ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ | ಪ್ರಜ್ವಲ್ ಪತ್ತೆಗೆ ರೆಡ್ ಕಾರ್ನರ್ ನೋಟಿಸ್ ನೀಡಲು ಸಿದ್ಧತೆ ?
ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನ ಭೀತಿಯಿಂದ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಈಗಾಗಲೇ ವಿಶೇಷ ತನಿಖಾ ದಳವು (ಎಸ್ಐಟಿ) ಮೂರು ಬಾರಿ ನೋಟಿಸ್ ಜಾರಿ ಮಾಡಿದ್ದು, ಬ್ಲೂ ಕಾರ್ನರ್ ನೋಟಿಸ್ ಸಹ ನೀಡಿದೆ. ಇದೀಗ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನ ಭೀತಿಯಿಂದ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಈಗಾಗಲೇ ವಿಶೇಷ ತನಿಖಾ ದಳವು (ಎಸ್ಐಟಿ) ಪ್ರಜ್ವಲ್‌ಗೆ ಮೂರು ಬಾರಿ ನೋಟಿಸ್ ಜಾರಿ ಮಾಡಿದ್ದು, ಬ್ಲೂ ಕಾರ್ನರ್ ನೋಟಿಸ್ ಸಹ ನೀಡಿದೆ. ಇದೀಗ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಎಸ್‌ಐಟಿ ಸಿದ್ಧತೆ ನಡೆಸಿದೆ.
ಪ್ರಜ್ವಲ್‌ಗೆ ರೆಡ್ ಕಾರ್ನರ್ ನೋಟಿಸ್ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ರೆಡ್ ಕಾರ್ನರ್ ನೋಟಿಸ್ ನೀಡುವುದಕ್ಕೆ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಇಂಟರ್ಪೋಲ್ ಅವರೊಂದಿಗೆ ಚರ್ಚೆ ಮಾಡಬೇಕಾಗುತ್ತದೆ. ಸಿಬಿಐ ಅನುಮತಿ ಸೂಚಿಸಿದರೆ, ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಬಹುದು ಎಂದು ಮೂಲಗಳು ಹೇಳಿವೆ.
ಏನಿದು ರೆಡ್ ಕಾರ್ನರ್ ನೋಟಿಸ್ ?
ಗಂಭೀರ ಪ್ರಕರಣದಲ್ಲಿ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೆ, ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗುತ್ತದೆ. ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದರೆ ಆರೋಪಿ ತಲೆಮರೆಸಿಕೊಂಡಿರುವ ದೇಶದ ಪೊಲೀಸರು ಆರೋಪಿ ಪತ್ತೆಗೆ ಸಹಕಾರ ನೀಡಬೇಕಾಗುತ್ತದೆ. ಆರೋಪಿಯನ್ನು ಹಸ್ತಾಂತರ ಮಾಡುವುದು ಅಥವಾ ಯಾವುದಾದರೂ ಕಾನೂನು ಕ್ರಮ ಬಾಕಿ (ತನಿಖೆ) ಇರುವುದನ್ನು ಪೂರ್ಣಗೊಳಿಸುವ ಉದ್ದೇಶದಿಂದ ಈ ನೋಟಿಸ್ ಜಾರಿ ಮಾಡಲಾಗುತ್ತದೆ.
ವಿಶ್ವದ ಯಾವುದೇ ಪ್ರದೇಶದಲ್ಲಿದ್ದರೂ ತಾತ್ಕಾಲಿಕವಾಗಿ ಬಂಧಿಸಲು ಅಥವಾ ವಶಕ್ಕೆ ಪಡೆಯಲು ಇದು ಸಹಕಾರಿಯಾಗುತ್ತದೆ. ಒಂದೊಮ್ಮೆ ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ, ಆರೋಪಿ ತಲೆಮರೆಸಿಕೊಂಡಿರುವ ದೇಶದ ಪೊಲೀಸರು, ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಳ್ಳುತ್ತಾರೆ. ನಂತರ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿರುವ ದೇಶದ ಪೊಲೀಸರಿಗೆ ಆರೋಪಿಯನ್ನು ಹಸ್ತಾಂತರಿಸಲಾಗುತ್ತದೆ.
ಅಪರಾಧ ತನಿಖೆಗೆ ಸಂಬಂಧಿಸಿದಂತೆ ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಕುರಿತು ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗುತ್ತದೆ. ಪ್ರಜ್ವಲ್ ಪ್ರಕರಣದಲ್ಲಿ ಬ್ಲೂಕಾರ್ನರ್ ನೋಟಿಸ್ ಜಾರಿಯಾಗಿದೆ. ಇನ್ನು ಕಾಣೆಯಾದವರನ್ನು ಪತ್ತೆ ಮಾಡುವ ಉದ್ದೇಶದಿಂದ ಯೆಲ್ಲೋ ಕಾರ್ನರ್ ನೋಟಿಸ್ ಮಾಡಲಾಗುತ್ತದೆ. ಸಾರ್ವಜನಿಕ ಹಾಗೂ ಕಾನೂನು ಸುವ್ಯವಸ್ಥೆಯನ್ನು ಉಲ್ಲಂಘನೆ ಮಾಡುವುದು, ಯಾವುದಾದರೂ ಕೃತ್ಯ ಎಸಗುವ ಉದ್ದೇಶದಿಂದ ಜನರನ್ನು ಸಂಘಟಿಸುವುದು ಅಥವಾ ಭಾಗವಹಿಸುವ ಶಂಕೆ ವ್ಯಕ್ತವಾದರೆ, ಗ್ರೀನ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗುತ್ತದೆ.
ಟ್ವೀಟ್ ಮಾಡಿ ಟೀಕಿಸಿದ ಕಾಂಗ್ರೆಸ್
ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪ್ರಜ್ವಲ್‌ನನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ರಾಜ್ಯ ಕಾಂಗ್ರೆಸ್, ಸರಣಿ ಟ್ವೀಟ್ ಮಾಡಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ʻಪ್ರಜ್ವಲ್ ರೇವಣ್ಣನ ಪಾಸ್‌ಪೋರ್ಟ್ ರದ್ದು ಮಾಡಿದರೆ, ಆತ ಅನಿವಾರ್ಯವಾಗಿ ದೇಶಕ್ಕೆ ಮರಳಬೇಕಾಗುತ್ತದೆ. ಆದರೆ, ಕೇಂದ್ರ ಸರ್ಕಾರ ಪಾಸ್‌ಪೋರ್ಟ್ ರದ್ದು ಮಾಡಲು ಮುಂದಾಗುತ್ತಿಲ್ಲ. ರಾಜ್ಯ ಸರ್ಕಾರ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿ ಇಂಟರ್‌ಪೋಲ್ ಸಹಕಾರ ಕೋರಿತ್ತು. ಆದರೆ ಇದುವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಪ್ರಜ್ವಲ್ ರೇವಣ್ಣನನ್ನು ಪ್ರಧಾನಿ ಮೋದಿ ಅವರೇ ರಕ್ಷಿಸುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೇ?ʼ ಎಂದು ಪ್ರಶ್ನೆ ಮಾಡಿದೆ.
ʻಮೋದಿಗೆ ಪ್ರಜ್ವಲ್ ರೇವಣ್ಣ "ಕೋಂಪ್ಲೇನ್ ಬಾಯ್" ಏಕೆಂದರೆ, ಪ್ರಜ್ವಲ್ ರೇವಣ್ಣನನ್ನು ಗೆಲ್ಲಿಸಿದರೆ ಮೋದಿ ಶಕ್ತಿ ಬರುತ್ತದೆಯಂತೆ! ಇಂತಹ ಕೋಂಪ್ಲೇನ್ ಬಾಯ್‌ಗೆ ಮೋದಿ ಕಷ್ಟ ಕೊಡಬಲ್ಲರೆ!ʼ ಎಂದು ವ್ಯಂಗ್ಯ ಮಾಡಿದೆ.
ʻಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ಯಾರೂ ಸಹ ಸಂತ್ರಸ್ತರ ಬಗ್ಗೆ ಮಾತನಾಡುತ್ತಿಲ್ಲ, ದಾರಿ ತಪ್ಪಿದ ಮಗನ ಬಗ್ಗೆ ಮಾತನಾಡುತ್ತಿಲ್ಲ, ಇವತ್ತಿನವರೆಗೂ ಪಾಸ್‌ಪೋರ್ಟ್ ಏಕೆ ರದ್ದು ಮಾಡಿಲ್ಲ ಎಂಬುದರ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲ ಗೊತ್ತಿದ್ದು "ಪ್ರಜ್ವಲ್ ರೇವಣ್ಣನಿಗೆ ಮತ ಹಾಕಿದರೆ ನನಗೆ ಶಕ್ತಿ ತುಂಬಿದ ಹಾಗೆ" ಎಂದು ಮೋದಿಯವರು ಹೇಳಿದ್ದರ ಬಗ್ಗೆ ಮಾತನಾಡುತ್ತಿಲ್ಲʼ ಎಂದು ಟೀಕಿಸಿದೆ.
1 ಲಕ್ಷ ರೂಪಾಯಿ ಬಹುಮಾನ ಘೋಷಣೆ
ಸಂಸದ ಪ್ರಜ್ವಲ್ ರೇವಣ್ಣನನ್ನು ಹುಡುಕಿ ಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ, ಅಲ್ಲದೇ ಸನ್ಮಾನವನ್ನೂ ಮಾಡುವುದಾಗಿಯೂ ಜೆಡಿಎಸ್ ಪಕ್ಷದ ಮುಖಂಡ ನಾಗೇಶ್ ನೇತೃತ್ವದಲ್ಲಿ ಪೋಸ್ಟರ್ ಅಭಿಯಾನ ನಡೆಸಲಾಗಿದೆ.
ಬೆಂಗಳೂರಿನ ಶೇಷಾದ್ರಿಪುರ, ಶಿವಾನಂದ ವೃತ್ತ ಹಾಗೂ ಆನಂದ್‌ರಾವ್ ವೃತ್ತ ಸೇರಿದಂತೆ ವಿವಿಧೆಡೆ ಶನಿವಾರ ಪೋಸ್ಟರ್ ಅಭಿಯಾನ ನಡೆಸಲಾಗಿದ್ದು, ಹೈಗೌಂಡ್ ಠಾಣೆ ಪೊಲೀಸರು, ಜೆಡಿಎಸ್ ಮುಖಂಡ ನಾಗೇಶ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.