ಕನ್ನಡಿಗರಿಗೆ ಮೀಸಲಾತಿ | ಸರ್ಕಾರದ ವಿಧೇಯಕ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ
ರಾಜ್ಯದಲ್ಲಿ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಖಾಸಗಿ ಸಂಸ್ಥೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ಸರ್ಕಾರ ರೂಪಿಸಿರುವ ಮಸೂದೆ ವಿಚಾರ ಕರ್ನಾಟಕ ಹೈಕೋರ್ಟ್ ಮಟ್ಟಿಲೇರಿದೆ.;
ರಾಜ್ಯದಲ್ಲಿ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಖಾಸಗಿ ಸಂಸ್ಥೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿಗೆ ಸಂಬಂಧಿಸಿದ ಮಸೂದೆ ವಿಚಾರ ಈಗ ಹೈಕೋರ್ಟ್ ಮಟ್ಟಿಲೇರಿದೆ.
ಉದ್ದೇಶಿತ ಕಾಯಿದೆ ಪ್ರಶ್ನಿಸಿ ನಗರದ ಬಿಳೇಕಹಳ್ಳಿಯ ಲೆಕ್ಕ ಪರಿಶೋಧಕಿ ಆರ್. ಅಮೃತಲಕ್ಷ್ಮಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಆ.7ಕ್ಕೆ ನಿಗದಿಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ಹಾಜರಾದ ಅರ್ಜಿದಾರ ಪರ ವಕೀಲರು, ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ, ಆ.7ಕ್ಕೆ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.
ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಕರ್ನಾಟಕ ರಾಜ್ಯದ ಕೈಗಾರಿಕೆಗಳು- ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಮಸೂದೆ- 2024ಕ್ಕೆ ಜು.16ರಂದು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ, ವಿಧಾನಮಂಡಲ ಅಧಿವೇಶನದಲ್ಲಿ ಕಾಯಿದೆಯನ್ನು ಮಂಡಿಸಲು ಸರ್ಕಾರ ಉದ್ದೇಶಿಸಿತ್ತು. ಆದರೆ, ಮಸೂದೆಯ ವಿರುದ್ಧ ಉದ್ಯಮ ವಲಯದಿಂದ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಸದ್ಯಕ್ಕೆ ಮಸೂದೆಯನ್ನು ವಾಪಸ್ ಪಡೆದಿರುವುದಾಗಿ ಹೇಳಿತ್ತು.
ಇದೀಗ ಮಸೂದೆಯು ಸಂವಿಧಾನದ 19 (1) (ಡಿ), 19 (1) (ಇ), ಜಿ ಮತ್ತು 14ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಉದ್ದೇಶಿತ ಮಸೂದೆಯನ್ನು ಹಿಂಪಡೆಯುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಈ ಮಸೂದೆ ಅನುಷ್ಠಾನಗೊಂಡಲ್ಲಿ ಇದು ಸಹಜ ನ್ಯಾಯತತ್ವಗಳ ಉಲ್ಲಂಘನೆಯಾಗುತ್ತದೆ. ಈ ಕಾಯ್ದೆಯನ್ನು ಜಾರಿಗೊಳಿಸುವ ಸಾಮರ್ಥ್ಯವನ್ನು ರಾಜ್ಯವು ಶಾಸಕಾಂಗ ಹೊಂದಿಲ್ಲ. ಒಂದೊಮ್ಮೆ ಈ ಮಸೂದೆ ಜಾರಿಗೆ ಬಂದಲ್ಲಿ ರಾಜ್ಯದ ಕೈಗಾರಿಕಾ ವಲಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಹಲವು ಸಾಂವಿಧಾನಿಕ ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ. ಕೆಟ್ಟ ಪರಂಪರೆಗೂ ನಾಂದಿ ಹಾಡಿದಂತಾಗುತ್ತದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.