ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿ; ಪಿಡಿಒ ಅಮಾನತು ಆದೇಶಕ್ಕೆ ಕೆಎಟಿ ತಡೆ

ಕೆಎಟಿ ಆದೇಶವು ಆರ್‌ಎಸ್‌ಎಸ್‌ ಸಂಘಟನೆಯ ರಾಷ್ಟ್ರ ನಿರ್ಮಾಣದ ಆದರ್ಶಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನು ಕಾಂಗ್ರೆಸ್ ಸರ್ಕಾರಕ್ಕೆ ನೀಡಿದಂತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

Update: 2025-10-30 10:49 GMT

ಸಾಂದರ್ಭಿಕ ಚಿತ್ರ

Click the Play button to listen to article

ರಾಯಚೂರು ಜಿಲ್ಲೆ ಲಿಂಗಸಗೂರಿನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಪಥಸಂಚಲನದಲ್ಲಿ ಭಾಗಿಯಾದ ಕಾರಣ ಪಿಡಿಒ ಪ್ರವೀಣ್ ಕುಮಾರ್ ಕೆ.ಪಿ. ಅವರ ಅಮಾನತು ಆದೇಶಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ತಡೆ ನೀಡಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.

ಆರ್‌ಎಸ್‌ಎಸ್‌ ಸೇರಿ ಯಾವುದೇ ಸಂಘಟನೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದು ಎಂದು ರಾಜ್ಯ ಸರ್ಕಾರ ಅ.18 ರಂದು ಆದೇಶ ಹೊರಡಿಸಿತ್ತು. ಆದರೆ, ಅದಕ್ಕೂ ಮುನ್ನ ಪಥಸಂಚಲನದಲ್ಲಿ ಭಾಗವಹಿಸಿದ್ದರೆಂಬ ಕಾರಣಕ್ಕೆ ಪಿಡಿಒ ಪ್ರವೀಣ್ ಕುಮಾರ್ ಕೆ.ಪಿ. ಅವರನ್ನು ಅಮಾನತು ಮಾಡಲಾಗಿತ್ತು. ಈ ಆದೇಶವನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ನೇತೃತ್ವದ ಕಾನೂನು ತಂಡವು ಕೆಎಟಿಯಲ್ಲಿ ಪ್ರಶ್ನಿಸಿತ್ತು.   

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಕೆಎಟಿ ಆದೇಶವನ್ನು ಹಂಚಿಕೊಂಡಿರುವ ತೇಜಸ್ವಿ ಸೂರ್ಯ, ಯಾವುದೇ ರೀತಿಯ ಬೆದರಿಕೆಯು ಆರ್‌ಎಸ್‌ಎಸ್‌ನ ರಾಷ್ಟ್ರ ನಿರ್ಮಾಣದ ಆದರ್ಶಗಳನ್ನು ತಡೆಯಲು ಸಾಧ್ಯವಿಲ್ಲ. ರಾಜ್ಯ ಸರ್ಕಾರಕ್ಕೆ ಈ ಆದೇಶದಿಂದ ತೀವ್ರ ಮುಖಭಂಗವಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಘಟನೆ?

ಆರ್‌ಎಸ್‌ಎಸ್‌ ಶತಮಾನೋತ್ಸವದ ಪಥಸಂಚಲನದಲ್ಲಿ ಪಿಡಿಒ ಪ್ರವೀಣ್ ಕುಮಾರ್ ಕೆ.ಪಿ. ಗಣವೇಷಧಾರಿಯಾಗಿ ಅ.12ರಂದು ಭಾಗವಹಿಸಿದ್ದರು. ಇದು ಕರ್ನಾಟಕ ನಾಗರಿಕ ಸೇವಾ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಿ ಸರ್ಕಾರಿ ನೌಕರನಿಗೆ ತರವಲ್ಲದ ರೀತಿ ನಡೆದುಕೊಂಡಿದ್ದಕ್ಕಾಗಿ ಇಲಾಖಾ ತನಿಖೆ ಕಾಯ್ದಿರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಅವರು ಅ.17ರಂದು ಪಿಡಿಒ ಪ್ರವೀಣ್ ಕುಮಾರ್ ಕೆ.ಪಿ. ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

ಸಿಎಂಗೆ ಪತ್ರ ಬರೆದಿದ್ದ ಸಚಿವ ಪ್ರಿಯಾಂಕ್‌ ಕರ್ಗೆ

ಯಾರೇ ಸರ್ಕಾರಿ ನೌಕರರು, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರಬಾರದು. ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರಬಾರದು. ಯಾವುದೇ ರಾಜಕೀಯ ಚಳವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸಬಾರದು. ಅದರ ಸಹಾಯಾರ್ಥ ಹಣಕಾಸು ವಂತಿಗೆ ಅಥವಾ ನೆರವು ನೀಡಬಾರದು ಎಂದು ಕೋರಿದ್ದರು.

ಸರ್ಕಾರಿ ಅಧಿಕಾರಿಗಳು ಸಂಘಟನೆಗಳಲ್ಲಿ ಭಾಗವಹಿಸದಂತೆ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದರೂ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಭಾಗವಹಿಸುತ್ತಿರುವುದನ್ನು ಗಮನಿಸಲಾಗಿದೆ. ಆದ್ದರಿಂದ ರಾಜ್ಯದ ಸರ್ಕಾರಿ ಅಧಿಕಾರಿ, ನೌಕರರು ಆರ್‌ಎಸ್‌ಎಸ್‌ ಹಾಗೂ ಇತರೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಇದನ್ನು ಉಲ್ಲಂಘಿಸುವ ಅಧಿಕಾರಿ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆ ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಆರ್‌ಎಸ್‌ಎಸ್‌ ಬೇಕಾದರೆ ನೌಕರಿಗೆ ರಾಜೀನಾಮೆ ನೀಡಿ

ರಾಜ್ಯದ ಕೆಲವೆಡೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಅದರ ಬಗ್ಗೆ ನನಗೂ ಮಾಹಿತಿ ಬಂದಿತ್ತು. ಸರ್ಕಾರಿ ನೌಕರರಾಗಿರುವಾಗ ನಿಯಮ ಪಾಲನೆ ಆಗಬೇಕು. ಗಣವೇಷ ಹಾಕಿಕೊಂಡು ಪಿಡಿಒ, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಆರೋಗ್ಯ ಅಧಿಕಾರಿಗಳು ಓಡಾಡಿದ್ದಾರೆ. ಅವರೆಲ್ಲರನ್ನು ಅಮಾನತು ಮಾಡಲಾಗುವುದು. ಆರ್‌ಸ್‌ಎಸ್‌ಗೆ ಸೇರಬೇಕು ಎಂಬ ಆಸೆಯಿದ್ದರೆ ನೌಕರಿ ಬಿಟ್ಟು ಸೇರಿಕೊಳ್ಳಿ. ನಿವೃತ್ತಿಯಾದ ಮೇಲೆ ಕೆಲವು ಐಎಎಸ್ ಅಧಿಕಾರಿಗಳು ಸಂಘಕ್ಕೆ ಹೋಗಿದ್ದಾರೆ. ಅಧಿಕಾರದಲ್ಲಿದ್ದಾಗ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ಟಿಪ್ಪು ಸುಲ್ತಾನ್ ಬಗ್ಗೆ ಹಾಡಿ ಹೊಗಳಿದ್ದರು. ಈಗ ಟಿಪ್ಪು ವಿರೋಧಿಯಾಗಿದ್ದಾರೆ ಅಷ್ಟೇ ಎಂದು ಪತ್ರದಲ್ಲಿ ತಿಳಿಸಿದ್ದರು.

Tags:    

Similar News