ಪ್ರಜ್ವಲ್ ರೇವಣ್ಣ ಪ್ರಕರಣ | ಇನ್‌-ಕ್ಯಾಮರಾ ವಿಚಾರಣೆ ತಳ್ಳಿ ಹಾಕಿದ ಹೈಕೋರ್ಟ್‌

ಸಂಸದ ಪ್ರಜ್ವಲ್‌ ರೇವಣ್ಣ ಅವರ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಯನ್ನು ಇನ್‌ ಕ್ಯಾಮರಾ ವಿಚಾರಣೆ ನಡೆಸಬೇಕು ಎಂದು ವಿಶೇಷ ತನಿಖಾ ತಂಡದ ಪರ ವಕೀಲರು ಸಲ್ಲಿಸಿರುವ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

Update: 2024-09-13 06:20 GMT
ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ

ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಯನ್ನು ಇನ್‌ಕ್ಯಾಮರಾ ವಿಚಾರಣೆ(ಗೌಪ್ಯ ವಿಚಾರಣೆ) ನಡೆಸಬೇಕು ಎಂದು ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಪರ ವಕೀಲರು ಸಲ್ಲಿಸಿರುವ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

'ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳನ್ನು ಸಂತ್ರಸ್ತೆಯರ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಗೌಪ್ಯವಾಗಿ ವಿಚಾರಣೆ ನಡೆಸಬೇಕು' ಎಂಬ ರಾಜ್ಯ ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಮನವಿ ಮಾಡಿತ್ತು.  

ಹಾಸನ ಜಿಲ್ಲೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಮತ್ತು ನಗರದ ಸೈಬರ್ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಜ್ವಲ್ ಪರ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ಅವರು, 'ಈ ಹಿಂದಿನ ವಿಚಾರಣೆ ವೇಳೆಯಲ್ಲಿ ಪ್ರಕರಣದ ಗೋಪ್ಯ ವಿಚಾರಣೆಗೆ ಮನವಿ ಮಾಡಲಾಗಿತ್ತು' ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಗೌಪ್ಯ ವಿಚಾರಣೆ ನಡೆಸಲು ಹೈಕೋರ್ಟ್‌ಗೆ ಪ್ರಾಸಿಕ್ಯೂಷನ್ ಮನವಿ ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಪ್ರತಿದಿನವೂ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿನ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಹೀಗಿರುವಾಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಹೊಸದೇನಿದೆ' ಎಂದು ಪ್ರಶ್ನಿಸಿತಲ್ಲದೆ 'ಗೋಪ್ಯ ವಿಚಾರಣೆ ಏನಿಲ್ಲ. ಆದರೆ, ವಿಚಾರಣೆ ವೇಳೆ ಸಂತ್ರಸ್ತೆಯರ ಹೆಸರು ಮತ್ತು ಅಶ್ಲೀಲತೆ ಒಳಗೊಂಡ ಅಂಶಗಳನ್ನು ವಕೀಲರು ಓದಬಾರದು. ಅದನ್ನು ನನಗೆ ತಿಳಿಸಿದರೆ ನಾನೇ ಓದಿಕೊಳ್ಳುತ್ತೇನೆ' ಎಂದರು.

ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಹಿರಿಯ ವಕೀಲ ರವಿವರ್ಮ ಕುಮಾರ್, 'ಗೋಪ್ಯ ವಿಚಾರಣೆಯ ಕುರಿತಾದ ಮನವಿಯನ್ನು ನ್ಯಾಯಪೀಠದ ವಿವೇಚನೆಗೇ ಬಿಡಲಾಗುವುದು' ಎಂದರು. ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಲಾಗಿದೆ.

ಪ್ರಕರಣದ ಹಿನ್ನೆಲೆ 

ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಲೋಕಸಭೆ ಚುನಾವಣೆ ವೇಳೆ ಹರಿದಾಡಿದ್ದವು. ಆ ಬಳಿಕ ಹೊಳೆನರಸೀಪುರದಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ನನ್ನು ಎಸ್‌ಐಟಿ ಮೇ 30 ರಂದು ಬಂಧಿಸಿತ್ತು. ಪ್ರಜ್ವಲ್‌ ರೇವಣ್ಣ ಸದ್ಯ ನ್ಯಾಯಾಂಗ ಬಂಧನಲ್ಲಿದ್ದು, ಅವರ ವಿರುದ್ಧ ಎಸ್‌ಐಟಿ ತನಿಖೆ ನಡೆಸುತ್ತಿದೆ. ಪ್ರಜ್ವಲ್‌ ವಿರುದ್ಧ ಒಟ್ಟು ನಾಲ್ಕು ಕೇಸುಗಳಿವೆ. ಅದರಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ಎಸ್‌ಐಟಿ ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿಯನ್ನು ಸಲ್ಲಿಸಿದೆ.

Tags:    

Similar News