ಪೋಕ್ಸೋ ಪ್ರಕರಣ| ಕುತಂತ್ರ ಮಾಡಿದವರಿಗೆ ಜನತೆ ತಕ್ಕ ಪಾಠ: ಯಡಿಯೂರಪ್ಪ

Update: 2024-06-15 13:11 GMT

ಪೋಕ್ಸೋ ಆರೋಪದಲ್ಲಿ ಸಿಐಡಿ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ವಿಚಾರಣೆಗೆ ಹೋಗುವುದಾಗಿ ತಿಳಿಸಿದ್ದಾರೆ.

ಪ್ರಕರಣದ ವಿಚಾರಣೆಗೆ ಹಾಜರಾಗಲು ಸೂಚಿಸಿ ಸಿಐಡಿ ಪೊಲೀಸರು ಎರಡನೇ ನೋಟಿಸ್ ಜಾರಿ ಮಾಡಿದ್ದರಿಂದ ಮತ್ತು ನಗರದ 1ನೇ ತ್ವರಿತಗತಿ ನ್ಯಾಯಾಲಯ (ಪೋಕ್ಸೋ ವಿಶೇಷ ನ್ಯಾಯಾಲಯ) ಜಾಮೀನು ರಹಿತ ಬಂಧನ ವಾರಂಟ್​​ ಜಾರಿ ಮಾಡಿದ ಹಿನ್ನೆಲೆಯಲ್ಲಿ ಯಡಿಯೂರಪ್ಪಗೆ ಬಂಧನ ಭೀತಿ ಎದುರಾಗಿತ್ತು. ಆದರೆ, ಹೈಕೋರ್ಟ್ ಅವರ ಬಂಧನಕ್ಕೆ ತಡೆ ನೀಡಿ ಜೂನ್‌ 17 ರಂದು ಹಾಜರಾಗುವಂತೆ ಸೂಚಿಸಿತ್ತು. 

ಜಾಮೀನು ರಹಿತ ಬಂಧನ ವಾರಂಟ್​​ ಜಾರಿ ಮಾಡಿದ ವಿಚಾರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು, ʻʻನಿಗದಿತ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಹೋಗಿದ್ದೆ. 17 ರಂದು ವಿಚಾರಣೆಗೆ ಬರುವುದಾಗಿ ನಾನು ಮೊದಲೇ ತಿಳಿಸಿದ್ದೆ. ಹೈಕೋರ್ಟ್ ಸಹ ತಡೆಯಾಜ್ಞೆ ‌ನೀಡಿದೆ. ಸೋಮವಾರ ನಾನು ವಿಚಾರಣೆಗೆ ಹೋಗುತ್ತಿದ್ದೇನೆʼʼ ಎಂದರು.

ʻʻಅನಾವಶ್ಯಕವಾಗಿ ಗೊಂದಲ ಉಂಟು ಮಾಡುವ ಕೆಲಸ ಮಾಡಿದ್ದರು. ನಾನು ಯಾರ ಮೇಲೂ ದೂರುವುದಿಲ್ಲ. ಕಾಲವೇ ಎಲ್ಲವನ್ನು ತೀರ್ಮಾನ ಮಾಡಲಿದೆ, ವಾಸ್ತವ ಏನು ಎನ್ನುವುದು ಜನರಿಗೆ ಗೊತ್ತಿದೆ. ಯಾರು ಕುತಂತ್ರ ಮಾಡ್ತಿದ್ದಾರೋ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆʼʼ ಎಂದು ಹೇಳಿದರು.

ಬಂಧನ ಭೀತಿಯಿಂದ ಯಡಿಯೂರಪ್ಪ ನಿರಾಳ

ಪೋಕ್ಸೋ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಕಾರಣ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಐಡಿ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದರು. ಶುಕ್ರವಾರದಂದು ಹೈಕೋರ್ಟ್ ಬಂಧಿಸದಂತೆ ನಿರ್ದೆಶನ ನೀಡಿದೆ. ಹಾಗಾಗಿ ಅವರು ಬಂಧನ ಭೀತಿಯಿಂದ ನಿರಾಳರಾಗಿದ್ದಾರೆ.

ಪ್ರಕರಣ ರದ್ದು ಕೋರಿ ಮತ್ತು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಶುಕ್ರವಾರ ಈ ಆದೇಶ ನೀಡಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ನ್ಯಾಯ ಕೊಡಿಸುವಂತೆ ನೆರವು ಕೋರಿ ಕಳೆದ ಫೆಬ್ರವರಿಯಲ್ಲಿ ಭೇಟಿಯಾದಾಗ, ಯಡಿಯೂರಪ್ಪ ಅವರು ತಮ್ಮ ಕೋಣೆಯೊಳಗೆ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಬಾಲಕಿಯ ತಾಯಿ ಮಾರ್ಚ್‌ 14 ರಂದು ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ರಾಜ್ಯ ಸರ್ಕಾರ, ಸಿಐಡಿಗೆ ವಹಿಸಿತ್ತು.

ಆದರೆ, ಪ್ರಕರಣ ದಾಖಲಾಗಿ ಮೂರು ತಿಂಗಳು ಸಮೀಪಿಸಿದರೂ ಸಿಐಡಿ ಆರೋಪಿಯ ವಿಚಾರಣೆ ನಡೆಸದೇ ಇರುವುದು, ಘಟನೆ ನಡೆದ ಸ್ಥಳದ ಸಿಸಿಟಿವಿ ವಿಡಿಯೋ ಫೂಟೇಜ್‌ ಸಂಗ್ರಹಿಸದೇ ಇರುವುದು ಸೇರಿದಂತೆ ಹಲವು ಲೋಪಗಳನ್ನು ಪ್ರಶ್ನಿಸಿ, ಆರೋಪಿಯ ಬಂಧನಕ್ಕೆ ಆದೇಶಿಸುವಂತೆ ಕೋರಿ ಸಂತ್ರಸ್ತೆಯ ಸಹೋದರ ಹೈಕೋರ್ಟ್‌ ಮೊರೆ ಹೋಗಿದ್ದರು. ಆ ಬೆಳವಣಿಗೆಯ ಬೆನ್ನಲ್ಲೇ ಆರೋಪಿ ಬಿ ಎಸ್‌ ಯಡಿಯೂರಪ್ಪ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು. ಅಲ್ಲದೆ, ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೊಟೀಸ್‌ ಜಾರಿ ಮಾಡಿದ ಬಳಿಕ, ಜಾಮೀನು ಕೋರಿ ಯಡಿಯೂರಪ್ಪ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

ಈ ನಡುವೆ, ಗುರುವಾರ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ಪೋಕ್ಸೋ ನ್ಯಾಯಾಲಯ, ಯಡಿಯೂರಪ್ಪ ಬಂಧನಕ್ಕೆ ಜಾಮೀನುರಹಿತ ವಾರಂಟ್‌ ಹೊರಡಿಸಿತ್ತು. ಇದೀಗ ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸೋಮವಾರ(ಜೂ.17) ರವರೆಗೆ ಯಡಿಯೂರಪ್ಪ ಅವರಿಗೆ ಪ್ರಕರಣದಲ್ಲಿ   ರಿಲೀಫ್‌ ಸಿಕ್ಕಿದೆ.

Tags:    

Similar News