Leopards | ಹೆಸರಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಓಡಾಟ; ನಗರವಾಸಿಗಳ ಆತಂಕ
ಯಲಹಂಕ ತಾಲೂಕಿನ ಶಿವಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನೆಯೊಂದರ ಆವರಣದಲ್ಲಿ ರಾತ್ರಿ ವೇಳೆ ಎರಡು ಚಿರತೆಗಳು ಓಡಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.;
ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಹಾಗೂ ಯಲಹಂಕ ಸುತ್ತಮುತ್ತ ವಸತಿ ಪ್ರದೇಶದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಯಲಹಂಕ ತಾಲೂಕಿನ ಶಿವಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನೆಯ ಆವರಣದಲ್ಲಿ ರಾತ್ರಿ ವೇಳೆ ಎರಡು ಚಿರತೆಗಳು ಸಂಚರಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಸರಘಟ್ಟ ಅರಣ್ಯಪ್ರದೇಶಕ್ಕೆ ಹೊಂದಿಕೊಂಡ ಗ್ರಾಮಗಳಾದ ಬ್ಯಾತ, ಬ್ಯಾಲೆಕೆರೆ, ಸೊಣ್ಣೇನಹಳ್ಳಿ, ಐವರಕಂಡರಪುರ ಸೇರಿದಂತೆ ಹಲವೆಡೆ ಕೆಲ ದಿನಗಳಿಂದ ಚಿರತೆಗಳ ಹಾವಳಿ ವಿಪರೀತವಾಗಿದೆ. ಕಳೆದ ತಿಂಗಳಷ್ಟೇ ಹೆಸರಘಟ್ಟದ ಜಾನುವಾರು ಸಂವರ್ಧನಾ ಕೇಂದ್ರ ಬಳಿ ಹಸುವೊಂದನ್ನು ಚಿರತೆ ತಿಂದುಹಾಕಿತ್ತು.
ಹೆಸರಘಟ್ಟ ಸುತ್ತಲಿನ ಗ್ರಾಮಗಳ ಜನರು ಹುಲ್ಲುಗಾವಲು, ಕುರುಚಲು ಪ್ರದೇಶಗಳಿಗೆ ಜಾನುವಾರುಗಳನ್ನು ಮೇಯಿಸಲು ತೆರಳುತ್ತಾರೆ. ಕೆಲವರು ಅರಣ್ಯಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ಚಿರತೆಗಳ ಕಾಣಿಸಿಕೊಂಡ ಬಳಿಕ ಭಯದಿಂದ ಮನೆಯಿಂದ ಹೊರ ಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.
ಜಾನುವಾರು ಬಲಿ ಪಡೆದಿದ್ದ ಚಿರತೆ
ಹೆಸರಘಟ್ಟದ ಐವರಕಂಡಪುರದ ರೈತ ಗೋವಿಂದರಾಜು ಅವರಿಗೆ ಸೇರಿದ ಕರು, ಸೊಣ್ಣೇನಹಳ್ಳಿ ಗ್ರಾಮದ ಮಂಜುನಾಥ್ ಅವರ ಹಸು, ಬ್ಯಾತ ಗ್ರಾಮದ ಬಿ.ವಿ.ಲಕ್ಷ್ಮೀಕಾಂತ ಅವರ ಹಸು, ದಾಸೇನಹಳ್ಳಿ ಗ್ರಾಮದಲ್ಲಿ ಹಲವು ಜಾನುವಾರು ಹಾಗೂ ನಾಯಿಗಳನ್ನು ಚಿರತೆಗಳು ಬಲಿ ಪಡೆದಿವೆ. ಚಿರತೆ ಸೆರೆಯುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಸಾಕಷ್ಟು ಮನವಿ ಮಾಡಿದ್ದರೂ ಸ್ಪಂದಿಸಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇತ್ತೀಚೆಗೆ ಶಿವಕೋಟೆಯ ಮನೆಯೊಂದರ ಆವರಣದಲ್ಲಿ ಎರಡು ಚಿರತೆಗಳ ಚಲನವಲನ ಕಂಡು ಬಂದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
"ಎರಡು ಚಿರತೆಗಳ ಸೆರೆಗೆ ಶಿವಕೋಟೆ ಬಳಿ ಬೋನು ಇರಿಸಲಾಗಿದೆ. ಚಿರತೆ ನಿಗ್ರಹ ದಳ, ಅರಣ್ಯ ಸಿಬ್ಬಂದಿ ಮತ್ತು ಅರಣ್ಯ ರಕ್ಷಕರನ್ನು ರಾತ್ರಿ ಗಸ್ತಿಗೆ ನಿಯೋಜಿಸಲಾಗಿದೆ. ಸಾರ್ವಜನಿಕರು ರಾತ್ರಿ ವೇಳೆ ಸಂಚರಿಸುವಾಗ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ" ಎಂದು ಬೆಂಗಳೂರು ಉತ್ತರ ವಲಯದ ಅರಣ್ಯಾಧಿಕಾರಿ ಶಿವಪ್ಪ ಹೊಸಮನಿ ತಿಳಿಸಿದ್ದಾರೆ.
ಚಿರತೆ ಕಂಡರೆ ಸಹಾಯವಾಣಿ ಸಂಪರ್ಕಿಸಿ
ಹೆಸರಘಟ್ಟ ಸುತ್ತಮುತ್ತಲಿನ ನಿವಾಸಿಗಳು ಜಾಗರೂಕರಾಗಿರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಮಾಂಸ, ಇನ್ನಿತರೆ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ನಾಯಿಗಳು ಬರುತ್ತವೆ. ನಾಯಿಗಳನ್ನು ಭಕ್ಷಿಸಲು ಚಿರತೆಗಳು ಬರುವ ಸಾಧ್ಯತೆ ಇದೆ. ಹಾಗಾಗಿ ಕಸವನ್ನು ನಿಗದಿತ ಸ್ಥಳದಲ್ಲಿಯೇ ವಿಲೇವಾರಿ ಮಾಡಬೇಕು.
ಚಿರತೆ ಕಂಡುಬಂದರೆ ಕೂಡಲೇ ವನ್ಯಜೀವಿ ಸಹಾಯವಾಣಿ ಸಂಪರ್ಕಿಸಬೇಕು. ವಾಹನ ಸವಾರರು ಎಚ್ಚರಿಕೆಯಿಂದ ಸಾಗಬೇಕು ಎಂದು ಸಲಹೆ ನೀಡಿದ್ದಾರೆ.