North-South Divide | ದಕ್ಷಿಣ ರಾಜ್ಯಗಳ ಅಭಿವೃದ್ಧಿ ಕಡೆಗಣಿಸಿದ ಪ್ರಧಾನಿ ಮೋದಿ: ಸಿಎಂ ಸಿದ್ದರಾಮಯ್ಯ ಆರೋಪ

ಸೆಮಿ ಕಂಡಕ್ಟರ್ ವಲಯದಿಂದ ಹಿಡಿದು ಪ್ರಮುಖ ಉತ್ಪಾದನಾ ಕೇಂದ್ರಗಳವರೆಗಿನ ಹೂಡಿಕೆ ವಿಷಯದಲ್ಲಿ ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳನ್ನು ದೂರ ಇಟ್ಟಿದ್ದಾರೆ.;

Update: 2024-11-09 13:33 GMT

ಪ್ರಧಾನಿ ನರೇಂದ್ರ ಮೋದಿ ಅವರಿಗೆ ತವರು ರಾಜ್ಯದ ಮೇಲೆ ಒಲವು ಹೆಚ್ಚಾಗಿರುವ ಕಾರಣ ಪ್ರಮುಖ ಯೋಜನೆಗಳ ವಿಚಾರದಲ್ಲಿ ದಕ್ಷಿಣದ ರಾಜ್ಯಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಈ ಕುರಿತು 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿ ಟೀಕಿಸಿರುವ ಅವರು, ಅನುದಾನದ ವಿಚಾರವಾಗಿ ಕೇಂದ್ರ ಸರ್ಕಾರದ ತಾರತಮ್ಯ ಹಾಗೂ ರಾಜ್ಯದ ಬಿಜೆಪಿ ಸಂಸದರ ಧೋರಣೆಯನ್ನು ಖಂಡಿಸಿದ್ದಾರೆ.

ಸೆಮಿ ಕಂಡಕ್ಟರ್ ವಲಯದಿಂದ ಹಿಡಿದು ಪ್ರಮುಖ ಉತ್ಪಾದನಾ ಕೇಂದ್ರಗಳವರೆಗಿನ ಹೂಡಿಕೆ ವಿಷಯದಲ್ಲಿ ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳನ್ನು ದೂರ ಇಟ್ಟಿದ್ದಾರೆ. ಕೇಂದ್ರ ಸರ್ಕಾರದ ವಿಶೇಷ ಸಬ್ಸಿಡಿ ಹಾಗೂ ಪ್ರೋತ್ಸಾಹ ಧನಗಳನ್ನು ತವರು ರಾಜ್ಯಕ್ಕೆ ಧಾರಾಳವಾಗಿ ವರ್ಗಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ತಂತ್ರಜ್ಞಾನ ಹಾಗೂ ಉತ್ಪಾದನಾ ಪರಿಸರ ವ್ಯವಸ್ಥೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದೆ. ಆದರೆ, ಕೇಂದ್ರ ಸರ್ಕಾರ ನಿರ್ಲಕ್ಷ್ಯ ರಾಜ್ಯದ ಅಭಿವೃದ್ಧಿಯನ್ನು ನಿರ್ಲಕ್ಷಿಸುತ್ತಿದೆ. ರಾಜ್ಯದ ಬಿಜೆಪಿ ಸಂಸದರಿಗೆ ಇದನ್ನು ಪ್ರಶ್ನಿಸುವ ಹೊಣೆಗಾರಿಕೆ ಇಲ್ಲ. ಸಂಸದರ ಈ ಮೌನವು ರಾಜ್ಯದ ಹಿತಾಸಕ್ತಿಗೆ ಬಗೆದ ದ್ರೋಹವಾಗಿದೆ ಎಂದು ದೂರಿದ ಅವರು, ಇನ್ನಾದರೂ ಮೌನ ಮುರಿದು ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ಎಂದು ಸಲಹೆ ನೀಡಿದ್ದಾರೆ.

ಎಲ್ಲಾ ಜಾತಿ, ಧರ್ಮಗಳ ಬಡವರ ಪರವಾಗಿ ಕೆಲಸ ಮಾಡುತ್ತಿರುವ ನನ್ನನ್ನು ಪ್ರಧಾನಿ ಅವರು ಟಾರ್ಗೆಟ್ ಮಾಡಿದ್ದಾರೆ. ಕಳೆದ 11 ವರ್ಷಗಳಲ್ಲಿ ಮೋದಿ ಅವರು ಈ ದೇಶದ ಜನರಿಗೆ ಮಾಡಿರುವ ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ. ಜನರ ಬೆಂಬಲ ನನ್ನ ಜೊತೆ ಇರುವವರೆಗೆ ಈ ಯಾವುದಕ್ಕೂ ನಾನು ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ನಡುವೆ ಸಂಡೂರಿನ ಡಿ.ಅಂತಾಪುರದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಮಹಾತ್ಮಗಾಂಧಿ ಅವರನ್ನು ಕೊಂದ ಗೋಡ್ಸೆಯಾಗಲಿ, ಹಾಗೆಯೇ ಸಾವರ್ಕರ್, ಗೋಳ್ವಾಲ್ಕರ್ ಆಗಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ, ಆರ್‌ಎಸ್‌ಎಸ್‌  ಪರಿವಾರದ ಯಾರೊಬ್ಬರೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಉದಾಹರಣೆ ಇದೆಯಾ? ನಾವು ಕೊಟ್ಟ ಕಲ್ಯಾಣ ಕಾರ್ಯಕ್ರಮಗಳು ಪ್ರತಿಯೊಂದು ಮನೆ ತಲುಪಿವೆ. ಬಿಜೆಪಿ ಯವರದ್ದು ಕೇವಲ ಸುಳ್ಳುಗಳು ಮಾತ್ರ ಮನೆ ಮನೆ ತಲುಪುತ್ತಿವೆ ಎಂದು ಸಿಎಂ ವ್ಯಂಗ್ಯವಾಡಿದರು.

Tags:    

Similar News