ಸಿಗಂದೂರು ಸೇತುವೆ ಉದ್ಘಾಟನೆಗೆ ರಾಜಕೀಯ ಬಣ್ಣ: ಶಿಷ್ಟಾಚಾರ ಉಲ್ಲಂಘನೆ ಆರೋಪ; ಕಾಂಗ್ರೆಸ್ ಗೈರು
ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.;
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾದ ದೇಶದ ಎರಡನೇ ಅತಿದೊಡ್ಡ ಕೇಬಲ್ ಸೇತುವೆಯಾದ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಯ ಲೋಕಾರ್ಪಣೆ ಇಂದು (ಸೋಮವಾರ) ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಯಿತು. ರಾಜ್ಯ ಮತ್ತು ಕೇಂದ್ರದ ಸಚಿವರ ನಡುವೆ ಆಹ್ವಾನದ ವಿಚಾರವಾಗಿ ತೀವ್ರ ಆರೋಪ-ಪ್ರತ್ಯಾರೋಪಗಳು ನಡೆದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಕಾರ್ಯಕ್ರಮದಿಂದ ದೂರ ಉಳಿದರು.
ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಉದ್ಘಾಟನೆಗೆ ಕೊನೆಯ ಕ್ಷಣದಲ್ಲಿ ಆಹ್ವಾನ ನೀಡಲಾಗಿದೆ ಎಂದು ಅವರು ದೂರಿದರು.
ಮುಖ್ಯಮಂತ್ರಿಗಳ ಈ ಹೇಳಿಕೆಯ ಬೆನ್ನಲ್ಲೇ, ಖುದ್ದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಬರೆದಿದ್ದ ಪತ್ರವನ್ನು ಬಿಡುಗಡೆಗೊಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಕಾರ್ಯಕ್ರಮದ ಬಗ್ಗೆ ನನಗೆ ಮಾಹಿತಿ ನೀಡಿಲ್ಲ. ನಾನೇ ಗಡ್ಕರಿ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ನನ್ನ ಇಂಡಿ ಕ್ಷೇತ್ರದ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಸಿಗಂದೂರು ಸೇತುವೆ ಕಾರ್ಯಕ್ರಮದ ಬಗ್ಗೆ ಸಮರ್ಪಕ ಮಾಹಿತಿ ನೀಡದ ಕಾರಣ ನಾವು ಪ್ರತಿಭಟನಾರ್ಥವಾಗಿ ಭಾಗಿಯಾಗುವುದಿಲ್ಲ" ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸತೀಶ್ ಜಾರಕಿಹೊಳಿ ವಾಪಸ್
ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೂ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ವಾಪಸಾಗಿದ್ದಾರೆ. ಸಿಗಂದೂರು ಬ್ರಿಡ್ಜ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಭಾಗವಹಿಸಲೆಂದು ಸಾಗರಕ್ಕೆ ತೆರಳಿದ್ದ ಸತೀಶ್ ಜಾರಕಿಹೊಳಿ, ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಆಗಿಲ್ಲ ಎಂದು ಆರೋಪಿಸಿ ಅರ್ಧದಲ್ಲೇ ವಾಪಸಾದ ಪ್ರಸಂಗ ನಡೆಯಿತು. ಇವರಲ್ಲದೆ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರೂ ಕೂಡ ಕಾರ್ಯಕ್ರಮದಿಂದ ದೂರ ಉಳಿದರು.
ಮಳೆಯ ನಡುವೆಯೂ ಸೇತುವೆ ಉದ್ಘಾಟಿಸಿದ ನಿತಿನ್ ಗಡ್ಕರಿ
ರಾಜಕೀಯ ವಿವಾದಗಳ ನಡುವೆಯೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ಮಧ್ಯಾಹ್ನ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಿರುವ ಈ ಮಹತ್ವದ ಸೇತುವೆಯನ್ನು ಉದ್ಘಾಟಿಸಿದರು. ಬಿಟ್ಟೂ ಬಿಡದೆ ಸುರಿಯುತ್ತಿದ್ದ ಬಿರು ಮಳೆಯ ನಡುವೆಯೂ ಗಡ್ಕರಿ ಸೇತುವೆಯ ಶಿಲಾನ್ಯಾಸ ಮಾಡಿ, ಶರಾವತಿ ನದಿಗೆ ಬಾಗಿನ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿಯ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್. ರಾಮಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸೇತುವೆಯ ವಿವರಗಳು
ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾದ ಈ ಕೇಬಲ್ ಸೇತುವೆ, 473 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 2.44 ಕಿ.ಮೀ. ಉದ್ದ ಮತ್ತು 16 ಮೀಟರ್ ಅಗಲ ಹೊಂದಿರುವ ಈ ಸೇತುವೆ, ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಈ ಸೇತುವೆಯು ಸಾಗರದಿಂದ ಸಿಗಂದೂರಿನ ಸುತ್ತಮುತ್ತಲಿನ ಹಳ್ಳಿಗಳಿಗೆ ದೂರವನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ಈ ಭಾಗದ ಜನರ ದಶಕಗಳ ಸಂಕಷ್ಟಕ್ಕೆ ಮುಕ್ತಿ ನೀಡಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಲೋಕಾರ್ಪಣೆಗೂ ಮುನ್ನ ಸ್ಥಳೀಯರು ಗಣಹೋಮ ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಿದರು.