ಹಾಸನ ಚಲೋ| 10 ಸಾವಿಕ್ಕೂ ಹೆಚ್ಚು ಮಂದಿಯಿಂದ ಪ್ರತಿಭಟನೆ: ಪ್ರಜ್ವಲ್‌ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಡ

ಪ್ರಜ್ವಲ್‌ ಬಂಧನ ವಿಳಂಬವಾಗಿರುವುದಕ್ಕೆ ಮತ್ತು ಸಂತ್ರಸ್ತರಿಗೆ ಮನೋಧೈರ್ಯ ತುಂಬಲು ವಿಫಲವಾಗಿರುವುದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊಣೆಯಾಗಿದ್ದು, ಕೂಡಲೇ ಕಾನೂನು ಕ್ರಮಗಳನ್ನು ಜರುಗಿಸಿ ನ್ಯಾಯ ಒದಗಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಲಾಗಿದೆ.;

Update: 2024-05-30 05:53 GMT

ದೇಶಾದ್ಯಂತ ಸುದ್ದಿಯಾಗಿರುವ ಲೈಂಗಿಕ ಹಗರಣ ಪ್ರಕರಣದ ಪ್ರಮುಖ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣನನ್ನ ಕೂಡಲೇ ಬಂಧಿಸಬೇಕು ಹಾಗೂ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ‘ಕರ್ನಾಟಕ ರಾಜ್ಯ ಜನಪರ ಚಳವಳಿಗಳ ಒಕ್ಕೂಟ’ದ ವತಿಯಿಂದ ಇಂದು (ಮೇ 30) ‘ಹಾಸನದ ಕಡೆಗೆ ನಮ್ಮ ನಡಿಗೆ’ ಘೋಷವಾಕ್ಯದಡಿ ‘ಹಾಸನ ಚಲೋ’ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಜ್ವಲ್‌ ಬಂಧನ ವಿಳಂಬವಾಗಿರುವುದಕ್ಕೆ ಮತ್ತು ಸಂತ್ರಸ್ತರಿಗೆ ಮನೋಧೈರ್ಯ ತುಂಬಲು ವಿಫಲವಾಗಿರುವುದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊಣೆಯಾಗಿದ್ದು, ಕೂಡಲೇ ಕಾನೂನು ಕ್ರಮಗಳನ್ನು ಜರುಗಿಸಿ ನ್ಯಾಯ ಒದಗಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಲಾಗಿದೆ. 

ರಾಜ್ಯದ ಹಲವೆಡೆಗಳಿಂದ 113 ಸಂಘಟನೆಗಳ ಸುಮಾರು 10 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಹಾಸನದ ಹೇಮಾವತಿ ಪ್ರತಿಮೆಯ ಬಳಿಯಿಂದ ಮೆರವಣಿಗೆ ಆರಂಭವಾಗಿ, ಜಿಲ್ಲಾಧಿಕಾರಿ ಕಚೇರಿ ಬಳಿಯ ಹೊಸ ಬಸ್‌ನಿಲ್ದಾಣ ರಸ್ತೆಯಲ್ಲಿ ಬಹಿರಂಗ ಸಭೆ ನಡೆಯಲಿದೆ.

ಈ ಬೃಹತ್‌ ಪ್ರತಿಭಟನೆಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಹೋರಾಟಗಾರರು ಬರುತ್ತಿದ್ದಾರೆ. ಸುಭಾಸ್‌ ಚಂದ್ರ ಭೋಸ್‌ ಅವರ ಭಾರತೀಯ ರಾಷ್ಟ್ರೀಯ ಸೇನೆಯ(ಐಎನ್‌ಎ) ಭಾಗವಾಗಿದ್ದ ಕರ್ನಲ್ ಪ್ರೇಮ್ ಸೆಹಗಲ್ ಮತ್ತು ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರ ಪುತ್ರಿ, ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷೆ ಸುಭಾಷಿಣಿ ಅಲಿ ಅವರು ಸೇರಿದಂತೆ ವಿವಿಧ ರಾಷ್ಟ್ರೀಯ ಹೋರಾಟಗಾರರು ಭಾಗಿಯಾಗಲಿದ್ದಾರೆ. ಇನ್ನು ಸಾಮಾಜಿಕ ಹೋರಾಟಗಾರ ಎಸ್‌ ಆರ್‌ ಹಿರೇಮಠ, ಸಿಐಟಿಯುನ ರಾಜ್ಯ ಅಧ್ಯಕ್ಷೆ ವರಲಕ್ಷ್ಮಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ, ಲೇಖಕಿ ಹೋರಾಗಾರ್ತಿ ಕೆ. ನೀಲಾ, ಬಂಜಗೆರೆ ಜಯಪ್ರಕಾಶ, ಹಿ.ಶಿ. ರಾಮಚಂದ್ರೇಗೌಡ, ಸಬಿಹಾ ಭೂಮಿಗೌಡ, ಮಾವಳ್ಳಿ ಶಂಕರ ಸೇರಿದಂತೆ ಅನೇಕ ಪ್ರಗತಿಪರರು ಈ ಬೃಹತ್‌ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಹಲವು ಮುಖಂಡರು ಬುಧವಾರವೇ ನಗರಕ್ಕೆ ಬಂದಿದ್ದಾರೆ.

ಈ ವಿಕೃತ ಲೈಂಗಿಕ ಅಪರಾಧಕ್ಕೆ ಕಾರಣನಾದ ಸಂಸದ ಪ್ರಜ್ವಲ್ ರೇವಣ್ಣ ಮೇಲೆ ಕಣ್ಣಾವಲು ಹಾಕದೆ, ಆತನನ್ನು ಬಂಧಿಸದೆ ಆತ ವಿದೇಶಕ್ಕೆ ಪರಾರಿಯಾಗಲು ಅನುವು ಮಾಡಿಕೊಟ್ಟಿರುವುದು ಅಕ್ಷಮ್ಯ. ಆನಂತರ ಸರ್ಕಾರವು ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಈಗಲೂ ವಿಕೃತ ಆರೋಪಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ 'ರೆಡ್ ಕಾರ್ನರ್ ನೋಟಿಸ್‌' ಹೊರಡಿಸಿಲ್ಲ. ಪ್ರಜ್ವಲ್ ರೇವಣ್ಣಗೆ ನೀಡಿರುವ 'ರಾಜತಾಂತ್ರಿಕ ಪಾಸ್ ಪೋರ್ಟ್' ಮತ್ತು 'ವೀಸಾ'ವನ್ನು ಕೇಂದ್ರ ಸರ್ಕಾರ ರದ್ದುಪಡಿಸಿಲ್ಲ. ಆತನ ಬಂಧನಕ್ಕೆ ನೆರವು ನೀಡುವಂತೆ ಕೋರಿದ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಅಗತ್ಯ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿಲ್ಲ. ಯಾಕೆ ಹೀಗೆ? ಯಾರನ್ನು ರಕ್ಷಿಸುತ್ತಿದ್ದೀರಿ ಎನ್ನುವ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಜನಪರ ಸಂಘಟನೆಗಳು ಹಾಸನ ಚಲೋ ಹಮ್ಮಿಕೊಂಡಿವೆ.

ಸಂಘಟನೆಗಳಿಗೆ ತಮ್ಮದೇ ಬ್ಯಾನರ್, ಬಾವುಟ ತರದಂತೆ ಸೂಚಿಸಲಾಗಿದೆ. ಒಕ್ಕೂಟವೇ ಬಾವುಟ, ಕರಪತ್ರ ಪತ್ರ ಸಿದ್ಧಪಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ಪೋಸ್ಟರ್ ಅಭಿಯಾನವೂ ನಡೆದಿದೆ.

Tags:    

Similar News