Prajwal Pendrive Case | ಪ್ರಜ್ವಲ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಹಾಸನದ ಮಹಿಳೆಯ ನಗ್ನ ಚಿತ್ರ, ವಿಡಿಯೊ ಸೆರೆ ಹಿಡಿದ ಆರೋಪಕ್ಕೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಪ್ರಜ್ವಲ್‌ ಅರ್ಜಿಗಳನ್ನು ಹೈಕೋರ್ಟ್‌ ತಿರಸ್ಕರಿಸಿದೆ.;

Update: 2024-10-21 11:13 GMT
ಪ್ರಜ್ವಲ್‌ ರೇವಣ್ಣ
Click the Play button to listen to article

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಪ್ರಜ್ವಲ್ ರೇವಣ್ಣ ಅವರ ಒಂದು ಜಾಮೀನು ಮತ್ತು ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ತಿರಸ್ಕರಿಸಿದೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶ ಪ್ರಕಟ ಮಾತ್ರ ಬಾಕಿ ಉಳಿದಿದೆ.

ಪ್ರಜ್ವಲ್‌ ವಿರುದ್ಧ ಮೂರು ಅತ್ಯಾಚಾರ ಮತ್ತು ಒಂದು ಲೈಂಗಿಕ ದೌರ್ಜನ್ಯ, ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡಿದ ಆರೋಪದ ಸಂಬಂಧ ಪ್ರತ್ಯೇಕವಾಗಿ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಈ ಪೈಕಿ ಮೂರು ಪ್ರಕರಣಗಳಲ್ಲಿ ಪ್ರಜ್ವಲ್‌ ಜಾಮೀನು ಕೋರಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ವಜಾ ಮಾಡಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣಗೆ ಸೇರಿದ ಗನ್ನಿಗಡ ತೋಟದ ಮನೆಯಲ್ಲಿನ ಕೆಲಸದಾಕೆಯ ದೂರಿನ ಅನ್ವಯ ದಾಖಲಾಗಿರುವ ಅತ್ಯಾಚಾರ ಪ್ರಕರಣ ಮತ್ತು ಪುತ್ರನಿಗೆ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ಕಲ್ಪಿಸುವ ನೆಪದಲ್ಲಿ ಹಾಸನದ ಮಹಿಳೆಯ ನಗ್ನ ಚಿತ್ರ, ವಿಡಿಯೊ ಸೆರೆ ಹಿಡಿದ ಆರೋಪಕ್ಕೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಪ್ರಜ್ವಲ್‌ ಅರ್ಜಿಗಳನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಈ ಎರಡೂ ಪ್ರಕರಣಗಳು ಬೆಂಗಳೂರಿನ ಸಿಐಡಿ ಸೈಬರ್‌ ಠಾಣೆಯಲ್ಲಿ ದಾಖಲಾಗಿವೆ.

ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಇನ್ನೆರಡು ದಿನದಲ್ಲಿ ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.

ಹಾಸನದ ಮೂಲದ ಮಹಿಳೆಯೊಬ್ಬರು ಪ್ರಜ್ವಲ್ ರೇವಣ್ಣ ವಿರುದ್ಧ ಬೆಂಗಳೂರಿನ ಸೈಬರ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಸಂಬಂಧ ಜಾಮೀನು ಕೋರಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಏಕಸದಸ್ಯ ಪೀಠ ಜಾಮೀನು ನೀಡಲು ನಿರಾಕರಿಸಿದೆ.

Tags:    

Similar News