Petrol Price Hike | ಕೇಂದ್ರದತ್ತ 'ದಕ್ಷಿಣಾಸ್ತ್ರʼ ಪ್ರಯೋಗಕ್ಕೆ ಕಾಂಗ್ರೆಸ್ ಯೋಜನೆ
ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ರಾಜ್ಯ ಸರ್ಕಾರಕ್ಕಿರುವ ಸವಾಲನ್ನು ನಿವಾರಿಸಲು ಪೆಟ್ರೋಲ್ ಮತ್ತು ಡೀಸೆಲ್ ಸೆಸ್ ಏರಿಕೆ ಮಾಡಿರುವ ನಿರ್ಧಾರದ ಸಮರ್ಥನೆಗೆ ಮತ್ತು ಎಲ್ಲ ಸಮಸ್ಯೆಗಳಿಗೆ ಕೇಂದ್ರ ಕಾರಣವೆಂದು ಸಾಬೀತುಪಡಿಸಲು ಸರ್ಕಾರ ಮುಂದಾಗಿದೆ;
Petrol Price Hike | ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮಾರಾಟ ತೆರಿಗೆ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಬೆಲೆ ಏರಿಕೆ ಅಸ್ತ್ರ ಹೂಡಿ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಕೂಡಾ ತಿರುಗೇಟು ನೀಡಲು ಮುಂದಾಗಿದೆ. ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಂದ ಕೇಂದ್ರ ಸಂಗ್ರಹಿಸುವ ತೆರಿಗೆಯ ಸಮಪಾಲನ್ನು ನೀಡದಿರುವ ಬಗ್ಗೆ ಕೇಂದ್ರದ ವಿರುದ್ಧ ಮತ್ತೆ ದಕ್ಷಿಣ ರಾಜ್ಯಗಳ ಸಂಘಟಿತ ಹೋರಾಟ ನಡೆಸಲು ಸಿದ್ಧತೆ ನಡೆಸಿದೆ.
ಈ ಮೂಲಕ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ರಾಜ್ಯ ಸರ್ಕಾರಕ್ಕಿರುವ ಸವಾಲನ್ನು ನಿವಾರಿಸಲು ಪೆಟ್ರೋಲ್ ಮತ್ತು ಡೀಸೆಲ್ ಸೆಸ್ ಏರಿಕೆ ಮಾಡಿರುವ ನಿರ್ಧಾರದ ಸಮರ್ಥನೆಗೆ ಮತ್ತು ಎಲ್ಲ ಸಮಸ್ಯೆಗಳಿಗೆ ಕೇಂದ್ರ ಕಾರಣವೆಂದು ಸಾಬೀತುಪಡಿಸಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಈ ಕಾರಣಕ್ಕೆ ಕೇಂದ್ರ ಸರ್ಕಾರ ವರ್ಷಕ್ಕೆ 2,50,000 ಕೋಟಿ ರೂ. ಸೆಸ್ ಸಂಗ್ರಹಿಸುತ್ತಿದ್ದರೂ ಕರ್ಣಾಟಕಕ್ಕೆ ಹಂಚಿಕೆಯಲ್ಲಿ ಅನ್ಯಾಯ ಮಾಡಿದೆ ಎಂದು ಆಕ್ಷೇಪಿಸಿದೆ. ಹಾಗೂ ದಕ್ಷಿಣ ಭಾರತ ರಾಜ್ಯಗಳಿಗೆ ಆಗುತ್ತಿರುವ ಕೇಂದ್ರದ ತಾರತಮ್ಯವನ್ನು ಮತ್ತೆ ಎತ್ತಿತೋರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಸಿದ್ದರಾಮಯ್ಯ ಸಂಪುಟದ ಹಿರಿಯ ಸಚಿವರೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.
ಈ ಮೂಲಕ ಕೇಂದ್ರ ಸಂಗ್ರಹಿಸುತ್ತಿರುವ ಅಗಾಧ ಸೆಸ್‌ನ ಹಂಚಿಕೆಯನ್ನು ಕರ್ನಾಟಕ, ತಮಿಳುನಾಡು, ತೆಲಂಗಾಣದಂತಹ ರಾಜುಗಳಿಗೆ ನ್ಯಾಯೋಚಿತ ಪಾಲು ನೀಡದೆ ಉತ್ತರಪ್ರದೇಶ, ಬಿಹಾರದಂತಹ ರಾಜ್ಯಗಳಿಗೆ ನೀಡಲಾಗುತ್ತಿದೆ ಎಂದು ಕೇಂದ್ರದತ್ತ ಕಾಂಗ್ರೆಸ್ ಬೊಟ್ಟು ಮಾಡಿದೆ. ಲೋಕಸಭಾ ಚುನಾವಣೆಗಿಂತ ಮುಂಚೆ ಕೇಂದ್ರದ ತೆರಿಗೆ ಹಣ ಹಂಚಿಕೆ ತಾರತಮ್ಯದ ವಿರುದ್ಧ ಮಾಡಿದ್ದ ಹೋರಾಟವನ್ನು ಮತ್ತೆ ಮುಂದುವರಿಸುವ ಸಂದೇಶವನ್ನು ಕೇಂದ್ರದ ಬಿಜೆಪಿಗೆ ರವಾನಿಸಲು ಮುಂದಾಗಿದೆ.
ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ತಿಣುಕಾಡುತ್ತಿರುವ ಕಾಂಗ್ರೆಸ್ ತಿಜೋರಿ ಭರ್ತಿಗೆ ಈ ಉಪಕ್ರಮಕ್ಕೆ ಮುಂದಾಗಿದೆ. ಗ್ಯಾರಂಟಿಗಾಗಿ 55,000 ಕೋಟಿ ರೂ. ಮೀಸಲಿಟ್ಟಿರುವುದರಿಂದ ಹಣ ಕೊರತೆಯಾಗಿ ಸಂಬಳ ಕೊಡಲು ದುಡ್ಡಿಲ್ಲ. ಆದ್ದರಿಂದ ಜನರ ಮೇಲೆ 3-4 ಸಾವಿರ ಕೋಟಿ ರೂ. ಹೊರೆ ಹಾಕಿ ತೈಲ ದರ ಏರಿಸಲಾಗಿದೆ. ಇದರಿಂದ ಸಹಜವಾಗಿ ತರಕಾರಿ, ಹಾಲು, ಹಣ್ಣು, ಕೊನೆಗೆ ಟೀ ಕಾಫಿಗೂ ದರ ಏರಲಿದೆ. ನಾಳೆಯಿಂದಲೇ ಆಟೊರಿಕ್ಷಾದವರು, ಗೂಡ್ಸ್ ಗಾಡಿಗಳು ದರ ಏರಿಕೆ ಮಾಡುತ್ತಾರೆ ಎಂದು ಬಿಜೆಪಿ ಟೀಕಿಸಿದೆ. ಜತೆಗೆ ಕೆಂದ್ರದ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಒಂದು ರೂಪಾಯಿ ಬೆಲೆ ಏರಿಕೆಯಾದಾಗ ಆಗಿನ ರಾಜ್ಯದ ವಿರೋಧ ಪಕ್ಷ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಕೂಟರ್ ಶವ ಯಾತ್ರೆ ಮಾಡಿದ್ದರು. ಈಗ ಅಧಿಕಾರದಲ್ಲಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಏನು ಮಾಡುತ್ತಾರೆ ಎಂದು ಬಿಜೆಪಿ ಪ್ರಶ್ನಿಸುತ್ತಿದೆ.
ಮುಖಭಂಗ ತಪ್ಪಿಸಲು ಮುಂದಾಗಿರುವ ಕಾಂಗ್ರೆಸ್, ಈ ಎಲ್ಲಾ ಘಟನೆಗಳಿಗೆ ಕೇಂದ್ರದ ಬಿಜೆಪಿಯತ್ತ ʼದಕ್ಷಿಣಾಸ್ತ್ರʼ ಪ್ರಯೋಗಿಸಲು ಮುಂದಾಗಿದೆ. ದಕ್ಷಿಣ ರಾಜ್ಯಗಳಿಂದ ಆದ ತೆರಿಗೆ ಸಂಗ್ರಹವನ್ನು ಉತ್ತರದ ರಾಜ್ಯಗಳಿಗೆ ಹೆಚ್ಚು ಪ್ರಮಾಣದಲ್ಲಿ ಹಂಚುವ ಮತ್ತು ದಕ್ಷಿಣ ರಾಜ್ಯಗಳಿಗೆ ಕಡಿಮೆ ಹಂಚಿಕೆ ಮಾಡುವ ನೀತಿಯ ವಿರುದ್ಧ ಹಿಂದೆ ರಾಜ್ಯ ಸರ್ಕಾರ ಪ್ರತಿಭಟನೆ ನಡೆಸಿತ್ತು. ಜತೆಗೆ ಕರ್ನಾಟಕವನ್ನು ಇತರ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳ ರಾಜ್ಯಗಳೂ ಬೆಂಬಲಿಸಿದ್ದವು. ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟ ಸಮೇತ ದೆಹಲಿಗೆ ತೆರಳಿ ʼಚಲೋ ದೆಹಲಿʼ ಪ್ರತಿಭಟನೆ ನಡೆಸಿದ್ದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬೆಂಬಲಿಸಿದ್ದರು.
ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅದನ್ನು ಮುಂದುವರಿಸುವುದರ ಜತೆಗೆ ಇತರ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಹಣಕಾಸು ಮುಗ್ಗಟ್ಟು ರಾಜ್ಯಕ್ಕೆ ಎದರಾಗಿರುವುದರಿಂದ ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಪಾಲನ್ನು ಪಡೆಯಲು ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಇದರ ಜತೆಗೆ INDIA ಒಕ್ಕೂಟದ ಸದಸ್ಯರೇ ಆದ ತಮಿಳುನಾಡು ಮತ್ತು ಕೇರಳ ಹಾಗೂ ತನ್ನದೇ ಪಕ್ಷದ ತೆಲಂಗಾಣ ಸರ್ಕಾರಗಳ ಬೆಂಬಲವನ್ನೂ ಪಡೆಯಲು ರಾಝ್ಯ ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ನೀಡಿರುವ ಹೇಳಿಕೆಗಳು ಕೇಂದ್ರದ ವಿರುದ್ಧ ತಿರುಗಿಬೀಳುವ ಇರಾದೆಯನ್ನು ಸ್ಪಷ್ಟಪಡಿಸಿವೆ.. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಪ್ರತ್ಯೇಕ ಹೇಳಿಕೆಗಳಲ್ಲಿ ಕೇಂದ್ರ ಸರ್ಕಾರದ ನೀತಿಯಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಅಂಕಿ ಅಂಶಗಳ ಸಹಿತ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
"ಕೇಂದ್ರ ಸರಕಾರವು ವರ್ಷಕ್ಕೆ 2,50,000 ಕೋಟಿ ರೂ.ಗಳಷ್ಟು ಅಗಾಧ ಸೆಸ್ ಸಂಗ್ರಹಿಸುತ್ತಿದ್ದರೂ ಅದರ ಹಂಚಿಕೆಯಲ್ಲಿ ಕರ್ನಾಟಕದಂತಹ ಪುರೋಗಾಮಿ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಸೆಸ್/ತೆರಿಗೆ ಪಾವತಿಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣದಂತಹ ರಾಜ್ಯಗಳು ಮುಂಚೂಣಿಯಲ್ಲಿವೆ. ಆದರೆ, ಇದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರದಿಂದ ಈ ರಾಜ್ಯಗಳಿಗೆ ನ್ಯಾಯೋಚಿತ ಪಾಲು ಬರುತ್ತಿಲ್ಲ. ಬದಲಿಗೆ ಹೆಚ್ಚಿನ ಪಾಲೆಲ್ಲ ಉತ್ತರಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಿಗೆ ಹೋಗುತ್ತಿದೆ. ಇದು ಖಂಡಿತವಾಗಿಯೂ ಪ್ರಶ್ನಾರ್ಹ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ. ತಮ್ಮ ಹೇಳಿಕೆಯನ್ನು ಸಾಮಾಜಿಕ ಜಾಲತಾಣ x ನಲ್ಲಿ ಪ್ರಕಟಿಸಿದ್ದು, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಾದ ಎಂ ಕೆ ಸ್ಟಾಲಿನ್ ಮತ್ತು ರೇವಂತ್ ರೆಡ್ಡಿ ಮುಂತಾದವರಿಗೆ ಟ್ಯಾಗ್ ಮಾಡಿದ್ದಾರೆ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕರ್ನಾಟಕದಂತಹ ರಾಜ್ಯಗಳು ತಮಗೆ ಬರಬೇಕಾದ ತೆರಿಗೆ ಪಾಲಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಬೇಕಾದ ಪ್ರಮೇಯ ಬರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಪಾಟೀಲ ಹೇಳಿಕೆಗೆ ಪೂರ್ವಭಾವಿಯಾಗಿ ಸಿದ್ದರಾಮಯ್ಯ ಅವರು ಪ್ರಕಟನೆ ನೀಡಿ, ರಾಜ್ಯದ ಸಂಪನ್ಮೂಲಗಳನ್ನು ಇತರೆ ರಾಜ್ಯಗಳಿಗೆ ಹಂಚಿಕೆ ಮಾಡುವ ದುರುದ್ದೇಶದಿಂದ ಕೇಂದ್ರ ಸರ್ಕಾರ ಹಿಂದಿನ ರಾಜ್ಯದ ಬಿಜೆಪಿ ಸರ್ಕಾರವನ್ನು ಬಳಸಿಕೊಂಡು ಕರ್ನಾಟಕದಲ್ಲಿ ಮೌಲ್ಯವರ್ಧಿತ ತೆರಿಗೆ ದರವನ್ನು ಕಡಿತಗೊಳಿಸುವಂತೆ ಮಾಡಿ, ತನ್ನ ಪಾಲಿನ ತೆರಿಗೆ ಹೆಚ್ಚಳ ಮಾಡುವ ಮೂಲಕ ಲಕ್ಷಾಂತರ ಕೋಟಿ ಸಂಗ್ರಹಿಸಿತ್ತು. ಈ ಅನರ್ಥ ನೀತಿಯಿಂದಾಗಿ ರಾಜ್ಯದ ರಾಜಸ್ವ ಸಂಗ್ರಹಕ್ಕೆ ದೊಡ್ಡ ಹೊಡೆತ ಬಿದ್ದರೆ, ಇದೇ ವೇಳೆ ಕೇಂದ್ರವು ಕನ್ನಡಿಗರಿಗೆ ದ್ರೋಹ ಬಗೆದು ಭರಪೂರ ತೆರಿಗೆ ಸಂಗ್ರಹಿಸಿತ್ತು ಎಂದು ಕೇಂದ್ರದ ನೀತಿಯನ್ನು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ರೂ. 9.21 ರಿಂದ ರೂ. 32.98 ಗೆ ಹಾಗೂ ಡೀಸೆಲ್ ಮೇಲೆ ರೂ. 3.45 ರಿಂದ ರೂ. 31.84 ಕ್ಕೆ ಹೆಚ್ಚಳ ಮಾಡಿತ್ತು. ಇದು ನಿಜವಾಗಿಯೂ ಜನರ ಮೇಲಿನ ಹೊರೆ. ಆಗಾಗ್ಗೆ ಕೇಂದ್ರ ಸರ್ಕಾರವು ತೆರಿಗೆ ಕಡಿತಗೊಳಿಸಿದ ಹೊರತಾಗಿಯೂ ಈಗಿನ ಅಬಕಾರಿ ಸುಂಕವು ಪೆಟ್ರೋಲ್ ಮೇಲೆ ರೂ. 19.9 ಹಾಗೂ ಡೀಸೆಲ್ ಮೇಲೆ ರೂ. 15.8 ಇದೆ. ನರೇಂದ್ರ ಮೋದಿ ಅವರ ಸರ್ಕಾರ ಜನಹಿತದ ದೃಷ್ಟಿಯಿಂದ ಈ ತೆರಿಗೆಯನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಗೆ ಸಂಬಂಧಿಸಿ ಬಿಜೆಪಿ ದಾಳಿ ನಡೆಸಲು ಸಜ್ಜಾಗುತ್ತಿರುವ ಬೆನ್ನಿಗೇ ರಾಜ್ಯ ಸೆಸ್ ಏರಿಕೆಗೆ ಕೇಂದ್ರವೇ ಕಾರಣ ಎಂಬ ವಾದಕ್ಕೆ ರಾಜ್ಯ ಕಾಂಗ್ರೆಸ್ ಮುಂದಾಗಿದೆ.