ತನಿಖೆಗೆ ಅಸಹಕಾರ ತೋರಿದ ಪ್ರಜ್ವಲ್: ಅಧಿಕಾರಿಗಳಿಗೆ ಬೆದರಿಕೆ
ಎಸ್‌ಐಟಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಿದ್ದು, ಇದೀಗ ಪ್ರಜ್ವಲ್ ತನಿಖೆಗೆ ಅಸಹಕಾರ ತೋಸುತ್ತಿದ್ದು, ಅಧಿಕಾರಿಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ಬಂಧಿಸಿದ್ದು, ಇದೀಗ ಪ್ರಜ್ವಲ್ ತನಿಖೆಗೆ ಅಸಹಕಾರ ತೋರಿಸುತ್ತಿದ್ದು, ಅಧಿಕಾರಿಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಅರಮನೆ ರಸ್ತೆಯಲ್ಲಿರುವ ಸಿಐಡಿ ಕೇಂದ್ರ ಕಚೇರಿಯ ಸೆಲ್‌ನಲ್ಲಿ ಪ್ರಜ್ವಲ್ ಅವರನ್ನು ಎಸ್‌ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಆದರೆ, ತಮ್ಮ ಮೇಲಿನ ಅತ್ಯಾಚಾರ ಆರೋಪಗಳನ್ನು ಅವರು ನಿರಾಕರಿಸುತ್ತಿದ್ದು, ಹೊರಗಡೆ ಬಂದ ಕೂಡಲೇ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.
ವಿಚಾರಣೆ ವೇಳೆ ಪ್ರಜ್ವಲ್ ಅವರು, ನನ್ನ ವಿರುದ್ಧ ರಾಜಕೀಯ ಪಿತೂರಿಯಿಂದ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ನಾನು ಯಾವುದೇ ತಪ್ಪು ಮಾಡಿಲ್ಲ. 4 ವರ್ಷಗಳ ಬಳಿಕ ಅತ್ಯಾಚಾರ ದೂರು ನೀಡಿರುವುದರ ಹಿಂದಿರುವ ಕಾರಣ ಪತ್ತೆ ಮಾಡಿ ಮೊದಲು ಎಂದು ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ. ನಮ್ಮ ಮನೆಯಲ್ಲಿ ಹಲವು ಮಂದಿ ಕೆಲಸ ಮಾಡುತ್ತಿದ್ದರು. ನನಗೆ ಆ ಕೆಲಸಗಾರರ ಬಗ್ಗೆ ಮಾಹಿತಿ ಗೊತ್ತಿಲ್ಲ. ತಿರುಚಿದ ವಿಡಿಯೊಗಳನ್ನು ಹರಿಬಿಟ್ಟು ನನ್ನ ತೇಜೋವಧೆ ಮಾಡಿದ್ದಾರೆ. ಈ ವಿಡಿಯೋಗಳ ಹಿಂದಿರುವ ಕಾರ್ತಿಕ್ ಸೇರಿದಂತೆ ಇತರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಸತ್ಯ ಹೊರಬರಲಿದೆ ಎಂದು ಪ್ರಜ್ವಲ್ ಎಸ್‌ಐಟಿ ಅಧಿಕಾರಿಗಳಿಗೆ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ರಜ್ವಲ್ ರೇವಣ್ಣನನ್ನು ಶುಕ್ರವಾರ ಕೋರ್ಟ್ ಮುಂದೆ ಹಾಜರುಪಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಆರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಇಂದು ಕೂಡ ವಿಚಾರಣೆ ನಡೆಸಲಿರುವ ಅಧಿಕಾರಿಗಳು ಭಾನುವಾರ ಅಥವಾ ಸೋಮವಾರ ಸ್ಥಳ ಮಹಜರು ಪ್ರಕ್ರಿಯೆಗೆ ಹಾಸನದ ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.