ಪ್ರಜ್ವಲ್‌ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2024-05-28 08:59 GMT

ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ಹರಿಬಿಟ್ಟವರನ್ನು ಬಂಧಿಸಬೇಕು ಎಂದು ಪ್ರತಿಪಕ್ಷಗಳ ನಾಯಕರ ಆಗ್ರಹ ಹೆಚ್ಚಾದ ಬೆನ್ನಲ್ಲೇ ಇಂದು(ಮೇ 28) ಆರೋಪಿಗಳಾದ ನವೀನ್ ಗೌಡ, ಚೇತನ್​ನನ್ನು ಎಸ್​ಐಟಿ ಬಂಧಿಸಿದೆ. ಇಂದು ಈ ಇಬ್ಬರು ಹೈ ಕೋರ್ಟ್‌ಗೆ ಬಂದಿದ್ದರು, ಆಗ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದ ಆರೋಪಿಗಳು ವಿಚಾರಣೆ ಎದುರಿಸಲು ಹೈಕೋರ್ಟ್ ಬಳಿ ಬಂದಾಗ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಇಂದು ನವೀನ್ ಗೌಡ ಮತ್ತು ಚೇತನ್ ಅವರ ಬರುವಿಕೆಯನ್ನು ಅರಿತು ಬಂಧಿಸಲಾಗಿದೆ.

ನವೀನ್ ಗೌಡ ಮತ್ತು ಚೇತನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ವಿಡಿಯೋ ವೈರಲ್​ ಮಾಡಿದ್ದವರನ್ನು ಈವರೆಗೂ ಬಂಧಿಸಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ದೂರು ದಾಖಲಾದ ಬರೋಬ್ಬರಿ ಒಂದು ತಿಂಗಳು ಬಳಿಕ ಆರೋಪಿಗಳ ಬಂಧನವಾಗಿದೆ.

ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ನವೀನ್ ಗೌಡ ಫೇಸ್​ಬುಕ್‌ನಲ್ಲಿ ಪೋಸ್ಟ್ ಹಾಕಿದ್ದನು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಅಲ್ಲದೇ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪ್ರಜ್ವಲ್ ರೇವಣ್ಣ ವೀಡಿಯೋ ನೋಡಲು ಈ ವಾಟ್ಸಾಪ್ ಚಾನಲ್ ಫಾಲೋ ಮಾಡಿ ಎಂದು ಫೇಸ್‌ಬುಕ್‌ನಲ್ಲಿ ಮೊದಲ ಪೋಸ್ಟ್ ಮಾಡಿದ್ದನು. ನಂತರ ಸ್ವಲ್ಪ ಹೊತ್ತಿನಲ್ಲೇ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೊ ಬಿಡುಗಡೆಗೆ ಕ್ಷಣ ಗಣನೆ ಎಂದು ಮತ್ತೊಂದು ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ್ದ ಜೆಡಿಎಸ್, ಪೋಸ್ಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಿತ್ತು. ಅತ್ತ ಪ್ರಕರಣ ದಾಖಲಾಗುತ್ತಿದ್ದಂತೆಯೇ ನವೀನ್​ ಗೌಡ ಫೇಸ್ ಬುಕ್ ಅಕೌಂಟ್ ಡಿಲೀಟ್ ಮಾಡಿಕೊಂಡಿದ್ದನು. ಈ ಸಂಬಂಧ ಎಸ್​ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ ನವೀನ್​ ಗೌಡ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಇಂದು ಎಸ್‌ಐಟಿ ಅಧಿಕಾರಿಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ.

Tags:    

Similar News