಕ್ಷೆ ನೀಡಲು ಸಾಧ್ಯವಾಗಲಿಲ್ಲ.
ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಸಿಬಿಐ ಸುದೀರ್ಘ ತನಿಖೆ ನಡೆಸಿದರೂ, ಅಂತಿಮವಾಗಿ ಯಾವುದೇ ದೋಷಿಗಳಿಗೆ ಶಿಕ್ಷೆ ಆಗಿಲ್ಲ. ಹೀಗಾಗಿ ನ್ಯಾಯಾಂಗದ ಮಟ್ಟದಲ್ಲಿ ಹಾಗೂ ತನಿಖಾ ಸಂಸ್ಥೆಗಳ ವೈಫಲ್ಯದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿವೆ.
ಹೈಕೋರ್ಟ್ ತೀರ್ಪು ಮತ್ತು ಇತ್ತೀಚಿನ ಬೆಳವಣಿಗೆಗಳು
2024ರಲ್ಲಿ ಕರ್ನಾಟಕ ಹೈಕೋರ್ಟ್, ಈ ಪ್ರಕರಣದ ಮರುಪರಿಶೀಲನೆಯಿಂದ ಯಾವುದೇ ಉಪಯೋಗವಾಗುವುದಿಲ್ಲ ಎಂದು ತೀರ್ಪು ನೀಡುವ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಅದು, ನ್ಯಾಯ ಸಿಗಲಿದೆ ಎಂದು ನಿರೀಕ್ಷಿಸಿದ್ದ ಸೌಜನ್ಯಾ ಕುಟುಂಬ ಮತ್ತು ಹೋರಾಟಗಾರರಿಗೆ ಮತ್ತಷ್ಟು ನಿರಾಶೆ ತಂದಿತ್ತು.
2025ರ ಫೆಬ್ರವರಿಯಲ್ಲಿ ಸಮೀರ್ ಎಂ.ಡಿ. ಅವರ ಯೂಟ್ಯೂಬ್ ವೀಡಿಯೊದಿಂದ ಈ ಪ್ರಕರಣ ಮತ್ತೆ ಸಾರ್ವಜನಿಕರ ಗಮನ ಸೆಳೆಯಿತು. ಈ ವೀಡಿಯೊದಲ್ಲಿ ತನಿಖೆಯ ದೋಷಗಳು ಮತ್ತು ಪ್ರಕರಣದಲ್ಲಿ ಪ್ರಭಾವಶಾಲಿ ವ್ಯಕ್ತಿಗಳ ಸಂಬಂಧದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಲಾಗಿತ್ತು. ಈ ವೀಡಿಯೊದಿಂದಾಗಿ ಸಮೀರ್ ಎಂ.ಡಿ. ಮತ್ತು ಅವರೊಂದಿಗೆ ಗುರುತಿಸಿಕೊಂಡಿರುವ ಕೆಲವು ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಬೆಳವಣಿಗೆಯು ರಾಜ್ಯಾದ್ಯಂತ ಸಾರ್ವಜನಿಕ ಪ್ರತಿಭಟನೆಗಳಿಗೆ ಕಾರಣವಾಯಿತು.