8ನೇ ವೇತನ ಆಯೋಗಕ್ಕೆ ಚೊಚ್ಚಲ ಮಹಿಳಾ ಸಾರಥಿ: ನ್ಯಾ. ರಂಜನಾ ದೇಸಾಯಿ ನೇಮಕ

ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶದ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡುವ ಡಿಲಿಮಿಟೇಶನ್ ಆಯೋಗದ ಅಧ್ಯಕ್ಷೆಯಾಗಿಯೂ ರಂಜನಾ ಅವರು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Update: 2025-10-28 12:59 GMT
Click the Play button to listen to article

ಕೇಂದ್ರ ಸರ್ಕಾರದ ವೇತನ ಆಯೋಗದ ಇತಿಹಾಸದಲ್ಲಿಯೇ ಹೊಸ ಅಧ್ಯಾಯ ಬರೆಯುವ ಮೂಲಕ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು 8ನೇ ಕೇಂದ್ರ ವೇತನ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಮೂಲಕ, ಕೋಟ್ಯಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನವನ್ನು ಪರಿಷ್ಕರಿಸುವ ಈ ಮಹತ್ವದ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಭಾರತದ ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರು, ದೇಶದ ಹಲವು ಕಠಿಣ ಮತ್ತು ಮಹತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಹೊಂದಿದ್ದಾರೆ. ಅವರು ವೃತ್ತಿಜೀವನದ ಕೆಲವು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಬಾಂಬೆ ಹೈಕೋರ್ಟ್‌ನಿಂದ ವೃತ್ತಿ ಆರಂಭಿಸಿ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಹಿರಿಮೆ ಅವರದ್ದು. ಈ ಹಿಂದೆ, ಭಾರತೀಯ ಪತ್ರಿಕಾ ಮಂಡಳಿಯ (PCI) ಅಧ್ಯಕ್ಷೆಯಾಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಕೀರ್ತಿಗೂ ಪಾತ್ರರಾಗಿದ್ದರು.

ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶದ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡುವ ಡಿಲಿಮಿಟೇಶನ್ ಆಯೋಗದ ಅಧ್ಯಕ್ಷೆಯಾಗಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಮಹತ್ವದ ನೇಮಕಾತಿ ಏಕೆ?

ಕೇವಲ ಸಾಂಕೇತಿಕವಾಗಿ ಮಾತ್ರವಲ್ಲದೆ, ಆಡಳಿತಾತ್ಮಕ ದಕ್ಷತೆ ಮತ್ತು ನ್ಯಾಯಾಂಗ ನಿಷ್ಪಕ್ಷಪಾತದ ದೃಷ್ಟಿಯಿಂದಲೂ ನ್ಯಾಯಮೂರ್ತಿ ದೇಸಾಯಿ ಅವರ ನೇಮಕಾತಿ ಮಹತ್ವ ಪಡೆದಿದೆ. ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69 ಲಕ್ಷ ಪಿಂಚಣಿದಾರರ ಭವಿಷ್ಯವನ್ನು ನಿರ್ಧರಿಸುವ, ಹಾಗೂ ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ವೇತನ ಆಯೋಗದ ಚುಕ್ಕಾಣಿ ಹಿಡಿಯಲು ಅವರ ಅಪಾರ ಅನುಭವವೇ ಶ್ರೀರಕ್ಷೆ.

ನ್ಯಾಯಮೂರ್ತಿ ದೇಸಾಯಿ ಅವರು, "ನ್ಯಾಯಾಂಗ ವೃತ್ತಿಯಲ್ಲಿ ಮಹಿಳೆಯಾಗಿ ತಾನು ಎದುರಿಸಿದ ಸವಾಲುಗಳ" ಬಗ್ಗೆ ಬರೆದುಕೊಂಡಿದ್ದು, ಇದೀಗ ದೇಶದ ಅತಿ ದೊಡ್ಡ ಆಡಳಿತಾತ್ಮಕ ಆಯೋಗವೊಂದಕ್ಕೆ ಮುಖ್ಯಸ್ಥರಾಗಿರುವುದು, ಮಹಿಳಾ ಸಬಲೀಕರಣದ ದೃಷ್ಟಿಯಿಂದಲೂ ಒಂದು ಮಹತ್ವದ ಹೆಜ್ಜೆ. ಅವರ ನೇಮಕ, ಸೂಕ್ಷ್ಮ ಮತ್ತು ಸಂಕೀರ್ಣ ವಿಷಯಗಳನ್ನು ನಿಭಾಯಿಸುವಲ್ಲಿ ಮಹಿಳಾ ನಾಯಕತ್ವದ ಸಾಮರ್ಥ್ಯಕ್ಕೆ ಸಂದ ಮನ್ನಣೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

Tags:    

Similar News