ಕನ್ನಡ ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿ ನೇಮಕ : ಮಹೇಶ್ ಜೋಶಿಗೆ ಹಿನ್ನೆಡೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಮಹೇಶ್ ಜೋಶಿಗೆ ಭಾರಿ ಹಿನ್ನಡೆಯಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಅಧಿಕಾರ ದುರ್ಬಳಕೆ ಸೇರಿ ವಿವಿಧ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹಾಲಿ ಆಡಳಿತ ಮಂಡಳಿಯನ್ನು ಬದಿಗಿಟ್ಟು ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಸರ್ಕಾರದ ಕೈಗೊಂಡ ಕ್ರಮದಿಂದಾಗಿ ಮಹೇಶ್ ಜೋಶಿಗೆ ಭಾರಿ ಹಿನ್ನಡೆಯಾಗಿದೆ. ಮಹೇಶ್ ಜೋಶಿ ವಿರುದ್ಧ ಹೋರಾಟ ನಡೆಸಿದವರಿಗೆ ಜಯ ಸಿಕ್ಕಂತಾಗಿದೆ. ಆರ್ಥಿಕ ಚಟುವಟಿಕೆಗಳು ಸೇರಿದಂತೆ ಪರಿಷತ್‌ನ ಎಲ್ಲಾ ಚಟುವಟಿಕೆಗಳನ್ನು ಆಡಳಿತಾಧಿಕಾರಿಗಳೇ ನೋಡಿಕೊಳ್ಳಲಿದ್ದಾರೆ. ಹಾಲಿ ಅಧ್ಯಕ್ಷ ಮಹೇಶ್ ಜೋಷಿ ವಿರುದ್ಧ ಸಾಹಿತಿಗಳ ಒಂದು ವರ್ಗ ತೀವ್ರ ಅಸಮಾಧಾನ ಮತ್ತು ವಿರೋಧ ವ್ಯಕ್ತಪಡಿಸಿತ್ತು. ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಮಹೇಶ್ ಜೋಶಿ ವಿರುದ್ಧ ಸಾಕಾಷ್ಟು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರಿಗೆ ನೀಡಿದ್ದ ಭದ್ರತೆ ಮತ್ತು ರಾಜ್ಯ ಸಚಿವರ ಸ್ಥಾನಮಾನವನ್ನು ಸರ್ಕಾರ ವಾಪಸ್ ಪಡೆದುಕೊಂಡಿತ್ತು. ಇದೀಗ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದೆ.
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ರಾಜ್ಯ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್‌ಗೆ 2.50 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿತ್ತು. ಈ ಹಣದ ಖರ್ಚಿಗೆ ಸಂಬಂಧಿಸಿದಂತೆ ಹಣ ಬಳಕೆ ಪ್ರಮಾಣಪತ್ರವನ್ನ ಮಂಡ್ಯ ಜಿಲ್ಲಾಧಿಕಾರಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರು ಸಲ್ಲಿಸಿಲ್ಲ. ಕನ್ನಡ ಸಾಹಿತ್ಯ ಪರಿಷತ್‌ಗೆ ನೀಡಿದ್ದ ಅನುದಾನದ ಹಣವನ್ನು ಷರತ್ತು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಸಮರ್ಪಕವಾಗಿ ಬಳಸದೇ ಇರೋದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಭ್ರಷ್ಟಾಚಾರ ಆರೋಪಗಳ ದೂರುಗಳು ಬಂದ ಹಿನ್ನೆಲೆಯಲ್ಲಿ ಸಹಕಾರ ಇಲಾಖೆಯು ವಿಚಾರಣೆ ನಡೆಸಿತು. ಈ ವೇಳೆ 17 ಆರೋಪಗಳ ಪೈಕಿ 7 ಆರೋಪಗಳಿಗೆ ವಿಚಾರಣಾ ಅವಧಿಯಲ್ಲಿ ಭಾಗಶಃ ಉತ್ತರವನ್ನು ವಿಚಾರಣಾಧಿಕಾರಿಗೆ ಮಹೇಶ್ ಜೋಶಿ ಸಲ್ಲಿಸಿದ್ದರು. ವಿಚಾರಣಾಧಿಕಾರಿಗಳು ಸಂಘದ ಅಧ್ಯಕ್ಷರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ನಿಗಧಿತ ಸಮಯದಲ್ಲಿ ಸಮಜಾಯಿಷಿಯನ್ನು ದಾಖಲೆಗಳೊಂದಿಗೆ ಸಲ್ಲಿಸಲು ವಿಫಲರಾಗಿದ್ದರು. ಸರ್ಕಾರದಿಂದ ನೋಟಿಸ್‌ಗೆ ಜಾರಿ ಮಾಡಿದರೂ, ವಾರ್ಷಿಕ ಸಾಮಾನ್ಯ ಸಭೆ ನಿಗಧಿಯಾಗಿರುವ ವಿಷಯವನ್ನು ಹೊರತುಪಡಿಸಿ ಪರಿಷತ್ ವಿರುದ್ಧದ ಯಾವುದೇ ಆರೋಪಗಳಿಗೆ ಅಲ್ಲಗೆಳೆಯುವಂತಹ ಸೂಕ್ತ ಸಮಜಾಯಿಷಿ, ಪೂರಕ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿರುತ್ತಾರೆ. ವಿಚಾರಣಾಧಿಕಾರಿಗಳ ವರದಿಯಲ್ಲಿ ಪರಿಷತ್ ವಿರುದ್ಧದ ಆರೋಪಗಳು ಗಂಭೀರವಾಗಿರುತ್ತದೆ. ಅದರಲ್ಲಿ ಸಂಘದ ಹಣಕಾಸಿನ ದುರುಪಯೋಗಕ್ಕೆ ಸಂಬಂಧಿಸಿದ ಆರೋಪಗಳಿವೆ ಎಂದು ತಿಳಿಸಿದೆ.
ಎರಡನೇ ಬಾರಿ ಆಡಳಿತಾಧಿಕಾರಿ ನೇಮಕ
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಸಾಕಷ್ಟು ಭ್ರಷ್ಟಚಾರದ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಸಾಹಿತ್ಯ ಪರಿಷತ್‌ನ ಇತಿಹಾಸದಲ್ಲಿ ಇದು ಎರಡನೇ ಬಾರಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಮಹೇಶ್ ಜೋಶಿ ಅವರ ಅವಧಿಯಲ್ಲಿ ಹಣಕಾಸು ಅವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪದ ಬಗ್ಗೆ ಸರ್ಕಾರ ತನಿಖೆ ನಡೆಸಿತು. ಈ ಹಿಂದೆ ಹಂಪ ನಾಗರಾಜಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೂ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು.
ನ್ಯಾಯಾಲಯ ಮೆಟ್ಟಿಲೇರುವ ಸಾಧ್ಯತೆ:
ಕನ್ನಡ ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮಹೇಶ್ ಜೋಶಿ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ. ಮಹೇಶ್ ಜೋಶಿ ನೇತೃತ್ವದ ಸಮಿತಿಯನ್ನು ಪರಿಷತ್‌ನ ಆಡಳಿತದಿಂದ ದೂರ ಇಡಲಾಗಿದೆ. ಆದರೆ ಚುನಾವಣೆ ಮೂಲಕ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಕನ್ನಡ ಕಟ್ಟಿ ಬೆಳೆಸಲು ಅವಕಾಶ ನೀಡಲಿಲ್ಲ:
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ನಿಕಟಪೂರ್ವ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು ಭ್ರಷ್ಟಾಚಾರದಲ್ಲಿ ತೊಡಗಿದ್ದ ಕಾರಣ ಅವರ ವಿರುದ್ಧ ಹೋರಾಟ ನಡೆಸಲಾಯಿತು. ಕನ್ನಡವನ್ನು ಕಟ್ಟಿ ಬೆಳೆಸುವ ಕಾರ್ಯಕ್ಕಾಗಿ ಪರಿಷತ್‌ಗೆ ಹೋಗಿದ್ದೇವು. ಆದರೆ, ಸಾಹಿತ್ಯ ಕೆಲಸ ಮಾಡಲು ಅವಕಾಶವೇ ನೀಡಲಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನ ಹೊರತು ಪಡಿಸಿ ಇತರೆ ಸಮ್ಮೇಳನಗಳು ನಡೆಸಲಿಲ್ಲ. ಹೊಸ ಪುಸ್ತಕಗಳ ಪ್ರಕಟಣೆ ಮಾಡಲಿಲ್ಲ. ಕಾಮಗಾರಿಗಳಿಂದ ಹಣ ಗಳಿಸಬಹುದು ಎಂಬುದನ್ನು ಅರಿತು ಅದಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಆಡಳಿತಾಧಿಕಾರಿ ನೇಮಕ ಮಾಡಿರುವುದು ಸ್ವಾಗತಾರ್ಹವಾಗಿದ್ದು, ಪರಿಷತ್‌ನ ಆರ್ಥಿಕತೆಯ ಕುರಿತು ಗಮನಹರಿಸಿದರೆ ಮತ್ತಷ್ಟು ಭ್ರಷ್ಟಾಚಾರ ಗೊತ್ತಾಗಲಿದೆ ಎಂದರು.
ಮಹೇಶ್ ಜೋಶಿ ವಿರುದ್ಧ ಅಸಮಾಧಾನ ಭುಗಿಲೇಳಲು ಕಾರಣ
ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಪತ್ರಕರ್ತ ಮತ್ತು ಲೇಖಕ ಜಾಣಗೆರೆ ವೆಂಕಟರಾಮಯ್ಯ ಹಾಗೂ ಲೇಖಕಿ ಡಾ.ವಸುಂಧರಾ ಭೂಪತಿ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ರದ್ದುಪಡಿಸಿ ಸಹಕಾರ ಸಂಘಗಳ ಉಪನಿಬಂಧಕರು 2025ರ ಜೂನ್ 27ರಂದು ಆದೇಶ ಹೊರಡಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ರದ್ದುಪಡಿಸಿ ಹಾಗೂ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿ 2025ರ ಜೂ. 26 ಹಾಗೂ 30ರಂದು ಹೊರಡಿಸಿರುವ ಆದೇಶಗಳನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.
ಎನ್.ಹನುಮೇಗೌಡ ಹಾಗೂ ಇತರರು ನೀಡಿದ ದೂರಿನ ಹಿನ್ನೆಲೆಯಲ್ಲಿ, 2023-24ರಿಂದ ಇಲ್ಲಿವರೆಗೆ ಪರಿಷತ್ತು ಅನುಮೋದಿಸಿರುವ ತಿದ್ದುಪಡಿಗಳು, ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಪರಿಷತ್ತಿನ ಅಧ್ಯಕ್ಷರು ನಿಯಮಬಾಹಿರವಾಗಿ ನೀಡಿರುವ ನೋಟಿಸ್‌ಗಳು, 2023-24ನೇ ಸಾಲಿನಲ್ಲಿ ಪರಿಷತ್ತಿಗೆ ಸಂಗ್ರಹವಾಗಿರುವ ಆದಾಯವನ್ನು ದುರುಪಯೋಗ ಪಡಿಸಿಕೊಂಡಿರುವುದು, ಈ ಅವಧಿಯಲ್ಲಿನ ಖರೀದಿ ಮತ್ತು ಮಾರಾಟದಲ್ಲಿ ಆಗಿರುವ ಅವ್ಯವಹಾರ ಮತ್ತಿತ್ತರ ವಿಷಯಗಳನ್ನು ಪರಿಶೀಲಿಸಿ, ಸೂಕ್ತ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಕ ಮಾಡಿ, ಜೂ. 30ರಂದು ಆದೇಶ ಹೊರಡಿಸಲಾಗಿತ್ತು. ಈ ಆದೇಶಗಳನ್ನು ರದ್ದುಪಡಿಸಬೇಕು ಎಂದು ಮಹೇಶ್ ಜೋಶಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಪರಿಷತ್‌ನ ಸದಸ್ಯರಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.