ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ: ಡಿ.ಕೆ. ಶಿವಕುಮಾರ್‌ ಪಾತ್ರದ ಬಗ್ಗೆ ದೇವರಾಜೇ ಗೌಡ ಆರೋಪ

Update: 2024-05-06 13:16 GMT

ಚುನಾವಣೆಗೆ ಇನ್ನೂ ಕೇವಲ ೧೨ ಗಂಟೆಗಳಷ್ಟೇ ಬಾಕಿ ಇರುವಾಗ ದೇಶಾದ್ಯಂತ ಸದ್ದು – ಸುದ್ದಿ ಮಾಡುತ್ತಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ಕೇಸ್‌ನಲ್ಲಿ ಮಹತ್ವದ ತಿರುವು ಸಿಕ್ಕಿದೆ. ಈ ಪ್ರಕರಣವನ್ನು ಸಾರ್ವಜನಿಕ ವಲಯಕ್ಕೆ ತಂದ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಅವರು, ಈ ಪ್ರಕರಣ ಭಾರೀ ಸ್ವರೂಪ ಪಡೆಯಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. 

ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸುತ್ತಿರುವುದಾಗಿ ಹೇಳಿದ್ದಾರೆ. 

ಎರಡನೇ ಹಂತದ ಚುನಾವಣೆ ನಡೆಯಲಿರುವ ಮುನ್ನಾ ದಿನ ಅಂದರೆ ಸೋಮವಾರ (ಏ.೬)   ಸಂಜೆ ತುರ್ತು ಸುದ್ದಿಗೋಷ್ಠಿ ನಡೆಸಿದ ದೇವರಾಜೇಗೌಡ ಅವರು, ಈ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ ತನಿಖೆಯಲ್ಲಿ ತಮಗೆ ನಂಬಿಕೆ ಇಲ್ಲ ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ʻʻಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಇದ್ದಾರೆ. ಈ ಪ್ರಕರಣದ ರೂವಾರಿ ಬೇರೆ ಯಾರೂ ಅಲ್ಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ʼʼ ಎಂದು ಅವರು ಆರೋಪ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಆಡಿಯೋವೊಂದನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಅವರು, ಎಲ್‌ಆರ್‌ ಶಿವರಾಮೇಗೌಡ ಜೊತೆಗೆ ಆಡಿದರೆನ್ನಲಾದ ಮಾತುಗಳು ಆರಂಭವಾಗುವ ಮುಂಚೆಯೇ ಆಡಿಯೋ ನಿಲ್ಲಿಸಿ, ದೇವರಾಜೇಗೌಡ ತಮ್ಮ ಮಾತು ಮುಂದುವರೆಸಿದರು. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ತಮಗೆ ಕಾಂಗ್ರೆಸ್ ಸೇರಲು ಆಫರ್ ಕೊಡಲಾಗಿದೆ. ಡಿಕೆ ಶಿವಕುಮಾರ್‌ ಅವರು ಎಲ್‌ಆರ್‌ ಶಿವರಾಮೇಗೌಡ ಮೂಲಕ ಆಫರ್ ಕೊಟ್ಟರು ಎಂದು ಹೇಳುತ್ತಾ, ಶಿವರಾಮೇಗೌಡ ಜೊತೆ ಮಾತನಾಡಿರುವ ಆಡಿಯೋದ ತುಣುಕೊಂದನ್ನು  ದೇವರಾಜೇಗೌಡ ಸುದ್ದಿಗೋಷ್ಠಿಯಲ್ಲಿ ಕೇಳಿಸಿದರು. ಡಿ.ಕೆ. ಶಿವಕುಮಾರ್‌ ಅವರು ಆರಂಭಿಸಿದ ಒಂದೆರಡು ಕ್ಷಣಗಳಲ್ಲಿ ಆಡಿಯೋ ನಿಲ್ಲಿಸಿದ ದೇವರಾಜೇಗೌಡ ಉಳಿದ ವಿವರಗಳನ್ನು ತನಿಖಾ ಸಂಸ್ಥೆಯ ಮುಂದೆ ನೀಡುವುದಾಗಿ ಹೇಳಿದರು. ಪ್ರಕರಣದಲ್ಲಿ ಶಿವಕುಮಾರ್‌ ಅವರ ಪಾತ್ರ ಇದೆ ಎಂಬುದನ್ನು ಸಾಬೀತು ಪಡಿಸಲು ಮಾತ್ರ ಈ ತುಣುಕು ಕೇಳಿಸಿರುವುದಾಗಿ ಸಮರ್ಥಿಸಿಕೊಂಡರು.

ಯಾರು ಈ ದೇವರಾಜೇಗೌಡ?

ಹೊಳೆನರಸೀಪುರದ ಬಿಜೆಪಿ ಮುಖಂಡರಾಗಿರುವ ದೇವರಾಜೇಗೌಡ ಅವರು ಈ ಹಿಂದೆ ರೇವಣ್ಣ ಕುಟುಂಬದ ವಿರುದ್ಧ ವೈಯಕ್ತಿಕ ವಿಚಾರವಾಗಿ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಇದೀಗ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ‌ ಅವರ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ.

ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋಗಳನ್ನು ಸಂಗ್ರಹಿಸಿದ ಅವರ ಮಾಜಿ ಕಾರು ಚಾಲಕ ಕಾರ್ತೀಕ್‌ ಅವರು ನೇರವಾಗಿ ದೇವರಾಜೇಗೌಡ ಅವರನ್ನು ಭೇಟಿಯಾಗಿ ವಿಡಿಯೋಗಳ ಪೆನ್‌ಡ್ರೈವ್‌ವನ್ನು ನೀಡಿದ್ದರು ಎಂದು ಕಾರ್ತೀಕ್‌ ಹೇಳಿಕೊಂಡಿದ್ದರು. ಸಧ್ಯ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ದೇವರಾಜೇಗೌಡ ಅವರು ಬಿಜೆಪಿ ನಾಯಕರಿಗೆ ನೀಡಿದ್ದರು. ಆ ವಿಚಾರವನ್ನು ಪಕ್ಷದ ನಾಯಕರು ನಿರ್ಲಕ್ಷಿಸಿದರು ಎಂದು ಅವರು ಹೇಳಿದ್ದರು. ಇದರಿಂದ ಬಿಜೆಪಿ ಮುಜುಗರಕ್ಕೀಡಾಗಿತ್ತು. ಈ ವಿಷಯವನ್ನು ಕಾಂಗ್ರೆಸ್‌ ಸಶಕ್ತವಾಗಿ ಬಳಸಿಕೊಂಡಿತ್ತು. ಈಗ ತಮ್ಮ ಮೇಲೆ ಹೆಚ್ಚುತ್ತಿರುವ ಒತ್ತಡದಿಂದ ಅವರು ಪ್ರಕರಣವನ್ನು ಕಾಂಗ್ರೆಸ್‌ ನತ್ತ ತಿರುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ಕಾಂಗ್ರೆಸ್‌ ನಾಯಕರ ಆರೋಪ. 

Similar News