Karnataka’s Union Budget Wishlist 2025 | ರಾಜ್ಯದ ನಿರೀಕ್ಷೆ ಏನು? ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನ ಅನುದಾನ ಹೆಚ್ಚಳಕ್ಕೆ ಒತ್ತಾಯ

UNION BUDJET 2025: ರಾಜ್ಯಕ್ಕೇನು ಬೇಕು?: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.;

Update: 2025-01-30 11:44 GMT
ಆಶಾ ಕಾರ್ಯಕರ್ತೆಯರು

ದೇಶದ ʼಆರ್ಥಿಕ ದಿಕ್ಸೂಚಿʼ ಎಂದೇ ಪರಿಗಣಿಸಲಾಗುವ ಕೇಂದ್ರ ಬಜೆಟ್ ಫೆ.1 ರಂದು ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಮಂಡಿಸುತ್ತಿರುವ ಬಜೆಟ್ ಮೇಲೆ ಕೇಂದ್ರ ಬಜೆಟ್ ಮೇಲೆ ರಾಜ್ಯ ಸರ್ಕಾರ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ.

ಆ ಹಿನ್ನೆಲೆಯಲ್ಲಿ ಯಾವೆಲ್ಲಾ ಕ್ಷೇತ್ರಗಳಿಗೆ ಒತ್ತು ನೀಡಲಾಗುತ್ತದೆ. ತೆರಿಗೆ, ಅನುದಾನ, ಯೋಜನೆ, ಸಹಾಯಧನ ಹಂಚಿಕೆ ಹೇಗಿರಲಿದೆ ಎಂಬ ಕುತೂಹಲ ಗರಿಗೆದರಿದೆ.

ಜ.20 ರಂದು ನವದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಗಳ ಹಣಕಾಸು ಸಚಿವರ ಸಭೆಯಲ್ಲಿ ಕರ್ನಾಟಕ ಸರ್ಕಾರದ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಹಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ. 

ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಪರಿಷ್ಕರಣೆ

ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ ಗೌರವಧನ ಹಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.

ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ 2,700 ರೂ.ನೀಡಿದರೆ, ರಾಜ್ಯ ಸರ್ಕಾರ 7,300 ರೂ. ಭರಿಸುತ್ತಿದೆ. ಆಶಾ ಕಾರ್ಯಕರ್ತರಿಗೆ ನೀಡುತ್ತಿರುವ 7 ಸಾವಿರ ಗೌರವಧನದಲ್ಲಿ ರಾಜ್ಯ ಸರ್ಕಾರ 5 ಸಾವಿರ ರೂ. ನೀಡಿದರೆ, ಕೇಂದ್ರ ಸರ್ಕಾರದ ಅಧೀನದ ರಾಷ್ಟ್ರೀಯ ಆರೋಗ್ಯ ಮಿಷನ್(ಎನ್ಎಚ್ಎಂ) 2 ಸಾವಿರ ರೂ. ನೀಡುತ್ತಿದೆ.

ಅಡುಗೆ ಸಿಬ್ಬಂದಿ ಮತ್ತು ಸಹಾಯಕರಿಗೆ ಕೇಂದ್ರದಿಂದ ತಿಂಗಳಿಗೆ 600 ರೂ. ಸಿಗಲಿದೆ. ರಾಜ್ಯ ಸರ್ಕಾರ 3,100 ರೂ. ಕೊಡುಗೆ ನೀಡುತ್ತದೆ. ಬಹುಪಾಲು ಗೌರವಧನದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದು, ಕಾರ್ಮಿಕರ ಸೇವೆ ಬಲಪಡಿಸಲು ಕೇಂದ್ರದ ಪಾಲನ್ನು ತಿಂಗಳಿಗೆ 5,000 ರೂ., ಅಡುಗೆಯವರು ಮತ್ತು ಸಹಾಯಕರಿಗೆ 2,000 ರೂ. ಗೆ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ. ಸಾಮಾಜಿಕ ಭದ್ರತಾ ಪಿಂಚಣಿಯ ಗೌರವಧನವನ್ನೂ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ.

ಕೇಂದ್ರ ಯೋಜನೆಗಳ ಹಣ ಬಳಕೆಗೆ ಪೂರ್ವಾನುಮೋದನೆ ಅಗತ್ಯ

ಕೇಂದ್ರ ಸರ್ಕಾರವು ಸಿಎಸ್ಎಸ್(ಕೇಂದ್ರ ಪುರಸ್ಕೃತ ಯೋಜನೆ) ಯೋಜನೆಗಳ ಅನುಷ್ಠಾನಕ್ಕಾಗಿ SNA SPARSH ಮಾದರಿ ಪರಿಚಯಿಸಿದೆ. ಕೇಂದ್ರ ಪುರಸ್ಕೃತ ಯೋಜನೆಗೆ ಬಿಡುಗಡೆಯಾಗುವ ಹಣವನ್ನು ಖರ್ಚು ಮಾಡಲು ಸ್ಥಳೀಯ ಸರ್ಕಾರದ ಪೂರ್ವಾನುಮೋದನೆ ಅಗತ್ಯವಿಲ್ಲ. ಇದರಿಂದ ರಾಜ್ಯದ ಏಕೀಕೃತ ನಿಧಿ(CFS), ಶಾಸಕಾಂಗದ ಅನುಮೋದನೆಯನ್ನೇ ನಿರ್ಲಕ್ಷಿಸುವಂತಾಗಿದೆ. ಪೂರ್ವಾನುಮತಿ ಇಲ್ಲದೇ ಹಣ ಖರ್ಚು ಮಾಡಲು ಅವಕಾಶ ನೀಡುವುದರಿಂದ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂದು ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.

ಇನ್ನು ಎಸ್ಎನ್ಎ ಸ್ಪರ್ಶ್ ಮಾದರಿಯಲ್ಲಿ ಖರ್ಚು ಮಾಡುವ ಹಣಕ್ಕೆ ಲೆಕ್ಕಪತ್ರ ನಿರ್ವಹಣೆ ಅವಕಾಶ ಇರುವುದಿಲ್ಲ. ಇದು ಸಾರ್ವಜನಿಕ ನಿಧಿ ಬಳಕೆಯಲ್ಲಿ ಹೊಣೆಗಾರಿಕೆಯ ಕೊರತೆಗೆ ಕಾರಣ ಆಗಲಿದೆ. ಹಾಗಾಗಿ CSS ಯೋಜನೆಗಳಿಗೆ ಬಿಡುಗಡೆ ಮಾಡುವ ನಿಧಿಯನ್ನು ರಾಜ್ಯ ಏಕೀಕೃತ ನಿಧಿಯ ಹಂಚಿಕೆಯಾಗುವಂತೆ ಮಾಡಬೇಕು ಎಂದು ಮನವಿ ಮಾಡಿದೆ.

ರಾಜ್ಯಕ್ಕೆ ಹಂಚಿಕೆಯಾಗಿರುವ ಬಹುತೇಕ ಕೇಂದ್ರ ಪುರಸ್ಕೃತ ಯೋಜನೆಗಳು ಹಣಕಾಸಿನ ಕೊರತೆ ಎದುರಿಸುತ್ತಿವೆ. ಹಾಗಾಗಿ ಈ ಯೋಜನೆಗಳಿಗೆ ವಾರ್ಷಿಕ ಕ್ರಿಯಾ ಯೋಜನೆ ರೂಪಿಸಿ, ಅದರಂತೆ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿದೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಹಾಲು, ಮಾಂಸ, ಮೊಟ್ಟೆ ಖರೀದಿಗೆ ಮರುಪಾವತಿ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಕೇಂದ್ರದ ಅನುದಾನ ವಿಳಂಬದಿಂದ ಆ ಹೊರೆ ರಾಜ್ಯದ ಮೇಲೆ ಬಿದ್ದಿದೆ. ಆದ್ದರಿಂದ, ನಿಧಿ ಬಿಡುಗಡೆ ವಿಧಾನವನ್ನು ಮರುಪಾವತಿಯಿಂದ ಮುಂಗಡ ಬಿಡುಗಡೆಗೆ ಬದಲಾಯಿಸಬೇಕು ಎಂದು ಬೇಡಿಕೆ ಸಲ್ಲಿಸಿದೆ.

ಪಿಂಚಣಿ ಪಾಲು ಹೆಚ್ಚಿಸಲು ಒತ್ತಾಯ

ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮದಡಿ (NSAP) ಕೇಂದ್ರ ಸರ್ಕಾರವು ಪಿಂಚಣಿ ನೀಡುತ್ತಿದೆ. ಪ್ರಸ್ತುತ, ಕರ್ನಾಟಕದಲ್ಲಿ 14.14 ಲಕ್ಷ ಫಲಾನುಭವಿಗಳಿಗೆ ಮಾತ್ರ ಕೇಂದ್ರದ ಪಿಂಚಣಿ ಸೌಲಭ್ಯ ಸಿಗುತ್ತಿದೆ. ಆದರೆ, ರಾಜ್ಯ ಸರ್ಕಾರ ತನ್ನದೇ ಪಿಂಚಣಿ ಯೋಜನೆಗಳ ಮೂಲಕ 68.66 ಲಕ್ಷ ಫಲಾನುಭವಿಗಳಿಗೆ ನೆರವು ನೀಡುತ್ತಿದೆ. ಇವುಗಳ ವ್ಯತ್ಯಾಸ ನೋಡುವುದಾದರೆ ರಾಜ್ಯದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಸೌಲಭ್ಯ ಕೇವಲ 17 ರಷ್ಟು ತಲುಪುತ್ತಿದೆ. ಈ ಪ್ರಮಾಣವನ್ನು ಕನಿಷ್ಠ 50ಕ್ಕೆ ಏರಿಸಬೇಕು ಎಂದು ಒತ್ತಾಯಿಸಿದೆ.

2023-24 ನೇ ಸಾಲಿನಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳ ಮೇಲಿನ ಒಟ್ಟು ವೆಚ್ಚ 10,554 ಕೋಟಿ ರೂ. ನಷ್ಟಿದೆ. ಇದರಲ್ಲಿ ಕೇಂದ್ರ ಸರ್ಕಾರ ಕೇವಲ 471 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಇದು ಒಟ್ಟು ಖರ್ಚಿನ ಕೇವಲ 4 ರಷ್ಟಿದೆ. ಸಾಮಾಜಿಕ ಭದ್ರತಾ ಪಿಂಚಣಿಗಳಿಗೆ ಉಳಿದ 96 ರಷ್ಟು ಹಣವನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ. ಈ ಅಸಮತೋಲನವು ರಾಜ್ಯ ಸರ್ಕಾರದ ಮೇಲಿನ ಆರ್ಥಿಕ ಒತ್ತಡ ಹೇರುತ್ತಿದೆ ಎಂದು ಕೇಂದ್ರದ ಗಮನ ಸೆಳೆದಿದೆ.

Tags:    

Similar News