POCSO Against Teacher | ವಸತಿ ಶಾಲೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ: ಶಿಕ್ಷಕ ಅರೆಸ್ಟ್​

ಶಿವಮೊಗ್ಗ ಜಿಲ್ಲೆಯ ವಸತಿ ಶಾಲೆಯೊಂದರ ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕ್ಸೊ ಪ್ರಕರಣದಡಿ ನೃತ್ಯ ಶಿಕ್ಷಕನೊಬ್ಬನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

Update: 2024-08-22 08:35 GMT
ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತೀರ್ಥಹಳ್ಳಿ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಶಾಲೆಯ ನೃತ್ಯ ಶಿಕ್ಷಕನನ್ನು ಬಂಧಿಸಿದ್ದಾರೆ.

ದೂರು ದಾಖಲಾಗುತ್ತಲೇ ತಲೆ ಮರೆಸಿಕೊಂಡಿದ್ದ ಶಿಕ್ಷಕನನ್ನು ಬೆಂಗಳೂರು ಬಳಿಯ ನೆಲಮಂಗಲದಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. 45 ವರ್ಷದ ಆರೋಪಿ ಅದೇ ಶಾಲೆಯಲ್ಲಿ ಕಳೆದ ಏಳು ತಿಂಗಳಿಂದ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿನಿಯರ ಹೇಳಿಕೆ ಆಧರಿಸಿ ಶಾಲೆಯ ಪ್ರಾಚಾರ್ಯರು ಪೊಲೀಸರಿಗೆ ದೂರು ನೀಡಿದ್ದರು.

'ವಸತಿ ಶಾಲೆಯ 21 ಜನ ವಿದ್ಯಾರ್ಥಿನಿಯರಲ್ಲಿ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಐವರು ದೂರು ನೀಡಿದ್ದಾರೆ. ತಕ್ಷಣ ಎಫ್ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ" ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. 

"ವಸತಿ ಶಾಲೆಯ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆ ಹಾಗೂ ಆಪ್ತ ಸಮಾಲೋಚನೆಗೆ ಒಳಪಡಿಸಿದ್ದೇವೆ. ಅವರಲ್ಲಿ ಯಾರಾದರೂ ಲೈಂಗಿಕ ದೌರ್ಜನ್ಯದ ಸಂತ್ರಸ್ತರು ಇದ್ದಾರೆಯೇ ಇಲ್ಲವೇ ಕೃತ್ಯಕ್ಕೆ ಸಾಕ್ಷಿಗಳಾಗಿರುವವರೇ ಎಂಬುದನ್ನು ಖಚಿತಪಡಿಸಿಕೊಂಡು ಮತ್ತಷ್ಟು ಪ್ರಕರಣ ದಾಖಲಿಸಿಕೊಳ್ಳಲಿದ್ದೇವೆ" ಎಂದು ಅವರು ಹೇಳಿದ್ದಾರೆ. 

1098 ಸಂಖ್ಯೆಗೆ ದೂರು ನೀಡಿ

ಅಲ್ಲದೆ, ಜಿಲ್ಲೆಯ ಯಾವುದೇ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳದಂತಹ ಕೃತ್ಯಗಳು ಕಂಡುಬಂದಲ್ಲಿ, ತಕ್ಷಣ 1098 ಸಂಖ್ಯೆಗೆ, ಇಲ್ಲವೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಕ್ಕಳು ಮತ್ತು ಪಾಲಕರಲ್ಲಿ ಮನವಿ ಮಾಡಿದ್ದಾರೆ.

Tags:    

Similar News