ಖಾದರ್ ಕಚೇರಿಯಲ್ಲಿ ಅವ್ಯವಹಾರ: ನ್ಯಾಯಮೂರ್ತಿಗಳಿಂದ ತನಿಖೆಗೆ ಮಾಜಿ ಸ್ಪೀಕರ್ ಕಾಗೇರಿ ಆಗ್ರಹ

ಸ್ಪೀಕರ್ ಕಾರ್ಯಾಲಯದ ಟೆಂಡರ್ ಮೈಸೂರು ಮೂಲದ ಕೆಲವೇ ಮಂದಿಗೆ ಸಿಗುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಹಣಕಾಸು ಇಲಾಖೆ ಖರೀದಿಗಳನ್ನು ತಿರಸ್ಕರಿಸಿದ್ದರೂ, ಮುಖ್ಯಮಂತ್ರಿಗಳೇ ಒಪ್ಪಿಗೆ ಕೊಡಿಸಿದ ಆರೋಪವಿದೆ ಎಂದು ದೂರಿದರು.

Update: 2025-10-28 09:16 GMT

ವಿಶ್ವೇಶ್ವರ ಹೆಗಡೆ ಕಾಗೇರಿ

Click the Play button to listen to article

ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ಅಧಿಕಾರಾವಧಿಯಲ್ಲಿ ನಡೆದಿರುವ ಗಂಭೀರ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ದುಂದುವೆಚ್ಚದ ಆರೋಪಗಳ ಕುರಿತು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒತ್ತಾಯಿಸಿದ್ದಾರೆ.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸ್ಪೀಕರ್ ಸ್ಥಾನದ ಘನತೆಯನ್ನು ಕಾಪಾಡಲು ಈ ಹುದ್ದೆಯು ಎಲ್ಲಾ ಆರೋಪಗಳಿಂದ ಮುಕ್ತವಾಗಬೇಕು. ಪ್ರಸ್ತುತ ಕೇಳಿಬಂದಿರುವ ಆರೋಪಗಳು ಸಭಾಧ್ಯಕ್ಷರ ಹುದ್ದೆಗೆ ಕಳಂಕ ತರುವಂತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಟ್ಯಂತರ ರೂಪಾಯಿ ಅವ್ಯವಹಾರದ ಆರೋಪ

ಸ್ಪೀಕರ್ ಕಚೇರಿಯಿಂದ ನಡೆಯುತ್ತಿರುವ ಖರೀದಿ ಪ್ರಕ್ರಿಯೆಗಳಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಕಾಗೇರಿ ಆರೋಪಿಸಿದರು. "ಹಣಕಾಸು ಇಲಾಖೆ ತಿರಸ್ಕರಿಸಿದರೂ, ಮುಖ್ಯಮಂತ್ರಿಗಳ ಕಚೇರಿಯಿಂದಲೇ ನೇರವಾಗಿ ಒಪ್ಪಿಗೆ ಕೊಡಿಸಿ ಟೆಂಡರ್‌ಗಳನ್ನು ಮೈಸೂರು ಮೂಲದ ಕೆಲವೇ ವ್ಯಕ್ತಿಗಳಿಗೆ ನೀಡಲಾಗುತ್ತಿದೆ. ಇದು ಏಕೆ?" ಎಂದು ಅವರು ಪ್ರಶ್ನಿಸಿದರು.

ಅವರು ಮುಂದಿಟ್ಟ ಪ್ರಮುಖ ಆರೋಪಗಳು

ಶಾಸಕರ ಭವನಕ್ಕೆ ಮಾರುಕಟ್ಟೆ ಬೆಲೆಗಿಂತ ದುಪ್ಪಟ್ಟು ದರದಲ್ಲಿ ಸ್ಮಾರ್ಟ್ ಡೋರ್ ಲಾಕರ್‌ ( 49,000 ರೂಪಾಯಿಗೂ ಅಧಿಕ) ಮತ್ತು ಸ್ಮಾರ್ಟ್ ಸೇಫ್ ಲಾಕರ್‌ಗಳನ್ನು ( 35,000 ರೂಪಾಯಿಗೂ ಅಧಿಕ) ಖರೀದಿಸಲಾಗಿದೆ. ವಿಧಾನಸಭೆಯ ಪ್ರಧಾನ ಬಾಗಿಲಿಗೆ ರೋಸ್‌ವುಡ್ ಕೆತ್ತನೆ, ಹೊಸ ಟಿವಿ ಸೆಟ್‌ಗಳು, ಎಐ ಮಾನಿಟರ್ ಸಿಸ್ಟಮ್, ಶಾಸಕರಿಗೆ ಗಂಡಭೇರುಂಡ ಮಾದರಿಯ ಗಡಿಯಾರ, ಮೊಗಸಾಲೆಯಲ್ಲಿ ಮಸಾಜ್ ಯಂತ್ರ ಅಳವಡಿಕೆ, ಊಟೋಪಚಾರ, ಹಾಸು-ಹೊದಿಕೆ, ಸುಣ್ಣ-ಬಣ್ಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಕೇವಲ 4-5 ದಿನಗಳ ಪುಸ್ತಕ ಮೇಳಕ್ಕೆ 4.5 ಕೋಟಿ ರೂಪಾಯಿ ಖರ್ಚು ಮಾಡಿರುವುದು ಏಕೆ? ಸ್ಪೀಕರ್ ಖಾದರ್ ಅವರ ವಿದೇಶ ಪ್ರವಾಸಗಳ ಖರ್ಚು-ವೆಚ್ಚ ಮತ್ತು ಪ್ರವಾಸದ ಉದ್ದೇಶವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಪಕ್ಷಪಾತ ಮತ್ತು ಅಧಿಕಾರ ದುರುಪಯೋಗ

ಸ್ಪೀಕರ್ ಯು.ಟಿ. ಖಾದರ್ ಅವರು ಪಕ್ಷಪಾತದಿಂದ ವರ್ತಿಸುತ್ತಿದ್ದು, ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿದ್ದಾರೆ ಎಂದು ಕಾಗೇರಿ ದೂರಿದರು. "ಯಾವುದೇ ಕಾರಣವಿಲ್ಲದೆ 10 ಮತ್ತು ನಂತರ 18 ಬಿಜೆಪಿ ಶಾಸಕರನ್ನು ಸದನದಿಂದ ಅಮಾನತುಗೊಳಿಸಿದ್ದು ಅವರ ಪಕ್ಷಪಾತಿ ಧೋರಣೆಗೆ ಸಾಕ್ಷಿ. ಇಂದಿಗೂ ವಿರೋಧ ಪಕ್ಷದ ನಾಯಕರಿಗೆ ಅಧಿಕೃತ ನಿವಾಸ ನೀಡದಿರುವುದು ಸ್ಪೀಕರ್ ಸ್ಥಾನಕ್ಕೆ ಮಾಡಿದ ಅವಮಾನ," ಎಂದರು.

“ರಾಜ್ಯವು ಆರ್ಥಿಕವಾಗಿ ದಿವಾಳಿಯ ಅಂಚಿನಲ್ಲಿರುವಾಗ, ಗುತ್ತಿಗೆದಾರರು ಮತ್ತು ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಇಂತಹ ದುಂದುವೆಚ್ಚದ ಅಗತ್ಯವಿತ್ತೇ? ಸ್ಪೀಕರ್ ಸ್ಥಾನದ ಮೇಲೆ ಇಂತಹ ಗಂಭೀರ ಆರೋಪಗಳು ಕೇಳಿಬರುತ್ತಿರುವುದು ಕರ್ನಾಟಕದ ದುರಂತ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮತ್ತು ಮಾಜಿ ಸದಸ್ಯ ಅರುಣ್ ಶಹಾಪುರ ಉಪಸ್ಥಿತರಿದ್ದರು. 

Tags:    

Similar News