ಪ್ರಜ್ವಲ್ ಪೆನ್‌ಡ್ರೈವ್‌ ಪ್ರಕರಣ |‌ ಸಂತ್ರಸ್ತರಿಗೆ ನೆರವು, ಅತ್ಯಾಚಾರಿಗೆ ಕಠಿಣ ಶಿಕ್ಷೆಯಾಗಬೇಕು: ಸಿಎಂಗೆ ರಾಹುಲ್ ಗಾಂಧಿ ಪತ್ರ

ಗಂಭೀರ ಆರೋಪಗಳನ್ನು ಬಿಜೆಪಿಯ ಹಿರಿಯ ನಾಯಕತ್ವದ ಗಮನಕ್ಕೆ ತಂದರೂ, ಪ್ರಧಾನಮಂತ್ರಿಗಳು ಸಾಮೂಹಿಕ ಅತ್ಯಾಚಾರಿಯ ಪರವಾಗಿ ಪ್ರಚಾರ ಮಾಡಿದರು. ತನಿಖೆಯನ್ನು ಹಳಿತಪ್ಪಿಸಲು ಆರೋಪಿಯನ್ನು ಭಾರತದಿಂದ ಪಲಾಯನ ಮಾಡಲು ಕೇಂದ್ರ ಸರ್ಕಾರವು ಅವಕಾಶ ನೀಡಿದೆ ಎಂದಿದ್ದಾರೆ;

Update: 2024-05-04 09:12 GMT

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೌಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಸಂತ್ರಸ್ತೆಯರಿಗೆ ಎಲ್ಲಾ ನೆರವನ್ನು ನೀಡುವಂತೆ ಮುಖ್ಯಮಂತ್ರಿಗೆ ಸೂಚಿಸಿರುವ ಅವರು, ಇಂತಹ ಘೋರ ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಕಾನೂನು ವ್ಯಾಪ್ತಿಗೆ ತರಬೇಕಾದ ಸಾಮೂಹಿಕ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ತಿಳಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಬೇಕು. ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ತನ್ನನ್ನು ಸಹೋದರನಂತೆ, ಮಗನಂತೆ ನೋಡಿಕೊಳ್ಳುತ್ತಿದ್ದ ಅನೇಕರನ್ನು ಕ್ರೂರವಾಗಿ ಪ್ರಜ್ವಲ್ ನಡೆಸಿಕೊಂಡಿದ್ದಾನೆ. ನೊಂದ ತಾಯಿಂದಿರ, ಸಹೋದರಿಯರ ಪರವಾಗಿ ಹೋರಾಡುವ ನೈತಿಕ ಕರ್ತವ್ಯ ಕಾಂಗ್ರೆಸ್ ಪಕ್ಷದ್ದು. ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ರಕ್ಷಣೆ ನೀಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. 

ಪತ್ರದಲ್ಲಿ ಏನಿದೆ?

ಹಾಸನದ ಹಾಲಿ ಸಂಸದರು ನಡೆಸಿದ ಭೀಕರ ಲೈಂಗಿಕ ದೌರ್ಜನ್ಯದ ಬಗ್ಗೆ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಪ್ರಜ್ವಲ್ ರೇವಣ್ಣ ಹಲವಾರು ವರ್ಷಗಳಿಂದ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದನ್ನು ಚಿತ್ರೀಕರಿಸಿದ್ದಾರೆ. ಅವರನ್ನು ಸಹೋದರ ಮತ್ತು ಮಗನಂತೆ ನೋಡುತ್ತಿದ್ದ ಅನೇಕರನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕ್ರೂರವಾಗಿ ನಡೆಸಿಕೊಂಡಿದ್ದಾರೆ. ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲೆ ಎಸಗಿರುವ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕಿದೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ 2023 ರ ಹಿಂದೆಯೇ, ನಮ್ಮ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಪ್ರಜ್ವಲ್ ರೇವಣ್ಣ ಅವರ ಪೂರ್ವಾಪರಗಳು, ವಿಶೇಷವಾಗಿ ಅವರ ಲೈಂಗಿಕ ದೌರ್ಜನ್ಯದ ಇತಿಹಾಸದ ಬಗ್ಗೆ ಜಿ. ದೇವರಾಜೇ ಗೌಡ ಅವರು ತಿಳಿಸಿದ್ದರು ಎಂದು ತಿಳಿದು ನನಗೆ ತುಂಬಾ ಆಘಾತವಾಗಿದೆ.

ಇನ್ನೂ ಆಘಾತಕಾರಿ ಸಂಗತಿಯೆಂದರೆ, ಈ ಗಂಭೀರ ಆರೋಪಗಳನ್ನು ಬಿಜೆಪಿಯ ಹಿರಿಯ ನಾಯಕತ್ವದ ಗಮನಕ್ಕೆ ತಂದರೂ, ಪ್ರಧಾನಮಂತ್ರಿಗಳು ಸಾಮೂಹಿಕ ಅತ್ಯಾಚಾರಿಯ ಪರವಾಗಿ ಪ್ರಚಾರ ಮಾಡಿದರು. ತನಿಖೆಯನ್ನು ಹಳಿತಪ್ಪಿಸಲು ಆರೋಪಿಯನ್ನು ಭಾರತದಿಂದ ಪಲಾಯನ ಮಾಡಲು ಕೇಂದ್ರ ಸರ್ಕಾರವು ಅವಕಾಶ ನೀಡಿದೆ. ಈ ಅಪರಾಧಗಳ ಆಳವಾದ ವಿಕೃತ ಸ್ವರೂಪ ತಿಳಿದೂ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರು ಸಹಾಯ ಮಾಡುವುದು ಖಂಡನಾರ್ಯವಾಗಿದೆ ಎಂದಿದ್ದಾರೆ.

ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಈ ಪ್ರಮಾಣದಲ್ಲಿ ಮೌನವಾಗಿರುವ ಜನಪ್ರತಿನಿಧಿಯನ್ನು ನನ್ನ ಎರಡು ದಶಕಗಳ ಸಾರ್ವಜನಿಕ ಜೀವನದಲ್ಲಿ ನೋಡಿಲ್ಲ. ಹರಿಯಾಣದ ನಮ್ಮ ಕುಸ್ತಿಪಟುಗಳಿಂದ ಹಿಡಿದು ಮಣಿಪುರದ ನಮ್ಮ ಸಹೋದರಿಯರವರೆಗೂ ಭಾರತೀಯ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಪ್ರಧಾನಿಯವರು ಮೌನವಾಗಿರುವ ಮೂಲಕ ಅಪರಾಧಿಗಳಿಗೆ ಬೆಂಬಲದ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ನಮ್ಮ ನೊಂದ ತಾಯಂದಿರು ಮತ್ತು ಸಹೋದರಿಯರಿಗೆ ನ್ಯಾಯಕ್ಕಾಗಿ ಹೋರಾಡುವ ನೈತಿಕ ಕರ್ತವ್ಯ ಕಾಂಗ್ರೆಸ್ ಪಕ್ಷದ್ದಾಗಿದೆ. ಗಂಭೀರ ಆರೋಪಗಳ ತನಿಖೆಗಾಗಿ ಕರ್ನಾಟಕ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದೆ. ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿ ಅವರನ್ನು ಶೀಘ್ರವಾಗಿ ಭಾರತಕ್ಕೆ ಹಸ್ತಾಂತರಿಸುವಂತೆ ಪ್ರಧಾನಿಗೆ ಮನವಿ ಮಾಡಲಾಗಿದೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಬೇಕು‌ ಎಂದು ಪತ್ರದಲ್ಲಿ ಬರೆದಿದ್ದಾರೆ.

ರಾಹುಲ್‌ ಗಾಂಧಿ ಅವರು ಬರೆದಿರುವ ಪತ್ರವನ್ನು ಸಿದ್ದರಾಮಯ್ಯ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ʻʻಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರ, ಅನ್ಯಾಯಕ್ಕೆ ಒಳಗಾದ ಸಂತ್ರಸ್ತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಷಾಮೀಲಾಗಿದ್ದರೂ ಅವರನ್ನು ಕಾನೂನಿನ ಕೈಗಳಿಗೆ ಒಪ್ಪಿಸಲಾಗುವುದು. ನೊಂದವರ ಕಣ್ಣೀರು ಒರೆಸುವ ಜೊತೆಗೆ ಅವರ ನ್ಯಾಯದ ಹೋರಾಟದಲ್ಲಿ ನಮ್ಮ ಸರ್ಕಾರ ಜೊತೆ ನಿಲ್ಲಲಿದೆ ಎಂಬ ವಾಗ್ದಾನವನ್ನು ರಾಹುಲ್‌ ಗಾಂಧಿ ಅವರು ಸೇರಿದಂತೆ ನಾಡಿನ ಪ್ರತಿಯೊಬ್ಬರಿಗೂ ನೀಡುತ್ತಿದ್ದೇನೆ. ಸತ್ಯಮೇವ ಜಯತೇ..ʼʼ ಎಂದು ಬರೆದು ರಾಹುಲ್‌ ಪತ್ರವನ್ನು ಹಂಚಿಕೊಂಡಿದ್ದಾರೆ.


Tags:    

Similar News