ಜಿಯಾಮೆಟ್ರಿ ಪಬ್‌ನಲ್ಲಿ ಕಳ್ಳತನ; ತಂಗಿ ಮದುವೆಗಾಗಿ ಹಣ ದೋಚಿದ್ದ ಅಸಾಮಿ ಬಂಧನ
ರಾಜಾಜಿನಗರದ ಪಬ್‌ನಿಂದ 50 ಸಾವಿರ ರೂ. ನಗದು ಕಳ್ಳತನ ಮಾಡಿ ಒಡಿಶಾಗೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತನ್ನ ತಂಗಿಯ ಮದುವೆಗಾಗಿ ಪಬ್‌ನಲ್ಲಿ ಹಣ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.;
ಕಾಲ್ಪನಿಕ ಚಿತ್ರ
ಕಳೆದ 15 ದಿನಗಳ ಹಿಂದೆ ಬೆಂಗಳೂರಿನ ರಾಜಾಜಿನಗರದ ಪಬ್‌ನಲ್ಲಿ ಕಳ್ಳತನ ಪ್ರಕರಣ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿಯು ತನ್ನ ತಂಗಿಯ ಮದುವೆಗಾಗಿ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 12 ರಂದು ರಾಜಾಜಿನಗರದ ಜಿಯಾಮೆಟ್ರಿ ಬ್ರೂವರಿ ಮತ್ತು ಕಿಚನ್‌ಗೆ ನುಗ್ಗಿದ ಅಪರಿಚಿತ ವ್ಯಕ್ತಿ, ಪಿಸ್ತೂಲು ಹಿಡಿದು ಬೆದರಿಸಿ ಹಣ ಕದ್ದು ಪರಾರಿಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಒಡಿಶಾದ 29 ವರ್ಷದ ಬಿಕಾಂ ಪದವೀಧರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ದಿಲೀಪ್ ಕುಮಾರ್ ಅಲಿಯಾಸ್ ತುಟ್ಟು ಎಂದು ಗುರುತಿಸಲಾಗಿದೆ.
ತಂಗಿ ಮದುವೆಗೆ ಹಣ ಹೊಂದಿಸಲು ಕಳ್ಳತನ
ಒಡಿಶಾದ ಜಾಜ್‌ಪುರದ ನಿವಾಸಿಯಾದ ದಿಲೀಪ್‌ಕುಮಾರ್ ತನ್ನ ತಂಗಿ ಮದುವೆಗೆ ಹಣ ಹೊಂದಿಸಲು ಕಳ್ಳತನ ಎಸಗಿದ್ದ ಸಂಗತಿ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್‌ನಿಂದ 50 ಸಾವಿರ ರೂ. ನಗದು ಕಳ್ಳತನ ಮಾಡಿ ಒಡಿಶಾಗೆ ಹೋಗಿದ್ದ ಆರೋಪಿ ಮೇ 14 ರಂದು ತನ್ನ ತಂಗಿಯ ಮದುವೆ ಕಳ್ಳತನ ಮಾಡಿದ್ದ ಹಣ ಮಾಡಿದ್ದ. ಮೇ 16 ರಂದು ಜಾಜ್‌ಪುರದಲ್ಲಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 6 ಸಾವಿರ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ, ಆತನ ಬಳಿ ಬಂದೂಕು ಪತ್ತೆಯಾಗಿಲ್ಲ. ಆರೋಪಿಯ ಪತ್ತೆಗೆ ಪೊಲೀಸರು 150ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಯ ಚಲನವಲನ ಪತ್ತೆಹಚ್ಚಿದ್ದರು.
ಜಾಜ್‌ಪುರದ ಸ್ಥಳೀಯ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿ ಮರುದಿನ ರಾತ್ರಿ ಬೆಂಗಳೂರಿಗೆ ಕರೆತಂದಿದ್ದಾರೆ.
ಆರೋಪಿಯ ಹಿನ್ನೆಲೆ
ಆರೋಪಿ 2016 ರಲ್ಲಿ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ. ಆತ ಜಯನಗರ ಮತ್ತು ಜೆಪಿ ನಗರದ ಪಬ್‌ಗಳಲ್ಲಿ ಕೆಲಸ ಮಾಡುತ್ತಿದ್ದ. 2021ರಲ್ಲಿ ಕಳ್ಳತನ ಮಾಡಲು ಯತ್ನಿಸಿದ ನಂತರ ಕೋರಮಂಗಲ ಪೊಲೀಸರು ಆತನನ್ನು ಬಂಧಿಸಿದ್ದರು. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಮತ್ತೆ ಜಯನಗರದ ವಿವಿಧ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ.
ಕಡಿಮೆ ಸಂಬಳದ ಕಾರಣ ಕಳೆದ ವರ್ಷ ಕೆಲಸ ಬಿಟ್ಟು ಒಡಿಶಾಗೆ ಮರಳಿದ್ದ ಆತ ನವೆಂಬರ್‌ನಲ್ಲಿ ಮತ್ತೆ ನಗರಕ್ಕೆ ಬಂದು ಜೆಪಿ ನಗರದ ಹೋಟೆಲ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದ. ಜೆಪಿ ನಗರದಲ್ಲಿ ರೂಂ ಮಾಡಿಕೊಂಡು ವಾಸವಾಗಿದ್ದ. 2025ರ ಮಾರ್ಚ್‌ನಲ್ಲಿ, ಆತ ಕೆಲಸ ಬಿಟ್ಟು ಬೇರೆಡೆ ಕೆಲಸ ಹುಡುಕಲು ಪ್ರಾರಂಭಿಸಿದ್ದ. ಅಷ್ಟರಲ್ಲಿ ತಂಗಿಯ ಮದುವೆಗೆ ಹಣ ಹೊಂದಿಸುವ ಜವಾಬ್ದಾರಿ ಹೊತ್ತುಕೊಂಡಿದ್ದ. ಅನ್ಯ ಮಾರ್ಗವಿಲ್ಲದೇ ಕಳ್ಳತನ ಮಾಡಲು ನಿರ್ಧರಿಸಿ, ಜಿಯೊಮೆಟ್ರಿ ಪಬ್‌ನಲ್ಲಿ ಕಳ್ಳತನ ಮಾಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.